ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ 2024: ಕಾಂಗ್ರೆಸ್‌ಗೆ ಭ್ರಷ್ಟಾಚಾರವೇ ಆಕ್ಸಿಜನ್‌- ಪ್ರಧಾನಿ ಮೋದಿ

Published 16 ಮಾರ್ಚ್ 2024, 13:39 IST
Last Updated 16 ಮಾರ್ಚ್ 2024, 13:39 IST
ಅಕ್ಷರ ಗಾತ್ರ

ಕಲಬುರಗಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ‘ಕಲ್ಯಾಣ ಕರ್ನಾಟಕ’ದಲ್ಲಿ ಮತ್ತೆ ‘ಕಮಲ’ವನ್ನು ಅರಳಿಸಲು ಮತಬೇಟೆ ಆರಂಭಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರವಾದ ಕಲಬುರಗಿಯಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಬಿಜೆಪಿ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸುವ ಮೂಲಕ ಬಿಸಿಲೂರಿನಲ್ಲಿ ಚುನಾವಣೆಯ ಕಾವೇರಿಸಿದರು.

ಬಿಜೆಪಿ ರಾಜ್ಯ ಘಟಕ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ‘ಮತ್ತೊಮ್ಮೆ ಮೋದಿ ಸಂಕಲ್ಪ ಸಮಾವೇಶ’ದಲ್ಲಿ ಕಾಂಗ್ರೆಸ್‌ ವಿರುದ್ಧ ಗುಡುಗಿದ ಪ್ರಧಾನಿ, ‘ಕಲ್ಲಿದ್ದಿಲಿನ ಕಪ್ಪು ಬಣ್ಣವಾದರೂ ಬದಲಾಗಬಹುದು; ಆದರೆ, ಕಾಂಗ್ರೆಸ್‌ನಿಂದ ಭ್ರಷ್ಟಾಚಾರ ದೂರವಾಗಲು ಸಾಧ್ಯವಿಲ್ಲ. ಪರಿವಾರ ವಾದಿಯಾದ ಕಾಂಗ್ರೆಸ್‌ಗೆ ಭ್ರಷ್ಟಾಚಾರವೇ ಆಕ್ಸಿಜನ್‌ (ಆಮ್ಲಜನಕ). ಭ್ರಷ್ಟಾಚಾರ ರಹಿತವಾಗಿ ಅಧಿಕಾರದಲ್ಲಿದ್ದು ಒಂದು ಕ್ಷಣ ಉಸಿರು ತೆಗೆದುಕೊಳ್ಳಲೂ ಇವರಿಂದ ಆಗುವುದಿಲ್ಲ’ ಎಂದು ಟೀಕಿಸಿದರು.

‘ಎಷ್ಟೇ ಬಟ್ಟೆ ಬದಲಾಯಿಸಿದರೂ ಕೆಲವರ ನಿಯತ್ತು ಹೇಗೆ ಬದಲಾಗುವುದಿಲ್ಲವೋ ಕಾಂಗ್ರೆಸ್‌ನ ಸ್ಥಿತಿಯೂ ಅದೇ ಆಗಿದೆ. ಅಲ್ಪಾವಧಿಯಲ್ಲೇ ರಾಜ್ಯದ ಕಾಂಗ್ರೆಸ್‌ ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜನರ ಮನಸ್ಸಿನಲ್ಲಿ ಭಯ ಹುಟ್ಟಿಸಲಾಗುತ್ತಿದೆ. ಜನ ಇದರ ಚಿಂತೆಯಲ್ಲಿದ್ದರೆ, ಕಾಂಗ್ರೆಸ್‌ ಲೂಟಿ ಮಾಡುವುದರಲ್ಲೇ ವ್ಯಸ್ತವಾಗಿದೆ. ಇದರಿಂದಾಗಿ ಜನರ ಆಕ್ರೋಶ ಮಡುಗಟ್ಟುತ್ತಿದೆ’ ಎಂದು ಹೇಳಿದರು.

‘ಚುನಾವಣೆ ಮೊದಲು ದೊಡ್ಡ ದೊಡ್ಡ ಘೋಷಣೆ ಮಾಡುತ್ತಾರೆ. ನಂತರ ತಮ್ಮ ಜೇಬು ತುಂಬಿಸಿಕೊಳ್ಳುವುದೇ ಕಾಂಗ್ರೆಸ್‌ನ ಕೆಲಸವಾಗಿದೆ. ಕಾಂಗ್ರೆಸ್‌ ಕರ್ನಾಟಕವನ್ನು ಎಟಿಎಂ ಆಗಿಸಿಕೊಂಡಿದೆ. ಕರ್ನಾಟಕದ ಜನ ಪರಿಶ್ರಮದಿಂದ ಗಳಿಸಿದ ಹಣವನ್ನು ಪಕ್ಷ ಹಾಗೂ ಒಂದು ಕುಟುಂಬದ ಖರ್ಚು ಭರಿಸಲು ಇಲ್ಲಿಂದ ಪೂರೈಸಲಾಗುತ್ತಿದೆ. ಕರ್ನಾಟಕದ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಅರಾಜಕತೆ ಸೃಷ್ಟಿಯಾಗುತ್ತಿದೆ’ ಎಂದು ದೂರಿದರು.

‘ದೇಶದ ಜನ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಂಕಲ್ಪ ಮಾಡಿದ್ದಾರೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಾದರೂ ಕಾಂಗ್ರೆಸ್‌ ಗೆದ್ದು ತೋರಿಸಲಿ’ ಎಂದು ಸವಾಲು ಹಾಕಿದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ‘ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್‌ ಉಳಿಯುವುದಿಲ್ಲ’ ಎಂದು ಹೇಳಿದರು.

ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಭಗವಂತ ಖೂಬಾ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ಸಂಸದ ಉಮೇಶ ಜಾಧವ ಸೇರಿ ಬಿಜೆಪಿಯ ಹಲವು ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕಲಬುರಗಿ–ಬೀದರ್‌ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ಸಮಾವೇಶಕ್ಕೆ ಬಂದಿದ್ದರು.

ಮೋದಿಗೆ ಗ್ಯಾರಂಟಿ ಕೊಡಿ

‘ಕರ್ನಾಟಕದಲ್ಲಿ ಮತ್ತೊಮ್ಮೆ ತಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಕಾಂಗ್ರೆಸ್‌ಗೆ ಗೊತ್ತಿರುವುದರಿಂದಲೇ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಈಗಲೇ ಲೂಟಿ ಮಾಡಲು ಮುಂದಾಗಿದೆ. ಇದು ನಿಲ್ಲಬೇಕಾದರೆ ಸಂಸತ್ತಿನವರೆಗೂ ನಿಮ್ಮ ಧ್ವನಿ ಮುಟ್ಟಬೇಕು. ಸಂಸತ್ತಿನಲ್ಲಿ ನನಗೆ ರಕ್ಷಾ ಕವಚ ನಿರ್ಮಿಸಿಕೊಡಬೇಕು. ಆಗ ಮಾತ್ರ ಭ್ರಷ್ಟ ಕಾಂಗ್ರೆಸ್‌ ಮುಖಂಡರ ಮೇಲೆ ನಿಗಾ ಇಟ್ಟು ಜನರ ಹಣ ಲೂಟಿ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಲಿದೆ’ ಎಂದು ನರೇಂದ್ರ ಮೋದಿ ಹೇಳಿದರು.

‘ಹೆಚ್ಚಿನ ಸಂಖ್ಯೆಯ ಬಿಜೆಪಿ ಸಂಸದರು ಆಯ್ಕೆಯಾದರೆ ಮೋದಿಗೆ ಮಾಹಿತಿ ತಲುಪೀತು ಎಂಬ ಭಯದಿಂದ ಅಕ್ರಮ ಮಾಡುವ ಮೊದಲು ಏಳು ಬಾರಿ ಯೋಚಿಸುತ್ತಾರೆ. ನಿಮ್ಮೆಲ್ಲರಿಂದ ಒಂದು ಗ್ಯಾರಂಟಿಯನ್ನು ಬಯಸುತ್ತೇನೆ. ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್‌ ಖಾತೆ ತೆರೆಯದಂತೆ ಮಾಡುವುದಾಗಿ ನನಗೆ ಗ್ಯಾರಂಟಿ ಕೊಡಿ’ ಎಂದು ಮೋದಿ ಮನವಿ ಮಾಡಿದರು.

ಕನ್ನಡಿಗರಿಗಾಗಿ ‘ನಮೋ ಕನ್ನಡ’ ಖಾತೆ

‘ಕರ್ನಾಟಕದ ಸಂಸ್ಕೃತಿ ಹಾಗೂ ಕನ್ನಡ ಭಾಷೆಯ ಬಗ್ಗೆ ನನಗೆ ಅಪಾರವಾದ ಗೌರವವಿದೆ. ನನ್ನ ಮಾತುಗಳನ್ನು ಕನ್ನಡದಲ್ಲೇ ಕೇಳಿಸಿಕೊಳ್ಳಲು ಕನ್ನಡಿಗರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ‘ನಮೋ ಕನ್ನಡ’ ಖಾತೆಯನ್ನು ತೆರೆದಿದ್ದೇವೆ. ನಾನು ಮಾಡಿದ ಭಾಷಣಗಳ ವಿಡಿಯೊ ಎಐ ತಂತ್ರಜ್ಞಾನದಿಂದ ಕನ್ನಡಕ್ಕೆ ಅನುವಾದಗೊಳ್ಳಲಿದೆ. ಇನ್ನು ಮುಂದೆ ಮೋದಿ ನಿಮ್ಮ ಕಿಸೆಯಲ್ಲೇ ಇರುತ್ತಾರೆ’ ಎಂದು ನರೇಂದ್ರ ಮೋದಿ ಹೇಳಿದರು.

ಕನ್ನಡ ಭಾಷೆಗೆ ಗೌರವ ಸೂಚಿಸಲು ಮೊಬೈಲ್‌ನ ಟಾರ್ಚ್‌ ಬೆಳಗಿಸುವಂತೆ ಮೋದಿ ಸೂಚಿಸಿದಾಗ, ಕಾರ್ಯಕರ್ತರು ಮೊಬೈಲ್‌ ಬೆಳಕನ್ನು ಬೆಳಗಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT