ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲೂ ಮಷಿನ್ ಟೂಲ್ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು: ಎಂ.ಬಿ. ಪಾಟೀಲ

Published 11 ಜೂನ್ 2024, 16:01 IST
Last Updated 11 ಜೂನ್ 2024, 16:01 IST
ಅಕ್ಷರ ಗಾತ್ರ

ಬೆಂಗಳೂರು: ಮಷಿನ್ ಟೂಲ್ ವಲಯದ ಸಂಶೋಧನಾ ಅನ್ವಯಿಕತೆಗೆ ಮದ್ರಾಸ್ ಐಐಟಿಯಲ್ಲಿ ವಿಶೇಷ ಕೇಂದ್ರವಿದೆ. ಅದರ ವೆಚ್ಚದಲ್ಲಿ ಶೇ 80ರಷ್ಟನ್ನು ಸರ್ಕಾರ, ಶೇ 20ರಷ್ಟನ್ನು ಉದ್ಯಮ ವಲಯ ಭರಿಸುತ್ತಿವೆ. ಕರ್ನಾಟಕದಲ್ಲೂ ಇಂಥದೊಂದು ಕೇಂದ್ರವನ್ನು ಸ್ಥಾಪಿಸಬೇಕು ಎಂದು ಮಷಿನ್ ಟೂಲ್ಸ್ ವಲಯದ ವಿಷನ್ ಗ್ರೂಪಿನ ಉದ್ಯಮಿಗಳು ಸಲಹೆ ನೀಡಿದರು.

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ವಿಷನ್ ಗ್ರೂಪಿನ ಮೊದಲ ಸಭೆ‌ ಮಂಗಳವಾರ ನಡೆಯಿತು. ಉದ್ಯಮಿಗಳ ಸಲಹೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ‘ಮಷಿನ್ ಟೂಲ್ ವಲಯದ ಉತ್ಕರ್ಷಕ್ಕೆ ಅಗತ್ಯವಿರುವ ನೀಲನಕಾಶೆಯನ್ನು ಒದಗಿಸಬೇಕು’ ಎಂದು ಉದ್ಯಮಿಗಳಿಗೆ ಮನವಿ ಮಾಡಿದರು.

‘ಮಷಿನ್ ಟೂಲ್ಸ್ ತಯಾರಿಕೆಯಲ್ಲಿ ಪುಣೆ ಮತ್ತು ರಾಜಕೋಟ್ ಕೂಡ ಮುಂಚೂಣಿಯಲ್ಲಿವೆ. ರಾಜ್ಯದಲ್ಲಿ ಈ ವಲಯದಲ್ಲಿ ಹೂಡಿಕೆ ಆಕರ್ಷಣೆ, ಉದ್ಯೋಗ ಸೃಷ್ಟಿ ಮುಂತಾದವುಗಳ ಕಡೆ ಗಮನ ಕೊಡಬೇಕಾಗಿದೆ’ ಎಂದೂ ಉದ್ಯಮಿಗಳು ಸಲಹೆ ನೀಡಿದರು.

ಸಚಿವರು ಮಾತನಾಡಿ, ‘ಮಷಿನ್ ಟೂಲ್ ವಲಯವು ಜಾಗತಿಕ ಸ್ಪರ್ಧೆಯನ್ನು ಗಮನದಲ್ಲಿ ಇಟ್ಟುಕೊಂಡು ಸೂಕ್ಷ್ಮಾತಿಸೂಕ್ಷ್ಮ ಬಿಡಿಭಾಗಗಳನ್ನೂ ತಯಾರಿಸುವಂತಹ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಾಗಿದೆ. ಈ ಕುರಿತು ಉದ್ಯಮಿಗಳು ನೀಡುವ ರಚನಾತ್ಮಕ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ’ ಎಂದರು.

‘ಸದ್ಯಕ್ಕೆ ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಷಿನ್ ಟೂಲ್ಸ್ ಪಾರ್ಕ್ ಇದೆ. ಅದರ ಜೊತೆಗೆ ಇನ್ನೂ ಹಲವು ಉಪಕ್ರಮಗಳು ಆಗಬೇಕಾಗಿದೆ. ಅಲ್ಲದೆ, ನಮ್ಮ ಉದ್ಯಮಿಗಳು ತಯಾರಿಸುವ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಿ, ಗಮನ ಸೆಳೆಯುವಂತೆ ಮಾಡಬೇಕು. ಇದಕ್ಕೆ ಸರ್ಕಾರ ಬೆಂಬಲ ನೀಡಲಿದೆ. ವಿಷನ್ ಗ್ರೂಪ್ ಅನ್ನು ಕೇವಲ ಸಲಹಾ ಸಂಸ್ಥೆ ಎಂದು ಉದ್ಯಮಿಗಳು ಭಾವಿಸಬಾರದು’ ಎಂದರು.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಷನ್ ಗ್ರೂಪ್ ಉಪಾಧ್ಯಕ್ಷ ಸೆಲ್ವಕುಮಾರ್, ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಸದಸ್ಯರಾದ ಟಿಮ್ ಕೆನ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕೌಲ್, ವೈಜಿ-1 ವ್ಯವಸ್ಥಾಪಕ ನಿರ್ದೇಶಕ ಸಾರಂಗ್ ವಿ ಪಾರೀಖ್, ಇಂಡಿಯನ್ ಮಶೀನ್ ಟೂಲ್ಸ್ ಮ್ಯಾನಫ್ಯಾಕ್ಚರರ್ಸ್ ಅಸೋಸಿಯೇಶನ್ ಅಧ್ಯಕ್ಷ ರಾಜೇಂದ್ರ ಎಸ್ ರಾಜಮಾನೆ, ಹಿರಿಯ ಸಲಹೆಗಾರ ಸತೀಶಕುಮಾರ್, ಕೆಐಎಡಿಬಿ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT