ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಂಚ: ಸಬ್‌– ರಿಜಿಸ್ಟ್ರಾರ್‌ ಭಾಸ್ಕರ್‌ ಚೋವುರ್‌ಗೆ 3 ವರ್ಷ ಜೈಲು

Published 1 ಸೆಪ್ಟೆಂಬರ್ 2024, 20:39 IST
Last Updated 1 ಸೆಪ್ಟೆಂಬರ್ 2024, 20:39 IST
ಅಕ್ಷರ ಗಾತ್ರ

ಬೆಂಗಳೂರು: ನಿವೇಶನದ ಕ್ರಯಪತ್ರ ನೋಂದಣಿ ಮಾಡಿಕೊಡಲು ₹15,000 ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಸಿಕ್ಕಿಬಿದ್ದಿದ್ದ ಸಬ್‌–ರಿಜಿಸ್ಟ್ರಾರ್‌ ಭಾಸ್ಕರ್‌ ಸಿದ್ದರಾಮಪ್ಪ ಚೋವುರ್‌ ಎಂಬುವವರಿಗೆ ಹೆಚ್ಚುವರಿ ನಗರ ಸಿವಿಲ್‌ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜತೆಗೆ ₹5 ಲಕ್ಷ ದಂಡ ವಿಧಿಸಿದೆ.

ಭಾಸ್ಕರ್ ಅವರು 2019ರ ಏಪ್ರಿಲ್‌ನಲ್ಲಿ ಜಾಲ ಉಪ–ನೋಂದಣಿ ಕಚೇರಿಯಲ್ಲಿ, ಉಪ–ನೋಂದಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜಗದೀಶ್‌ ಎಚ್‌.ಎಂ. ಎಂಬುವವರು ತಾವು ಖರೀದಿಸಿದ್ದ ನಿವೇಶನದ ಕ್ರಯಪತ್ರ ನೋಂದಣಿ ಮಾಡಿಸಲು ಭಾಸ್ಕರ್ ಅವರ ಕಚೇರಿಯನ್ನು ಎಡತಾಕಿದ್ದರು.

‘ಕೆಲಸ ಮಾಡಿಕೊಡಲು ಭಾಸ್ಕರ್ ಅವರು ₹25,000 ಲಂಚ ನೀಡುವಂತೆ ಕ್ಯಾಲ್ಕ್ಯುಲೇಟರ್‌ನಲ್ಲಿ ಬರೆದು ತೋರಿಸಿದರು. ಅದು ಜಾಸ್ತಿಯಾಯಿತು ಎಂದಾಗ ₹20,000ಕ್ಕೆ ನಂತರ ₹15,000 ಲಂಚಕ್ಕೆ ಒಪ್ಪಿಗೆ ನೀಡಿದ್ದರು’ ಎಂದು ಜಗದೀಶ್ ಎಸಿಬಿಗೆ ದೂರು ನೀಡಿದ್ದರು.

ಎಸಿಬಿ ಪೊಲೀಸರ ಮಾರ್ಗದರ್ಶನದಂತೆ ಕಚೇರಿಗೆ ಹೋಗಿದ್ದ ಜಗದೀಶ್‌ ಅವರು, ಲಂಚಕ್ಕೆ ಸಂಬಂಧಿಸಿದ ಮಾತುಕತೆಯನ್ನು ರೆಕಾರ್ಡ್‌ ಮಾಡಿಕೊಂಡಿದ್ದರು. ಜತೆಗೆ ಲಂಚದ ಮೊತ್ತವನ್ನು ನೀಡಿದ್ದರು. ಅದೇ ವೇಳೆ ದಾಳಿ ನಡೆಸಿದ್ದ ಎಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಪೊಲೀಸರನ್ನು ಕಂಡ ಭಾಸ್ಕರ್ ಲಂಚದ ಹಣವನ್ನು ಕಿಟಕಿಯಿಂದಾಚೆಗೆ ಎಸೆದಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿತ್ತು. ನಂತರ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿತ್ತು. 

‘ತಾನು ಲಂಚದ ಹಣ ಮುಟ್ಟೇ ಇಲ್ಲ, ನನ್ನ ಟೇಬಲ್‌ನಲ್ಲಿ ಲಂಚದ ಹಣ ಸಿಕ್ಕಿಲ್ಲ’ ಎಂದು ಭಾಸ್ಕರ್ ನ್ಯಾಯಾಲಯದಲ್ಲಿ ವಾದಿಸಿದ್ದರು. ಆದರೆ ತನಿಖಾಧಿಕಾರಿಗಳು ತಾಂತ್ರಿಕ ಸಾಕ್ಷ್ಯಗಳನ್ನು ಮುಂದಿಟ್ಟಿದ್ದರು. ವಾದ ಪ್ರತಿವಾದವನ್ನು ಆಲಿಸಿದ್ದ ಸಿವಿಲ್‌ ನ್ಯಾಯಾಲಯವು ಭಾಸ್ಕರ್  ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು.

ಇದೇ ಶುಕ್ರವಾರ ಶಿಕ್ಷೆ ಪ್ರಕಟಿಸಿರುವ ನ್ಯಾಯಾಲಯವು, ₹5 ಲಕ್ಷ ದಂಡ ತೆರದಿದ್ದರೆ ಐದು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT