ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದುರಹಂಕಾರಿಗಳಿಗೆ ಮತದಾರರಿಂದ ಪಾಠ: ಕುಮಾರಸ್ವಾಮಿ ವಾಗ್ದಾಳಿ

Published 15 ಜೂನ್ 2024, 15:20 IST
Last Updated 15 ಜೂನ್ 2024, 15:20 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ‘ನಮ್ಮನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ದುರಹಂಕಾರದ ಮಾತುಗಳನ್ನಾಡುತ್ತಿದ್ದ ಡಿ.ಕೆ ಸಹೋದರರಿಗೆ ಲೋಕಸಭಾ ಚುನಾವಣೆಯಲ್ಲಿ ನೀವೆಲ್ಲಾ ಸರಿಯಾಗೇ ಪಾಠ ಕಲಿಸಿದ್ದೀರಿ. ಇದೀಗ ಅವರ ವಕ್ರದೃಷ್ಟಿ ಚನ್ನಪಟ್ಟಣದ ಮೇಲೆ ಬಿದ್ದಿದೆ. ದುರಹಂಕಾರಿಗಳು ಮತ್ತು ದೌರ್ಜನ್ಯ ಮಾಡುವವರ ಬಗ್ಗೆ ಎಚ್ಚರಿಕೆ ಇರಲಿ’ ಎಂದು ಶಾಸಕ ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭದಲ್ಲಿ ಡಿ.ಕೆ. ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕ್ಷೇತ್ರದ ಜನರನ್ನು ಬೆದರಿಸಿ ತಮ್ಮತ್ತ ಎಳೆದುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ಇಲ್ಲಿಗೆ ಮಂಡ್ಯದ ಗಾಳಿಯೂ ಸ್ವಲ್ಪ ಬೀಸುತ್ತಿದೆ. ಅಷ್ಟು ಸುಲಭವಾಗಿ ಇಲ್ಲಿನವರು ಬಗ್ಗುವವರಲ್ಲ ಎಂಬುದನ್ನು ನಾನು ಚಿಕ್ಕವನಿದ್ದಾಗಿನಿಂದಲೂ ನೋಡಿದ್ದೇನೆ’ ಎಂದರು.

‘ಕ್ಷೇತ್ರಕ್ಕೆ ಬರುವಾಗ ದಾರಿಯಲ್ಲಿ ಅಣ್ಣ–ತಮ್ಮನ ಭಾವಚಿತ್ರವಿರುವ ಬೋರ್ಡ್ ನೋಡಿದೆ. ಕ್ಷೇತ್ರವನ್ನೇನಾದರೂ ಅವರಿಗೆ ಬಿಟ್ಟರೆ, ನೀವು ತೊಂದರೆ ಅನುಭವಿಸುತ್ತೀರಿ. ಹಾಗಾಗಿ, ಅವರಿಂದ ಕ್ಷೇತ್ರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ, ನಿಮ್ಮೆಲ್ಲರದಾಗಿದೆ’ ಎಂದು ವೇದಿಕೆ ಮೇಲೆ ಕುಳಿತಿದ್ದ ಪಕ್ಷದ ಮುಖಂಡರತ್ತ ಕೈ ತೋರಿಸಿ ಹೇಳಿದರು.

‘ನಾನು ಹುಟ್ಟಿದ್ದು ಹಾಸನವಾದರೂ, ರಾಜಕೀಯ ಜನ್ಮ ನೀಡಿದ್ದು ರಾಮನಗರ. ನೀವೇ ಆಶೀರ್ವಾದ ಮಾಡಿ ಬೆಳೆಸಿದ್ದೀರಿ. ಹಾಗಾಗಿ, ನನ್ನ ಮೇಲೆ ಅನುಮಾನ ಪಡಬೇಡಿ. ನಾನು ಎಲ್ಲೇ ಇದ್ದರೂ ರಾಜಕೀಯ ಜನ್ಮಕೊಟ್ಟ ಜಿಲ್ಲೆಯನ್ನು ಮರೆಯಲಾರೆ. ಮಂಡ್ಯದ ಜನ ಮುಗ್ಧರು. ನಾನು ಅಲ್ಲಿಗೆ ಹೋದರೆ ಬದಲಾವಣೆಯಾಗುತ್ತದೆ ಎಂದು ಅಲ್ಲಿಗೆ ಕರೆಸಿ ಗೆಲ್ಲಿಸಿದ್ದಾರೆ. ನನ್ನ ಈ ಅಧಿಕಾರ ನಿಮ್ಮ ಸೇವೆಗೆ ಮುಡಿಪು’ ಎಂದರು.

‘ಸೋಮವಾರದೊಳಗೆ ನಾನು ರಾಜೀನಾಮೆ ಸಲ್ಲಿಸಬೇಕಿತ್ತು. ಹಾಗಾಗಿ, ಕೇಂದ್ರ ಸಚಿವನಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕ್ಷೇತ್ರದಲ್ಲಿ ಆಗಬೇಕಿದ್ದ ಕಾರ್ಯಗಳ ಭೂಮಿಪೂಜೆ ಮತ್ತು ಈಗಾಗಲೇ ಮುಗಿದಿರುವ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರ ಅನುಮತಿ ಪಡೆದು ಅವಸರದಲ್ಲಿ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಕಾರ್ಯಕ್ರಮ ಮುಗಿದ ಬಳಿಕ ಸಂಜೆ ರಾಜೀನಾಮೆ ಅಂಗೀಕರಿಸಿ ಎಂದು ಸ್ಪೀಕರ್‌ಗೂ ಮನವಿ ಮಾಡಿ ಇಲ್ಲಿಗೆ ಬಂದಿದ್ದೇನೆ’ ಎಂದು ತಿಳಿಸಿದರು.

ಶಾಸಕ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಸ್ಥಳೀಯ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT