ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ಕಾಂಗ್ರೆಸ್‌–ಬಿಜೆಪಿ ಮಹತ್ವದ ಸಭೆ ಇಂದು

Published 18 ಮಾರ್ಚ್ 2024, 23:13 IST
Last Updated 18 ಮಾರ್ಚ್ 2024, 23:13 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಕೇಂದ್ರ ಚುನಾವಣಾ ಸಮಿತಿ ಸಭೆಗಳು ಮಂಗಳವಾರ ನಡೆಯಲಿವೆ. 

ಕರ್ನಾಟಕದಿಂದ ಸ್ಪರ್ಧಿಸುವ 20 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಬಿಜೆಪಿ–ಜೆಡಿಎಸ್‌ ನಡುವಿನ ಸೀಟು ಹಂಚಿಕೆ ಅಂತಿಮಗೊಂಡಿಲ್ಲ. ಎರಡು ಕ್ಷೇತ್ರಗಳನ್ನಷ್ಟೇ ಜೆಡಿಎಸ್‌ಗೆ ಬಿಟ್ಟುಕೊಡುವುದಾಗಿ ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ. ಮಂಡ್ಯ, ಹಾಸನದ ಜತೆಗೆ ಕೋಲಾರವನ್ನೂ ಬಿಟ್ಟುಕೊಡಬೇಕು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ, ಸೀಟು ಹಂಚಿಕೆ ಅಂತಿಮವಾಗಿಲ್ಲ. ಜತೆಗೆ, ಉತ್ತರ ಕನ್ನಡ, ರಾಯಚೂರು, ಬೆಳಗಾವಿ ಹಾಗೂ ಚಿತ್ರದುರ್ಗ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದೆ.

ರಾಯಚೂರಿನಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಬದಲು ಮಾಜಿ ಸಂಸದ ಬಿ.ವಿ.ನಾಯಕ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ. ಬಿ.ವಿ.ನಾಯಕ ಅವರನ್ನು ಕಣಕ್ಕಿಳಿಸಿದರೆ ಅಮರೇಶ್ವರ ನಾಯಕ ಅವರು ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಬಹುದು. ಅಮರೇಶ್ವರ ನಾಯಕ ಅವರಿಗೆ ಟಿಕೆಟ್‌ ನೀಡಿದರೆ ಬಿ.ವಿ.ನಾಯಕ ಕಾಂಗ್ರೆಸ್‌ಗೆ ಹೋಗಬಹುದು ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡುತ್ತಿದೆ. ಹೀಗಾಗಿ, ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿಲ್ಲ ಎಂದು ಮೂಲಗಳು ತಿಳಿಸಿವೆ. 

ಉತ್ತರ ಕನ್ನಡ ಕ್ಷೇತ್ರದಲ್ಲಿ ಅನಂತಕುಮಾರ್ ಹೆಗಡೆ ಅವರಿಗೆ ಟಿಕೆಟ್‌ ನೀಡುವುದಕ್ಕೆ ವಿರೋಧ ಇದೆ. ಬಿಜೆಪಿ 400 ಸ್ಥಾನಗಳನ್ನು ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡಲು ಅನುಕೂಲವಾಗಲಿದೆ ಎಂಬ ಹೆಗಡೆ ಹೇಳಿಕೆ ಪಕ್ಷಕ್ಕೆ ಇಕ್ಕಟ್ಟನ್ನು ಉಂಟು ಮಾಡಿದೆ. ಅವರ ಹೇಳಿಕೆ ಬಗ್ಗೆ ವರಿಷ್ಠರು ಅಸಮಾಧಾನಗೊಂಡಿದ್ದಾರೆ. ಅವರಿಗೆ ಈ ಸಲ ಕೊನೆಯ ಅವಕಾಶ ನೀಡುವ ಕುರಿತು ಚರ್ಚೆಗಳು ನಡೆದಿವೆ. ಒಂದು ವೇಳೆ ಅವಕಾಶ ನಿರಾಕರಿಸಿದರೆ ಅನಂತಕುಮಾರ್ ಅವರು ಒಳ ಏಟು ಕೊಡಬಹುದು ಎಂಬ ಭೀತಿಯೂ ಕಾಡುತ್ತಿದೆ. ಕ್ಷೇತ್ರದಲ್ಲಿ ಸಮರ್ಥ ಪರ್ಯಾಯ ಅಭ್ಯರ್ಥಿಗಳ ಕೊರತೆಯೂ ಇದೆ ಎಂದು ಮೂಲಗಳು ತಿಳಿಸಿವೆ. 

ಚಿತ್ರದುರ್ಗದ ಸಂಸದರಾಗಿರುವ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರ ಕಾರ್ಯವೈಖರಿ ಬಗ್ಗೆ ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ಸಮಾಧಾನವಿಲ್ಲ. ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ವ್ಯಾಪಕವಾಗಿದೆ. ಮಾಜಿ ಸಚಿವ ಗೋವಿಂದ ಕಾರಜೋಳ, ನಿವೃತ್ತ ಐಎಎಸ್‌ ಅಧಿಕಾರಿ ಲಕ್ಷ್ಮಿನಾರಾಯಣ, ಹೊಳೆಲ್ಕೆರೆ ಶಾಸಕ ಎಂ. ಚಂದ್ರಪ್ಪ ಪುತ್ರ ರಘುನಂದನ್ ಅವರು ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ. 

ಚಿಕ್ಕಬಳ್ಳಾಪುರದಲ್ಲಿ ಹುರಿಯಾಳು ವಾಗಲು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಶಾಸಕ ಎಸ್‌.ಆರ್.ವಿಶ್ವನಾಥ್‌ ಪುತ್ರ ಅಲೋಕ್ ನಡುವೆ ಪೈಪೋಟಿ ಜೋರಾಗಿದೆ. ಟಿಕೆಟ್‌ ಸಿಗದಿದ್ದರೆ ಸುಧಾಕರ್ ಪಕ್ಷಾಂತರ ಮಾಡಬಹುದು ಎಂಬ ಅನುಮಾನ ಬಿಜೆಪಿ ನಾಯಕರಿಗೆ ಇದೆ. ಹೀಗಾಗಿ, ಮೊದಲ ಪಟ್ಟಿಯಲ್ಲಿ ಈ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಣೆ ಮಾಡಿರಲಿಲ್ಲ. 

ಮಂಗಳವಾರ ನಡೆಯುವ ಸಭೆಯಲ್ಲಿ ಜೆಡಿಎಸ್‌ ಜತೆಗಿನ ಸೀಟು ಹಂಚಿಕೆ, ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಸಂಭವ ಇದೆ. ರಾಜ್ಯದ ಹಿರಿಯ ನಾಯಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ವರಿಷ್ಠರು ತೀರ್ಮಾನ ತೆಗೆದು ಕೊಳ್ಳಲಿದ್ದಾರೆ ಎಂದು ಗೊತ್ತಾಗಿದೆ. 

15 ಕ್ಷೇತ್ರಗಳಿಗೆ ‘ಕೈ’ ಅಭ್ಯರ್ಥಿ ಅಂತಿಮ ಸಾಧ್ಯತೆ

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಹಾಗೂ ಕೇಂದ್ರ ಚುನಾವಣಾ ಸಮಿತಿ ಸಭೆ ಸಂಜೆ 4 ಗಂಟೆಗೆ ನಿಗದಿಯಾಗಿದೆ. ಚುನಾವಣಾ ಸಮಿತಿ ಸಭೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗಿಯಾಗಲಿದ್ದಾರೆ. ಪಕ್ಷವು ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಮಂಗಳವಾರದ ಸಭೆಯಲ್ಲಿ ಸುಮಾರು 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸುವ ಸಂಭವ ಇದೆ. 20 ಅಥವಾ 21ಕ್ಕೆ ಎರಡನೇ ಪಟ್ಟಿ ಬಿಡುಗಡೆಯಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT