ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹದಾಯಿ: ವನ್ಯಜೀವಿ ಮಂಡಳಿ ಅನುಮತಿ ತಿರಸ್ಕರಿಸಿಲ್ಲ– ಪ್ರಲ್ಹಾದ ಜೋಶಿ

Published : 6 ಸೆಪ್ಟೆಂಬರ್ 2024, 19:53 IST
Last Updated : 6 ಸೆಪ್ಟೆಂಬರ್ 2024, 19:53 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ‘ರಾಜ್ಯ ಸರ್ಕಾರ ಸಲ್ಲಿಸಿದ ಮಹದಾಯಿ ಯೋಜನೆಯ ಪ್ರಸ್ತಾವವನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ ತಿರಸ್ಕರಿಸಿಲ್ಲ. ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಇರುವ ಕಾರಣ ಯಾವುದೇ ತೀರ್ಮಾನ ಕೈಗೊಳ್ಳದೇ ಮುಂದೂಡಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

‘ಕರ್ನಾಟಕ ಹಾಗೂ ಗೋವಾ ಸರ್ಕಾರ ನ್ಯಾಯಾಲಯದ ಮೊರೆ  ಹೋಗಿದ್ದು, ಅದು ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಸಭೆಯಲ್ಲಿ ಚರ್ಚಿಸುವುದು ಬೇಡ ಎಂದು ಅಧಿಕಾರಿಗಳು ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಮನವರಿಕೆ ಮಾಡಿದ್ದಾರೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಯನ್ನು ಪ್ರಸ್ತಾಪಿಸಿದ ಅವರು, ‘ವರದಿ ನೋಡಿದ ತಕ್ಷಣ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್‌ ಅವರೊಂದಿಗೆ ಚರ್ಚಿಸಿದ್ದೇನೆ. ತಮ್ಮ ರಾಜ್ಯದ ಚುನಾವಣೆಯಲ್ಲಿ ನಿರತರಾಗಿರುವ ಕಾರಣ ಅವರು ಮುಂದಿನ ದಿನಗಳಲ್ಲಿ ಚರ್ಚಿಸಿ, ಎಲ್ಲವನ್ನೂ ಸಮರ್ಪಕವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

‘ಈ ಸಭೆಯು ಜುಲೈ 31ರಂದು ನಡೆದಿತ್ತು. ಇದನ್ನು ರಾಜ್ಯ ಸರ್ಕಾರ ನಮ್ಮ ಗಮನಕ್ಕೆ ತಂದಿರಲಿಲ್ಲ. ತಂದಿದ್ದರೆ ನಾವು ಒತ್ತಡ ಹೇರಬಹುದಿತ್ತು. ಮಹದಾಯಿಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಏನೂ ಮಾಡಿಲ್ಲ. ಈವರೆಗೆ  ಕೇವಲ ಬಂಡೂರಾ ಪ್ರಸ್ತಾವನೆ ಮಾತ್ರ ಕಳಿಸಿದೆ. ಕಳಸಾ ಪ್ರಸ್ತಾವನೆ ಕಳಿಸಿಲ್ಲ. ಈ ಯೋಜನೆಗೆ ಪರಿಸರ ಅನುಮೋದನೆ ನಾವೇ (ಬಿಜೆಪಿ) ಕೊಡಿಸಿದ್ದೇವೆ. ನ್ಯಾಯಮಂಡಳಿಗೆ ನ್ಯಾಯಾಧೀಶರನ್ನು ನೇಮಿಸಿದ್ದಲ್ಲದೇ, ವರದಿ ನೀಡಲು ಸಮಯ ನಿಗದಿ ಮಾಡಿದ್ದೆವು. ಅಧಿಸೂಚನೆ ಹೊರಡಿಸಿದೆವು. ವಿಸ್ತ್ರತಾ ಯೋಜನಾ ವರದಿಗೆ (ಡಿಪಿಆರ್‌) ಅನುಮೋದನೆ ಕೂಡ ನೀಡಿದ್ದೇವೆ’ ಎಂದರು.

‘ದೆಹಲಿಗೆ  ನಿಯೋಗ ಕರೆದೊಯ್ಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಬಂದರೆ, ನಾವು ಸ್ವಾಗತಿಸುತ್ತೇವೆ. ಈವರೆಗೆ ಮಹದಾಯಿ ಕುರಿತು ಒಮ್ಮೆಯೂ ಚರ್ಚಿಸಿಲ್ಲ. ನಮಗೆ ಬದ್ಧತೆ  ಇದೆ. ನಾವು ಇದನ್ನು ಬಗೆಹರಿಸುತ್ತೇವೆ.  ಇದು ನ್ಯಾಯಾಲಯದಲ್ಲಿ ಇರುವುದರಿಂದ ಮುಂದೆ ಏನು ಮಾಡಬೇಕು ಎನ್ನುವ ಬಗ್ಗೆ ಚರ್ಚಿಸಿ, ತೀರ್ಮಾನಿಸಬೇಕಿದೆ’ ಎಂದರು.

‘ಮಹದಾಯಿ ಯೋಜನೆ: ದೆಹಲಿಗೆ ನಿಯೋಗ’

ಗದಗ: ‘ಮಹದಾಯಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ವನ್ಯಜೀವಿ ಮಂಡಳಿಯಿಂದ ಅಡ್ಡಿ ಆಗುತ್ತಿದೆ. ಇದರ ಬಗ್ಗೆ ಸರ್ವಪಕ್ಷಗಳ ಸಭೆ ಕರೆದು ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಒಯ್ಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ’ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು. ‘ಮಹದಾಯಿ ವಿಚಾರವಾಗಿ ಕಾನೂನು ತಜ್ಞರನ್ನು ಸಂಪರ್ಕಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಚಿಂತನೆ ನಡೆದಿದೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT