ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಕಿಯೊಳಗೆ ‘ದಾರ್ಶನಿಕ’ ಡಾ.ಕೆ.ಮಧುಕರ್ ಶೆಟ್ಟಿ

Last Updated 30 ಡಿಸೆಂಬರ್ 2018, 2:33 IST
ಅಕ್ಷರ ಗಾತ್ರ

ಮಂಗಳೂರು: ಕರ್ನಾಟಕದ ಪೊಲೀಸ್‌ ಇಲಾಖೆಯೊಳಗೆ ‘ದಾರ್ಶನಿಕ’ನಂತೆ ಇದ್ದ ಹಿರಿಯ ಐಪಿಎಸ್‌ ಅಧಿಕಾರಿ ಡಾ.ಕೆ.ಮಧುಕರ್ ಶೆಟ್ಟಿ, 19 ವರ್ಷಗಳ ಸೇವಾ ಅವಧಿಯಲ್ಲಿ ಅಪೂರ್ವವಾದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ಅಶಕ್ತರಿಗೆ ರಕ್ಷಕನಾಗಿ, ಅಧೀನ ಅಧಿಕಾರಿಗಳು ಸಿಬ್ಬಂದಿಗೆ ಮಾತೃ ಹೃದಯಿಯಾಗಿ, ಭ್ರಷ್ಟರು ಮತ್ತು ಕಾನೂನು ಭಂಜಕರಿಗೆ ಸಿಂಹಸ್ವಪ್ನನಾಗಿದ್ದ ಅಧಿಕಾರಿ.

ದೆಹಲಿಯ ಪ್ರತಿಷ್ಠಿತ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಿದ ಮಧುಕರ್ ಶೆಟ್ಟಿ, 1999ರಲ್ಲಿ ಐಪಿಎಸ್‌ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ಕೆಲಸ ಮಾಡಿದ ಎಲ್ಲ ಹುದ್ದೆಗಳು, ಕಚೇರಿಗಳಲ್ಲಿ ಮಾದರಿಯೊಂದನ್ನು ರೂಪಿಸಿ ಹೊರನಡೆದವರು.

ಸಮಾಜಶಾಸ್ತ್ರ ಪ್ರಾಧ್ಯಾಪಕಿಯಾಗಿರುವ ಪತ್ನಿ ಸುವರ್ಣಾ ಕುರುಚೇರಿ ಮತ್ತು ಮಗಳು ಸಮ್ಯಾ ಅಮೆರಿಕದಲ್ಲೇ ನೆಲೆಸಿದ್ದರು. 2011ರಿಂದ 2016ರ ಅವಧಿಯಲ್ಲಿ ಶೈಕ್ಷಣಿಕ ರಜೆಯಲ್ಲಿದ್ದಾಗ ಕುಟುಂಬದೊಂದಿಗೆ ಇದ್ದರು.

ಪೊಲೀಸ್‌ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರೂ ಸರಳ ಜೀವನ ಶೈಲಿ ರೂಢಿಸಿಕೊಂಡಿದ್ದರು. ಮನೆಗೆಲಸಕ್ಕೆಂದು ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸುವ ‘ಆರ್ಡರ್ಲಿ’ ಪದ್ಧತಿಯನ್ನು ವಿರೋಧಿಸುತ್ತಿದ್ದವರು.

2011ರ ಜುಲೈ ತಿಂಗಳಿನಲ್ಲಿ ಅವರು ಉನ್ನತ ವ್ಯಾಸಂಗಕ್ಕೆಂದು ಅಮೆರಿಕಕ್ಕೆ ಹೊರಟು ನಿಂತಾಗ ಅವರ ಬಳಿ ಇದ್ದುದು ಹಳೆಯ ಬೆತ್ತದ ಒಂದು ಸೋಫಾ, ಒಂದೆರಡು ಪ್ಲಾಸ್ಟಿಕ್ ಕುರ್ಚಿ, ಪ್ಲಾಸ್ಟಿಕ್ ಚಾಪೆ, ಬಕೆಟ್‌, ಚೊಂಬು, ನೀರು ಕಾಯಿಸುವ ಕಾಯಿಲ್‌ ಹೀಟರ್‌, ಒಂದೆರಡು ವ್ಯಾಯಾಮ ಸಲಕರಣೆಗಳು ಮತ್ತು ಒಂದಷ್ಟು ಪುಸ್ತಕಗಳು. ಅವುಗಳನ್ನು ಇರಿಸಲು ಸ್ವಂತದ್ದಾದ ಜಾಗವೂ ಅವರ ಬಳಿ ಇರಲಿಲ್ಲ. ಸ್ನೇಹಿತರ ಮನೆಯಲ್ಲಿರಿಸಿ ಅಮೆರಿಕಕ್ಕೆ ತೆರಳಿದ್ದರು.

ಬಾಡಿಗೆ ಕಟ್ಟುತ್ತಿದ್ದರು!: ಮಧುಕರ್‌ ಅವರ ಬಳಿ ಸ್ವಂತ ವಾಹನ ಇರಲಿಲ್ಲ. ಪೊಲೀಸ್‌ ಇಲಾಖೆಯಿಂದ ಒದಗಿಸಿದ್ದ ವಾಹನವನ್ನು ಸ್ವಂತಕ್ಕೆ ಬಳಕೆ ಮಾಡಿದರೆ, ಪ್ರಯಾಣದ ವಿವರವನ್ನು ಚಾಚೂತಪ್ಪದೆ ಲಾಗ್‌ ಬುಕ್‌ನಲ್ಲಿ ದಾಖಲಿಸಿ ನಿಗದಿತ ಬಾಡಿಗೆಯನ್ನು ಮರುಪಾವತಿ ಮಾಡುತ್ತಿದ್ದರು.

ರಾಜ್ಯದ ಪೊಲೀಸ್‌ ಇಲಾಖೆಯ ಮೇಲೆ ಗಂಭೀರವಾದ ಪರಿಣಾಮ ಬೀರಿದ ನಕ್ಸಲೀಯರ ಶರಣಾಗತಿ ನೀತಿ, ಇತ್ತೀಚೆಗೆ ಚರ್ಚೆಯಲ್ಲಿರುವ ಪೊಲೀಸ್‌ ಸಿಬ್ಬಂದಿ ವೇತನ ಪರಿಷ್ಕರಣೆಗೆ ಸಂಬಂಧಿಸಿದ ವರದಿಗಳನ್ನು ಸಿದ್ಧಪಡಿಸುವುದರಲ್ಲಿ ಮಧುಕರ್ ಅವರ ಪಾತ್ರ ದೊಡ್ಡದು. ಯಾವ ವಿಚಾರದಲ್ಲೂ ಪ್ರಚಾರ ಬಯಸದ ಅವರು, ಪೊಲೀಸ್‌ ಇಲಾಖೆಯೊಳಗೆ ಸುಧಾರಣೆಗಾಗಿ ಸದಾ ಹಾತೊರೆಯುತ್ತಿದ್ದರು.

ಅಧಿಕಾರಿಯ ಸೇವೆಯ ಹಾದಿ...

ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿಯವರ ಮಗನಾದ ಮಧುಕರ ಶೆಟ್ಟಿ ಜನಿಸಿದ್ದು 1971ರ ಡಿಸೆಂಬರ್‌ 17ರಂದು. 1999ರಲ್ಲಿ ಐಪಿಎಸ್‌ಗೆ ಆಯ್ಕೆಯಾದ ಬಳಿಕ ಚನ್ನಪಟ್ಟಣ ಸಹಾಯಕ ಎಸ್‌ಪಿ, ಕಲಬುರ್ಗಿ ಉಪ ವಿಭಾಗದ ಡಿವೈಎಸ್‌ಪಿ, ಚಿಕ್ಕಮಗಳೂರು, ಚಾಮರಾಜನಗರ ಎಸ್‌ಪಿ, ವೀರಪ್ಪನ್‌ ವಿರುದ್ಧದ ವಿಶೇಷ ಕಾರ್ಯಾಚರಣೆ ‍ಪಡೆ, ಕೊಸೊವೊದಲ್ಲಿನ ವಿಶ್ವಸಂಸ್ಥೆಯ ಯುದ್ಧಾಪರಾಧಗಳ ತನಿಖಾ ಘಟಕ, ಬೆಂಗಳೂರು ನಗರ ಸಂಚಾರ ವಿಭಾಗದ ಡಿಸಿಪಿ, ರಾಜ್ಯಪಾಲರ ಎಡಿಸಿ, ಲೋಕಾಯುಕ್ತ ಎಸ್‌ಪಿ, ನೇಮಕಾತಿ ಮತ್ತು ತರಬೇತಿ ವಿಭಾಗದ ಡಿಐಜಿ, ಮೈಸೂರಿನ ಕರ್ನಾಟಕ ಪೊಲೀಸ್‌ ಅಕಾಡೆಮಿಯ ನಿರ್ದೇಶಕರ ಹುದ್ದೆಗಳಲ್ಲಿ ಕೆಲಸ ಮಾಡಿದ್ದ ಇವರು, 2017ರ ಮಾರ್ಚ್‌ನಿಂದ ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯ್‌ ಪಟೇಲ್‌ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕರ ಹುದ್ದೆಯಲ್ಲಿದ್ದರು.

ಆಂತರಿಕ ಭದ್ರತೆಯ ಆಳಕ್ಕಿಳಿದು...

ಯಾವುದೇ ಅಪರಾಧ ಕೃತ್ಯವಿದ್ದರೂ ಅದನ್ನು ಸಾಮಾಜಿಕ, ಆರ್ಥಿಕ ಆಯಾಮಗಳಲ್ಲಿ ವಿಶ್ಲೇಷಿಸುವುದು ಮಧುಕರ ಶೆಟ್ಟಿ ಅವರ ವಿಶೇಷವಾಗಿತ್ತು. ಆಂತರಿಕ ಭದ್ರತೆಯ ವಿಚಾರದಲ್ಲಿ ಇತ್ತೀಚೆಗೆ ಹೆಚ್ಚು ಅಧ್ಯಯನ ನಡೆಸುತ್ತಿದ್ದರು. ಅಮೆರಿಕದ ಅಲ್ಬಾನಿ ವಿಶ್ವವಿದ್ಯಾಲಯದ ರಾಕ್‌ಫೆಲ್ಲರ್‌ ಕಾಲೇಜ್‌ ಆಫ್‌ ಪಬ್ಲಿಕ್‌ ಅಫೇರ್ಸ್‌ ಅಂಡ್‌ ಪಾಲಿಸಿಯಲ್ಲಿ ಆಂತರಿಕ ಭದ್ರತೆಯ ವಿಷಯದಲ್ಲೇ ಅಧ್ಯಯನ ನಡೆಸಿ, ಪಿಎಚ್‌.ಡಿ ಪದವಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT