ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಮೈತ್ರಿ ಧರ್ಮ‘ ಪಾಲನೆ ‘ಕೈ’ ಮಂತ್ರ

ಸಿದ್ದರಾಮಯ್ಯ ಹೇಳಿಕೆ ಗೊಂದಲ: ಹೈಕಮಾಂಡ್‌ ತೀವ್ರ ಅತೃಪ್ತಿ
Last Updated 28 ಜೂನ್ 2018, 19:14 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆಯೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವ್ಯಕ್ತಪಡಿಸಿದ ಸಂದೇಹದಿಂದ ಉಂಟಾಗಿರುವ ಗೊಂದಲ ಪರಿಹಾರಕ್ಕೆ ಮುಂದಾಗಿರುವ ಕಾಂಗ್ರೆಸ್‌ ಹೈಕಮಾಂಡ್‌, ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುವಂತೆ ಸಚಿವರಿಗೆ ಖಡಕ್ ಎಚ್ಚರಿಕೆ ನೀಡಿದೆ.

ಸಿದ್ದರಾಮಯ್ಯ ನಡವಳಿಕೆಯ ವಿರುದ್ಧವೂ ಹೈಕಮಾಂಡ್‌ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ. ಅಲ್ಲದೆ, ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವಂತೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಚಿಸಿದ್ದು, ಶುಕ್ರವಾರ ಇಬ್ಬರು ನಾಯಕರು ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

‘ಸಿದ್ದರಾಮಯ್ಯಗೆ ಐದು ವರ್ಷ ನಿರಾತಂಕವಾಗಿ ಆಡಳಿತ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈಗ ಅವರೇ ಹೈಕಮಾಂಡ್‌ಗೆ ಅಗೌರವ ತೋರಿಸುತ್ತಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿ ತಾನಾಗಿಯೇ ನಿರ್ಮಾಣವಾಗಲಿದೆ’ ಎಂದು ಪಕ್ಷದ ಹಿರಿಯ ನಾಯಕರು ದೂರಿದ್ದಾರೆ.

ಆದರೆ, ಆಪ್ತರ ಜೊತೆಗಿನ ಮಾತುಕತೆ, ಅದರಿಂದ ಸೃಷ್ಟಿಯಾಗಿರುವ ಗೊಂದಲಗಳ ಕುರಿತು ಪ್ರತಿಕ್ರಿಯಿಸಲು ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಧರ್ಮಸ್ಥಳದ ಶಾಂತಿವನದಲ್ಲಿ 11 ದಿನಗಳ ಪ್ರಕೃತಿ ಚಿಕಿತ್ಸೆ ಮುಗಿಸಿ ಗುರುವಾರ ಬೆಂಗಳೂರಿಗೆ ಹೊರಟ ಅವರನ್ನು ಮಾಧ್ಯಮದವರು ಮಾತಿಗೆಳೆದಾಗ, ‘ನಾನು ಪ್ರಕೃತಿ ಚಿಕಿತ್ಸೆ ಪಡೆಯಲು ಬಂದಿದ್ದೇನೆ. ಚಿಕಿತ್ಸೆ ಮುಗಿಸಿ ಹೊರಟಿದ್ದೇನೆ. ಬೇರೆ ಯಾವುದೇ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ’ ಎಂದಷ್ಟೇ ಪ್ರತಿಕ್ರಿಯಿಸಿದರು.

ಮೈತ್ರಿ ಧರ್ಮ ಪಾಲನೆ: ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ಕಾಂಗ್ರೆಸ್‌ ಸಚಿವರ ತುರ್ತು ಸಭೆ ನಡೆಸಿದ ಪರಮೇಶ್ವರ, ‘ಮೈತ್ರಿ ಧರ್ಮ‘ ಕಾಪಾಡಿಕೊಂಡು ಹೋಗುವ ತುರ್ತು ಮತ್ತು ಪಾಲಿಸಿಕೊಂಡು ಹೋಗಲು ಹೈಕಮಾಂಡ್‌ ರೂಪಿಸಿದ ಸೂತ್ರಗಳ ಬಗ್ಗೆ ಪಾಠ ಮಾಡಿದ್ದಾರೆ. ಆ ಮೂಲಕ, ವರಿಷ್ಠರ ಸೂಚನೆಗಳನ್ನು ಯಾರೂ ಉಲ್ಲಂಘಿಸದಂತೆ ತಾಕೀತು ಮಾಡಿದ್ದಾರೆ.

‘ಸರ್ಕಾರ ಮತ್ತು ಪಕ್ಷದಲ್ಲಿ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಯಾವುದೇ ಹೇಳಿಕೆಗಳನ್ನು ನೀಡಬಾರದು. ಸಿದ್ದರಾಮಯ್ಯ ಅವರ ಹೇಳಿಕೆಗಳ ಬಗ್ಗೆ ಯಾರೂ ವಿಶ್ಲೇಷಣೆ ಮಾಡಬಾರದು’ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

‘ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಅನಿವಾರ್ಯ. ಹೀಗಾಗಿ, ಒಗ್ಗಟ್ಟು ಪ್ರದರ್ಶನ ಅಗತ್ಯ. ಇದು ಹೈಕಮಾಂಡ್‌ ನಿರ್ದೇಶನ. ಏನೇ ಸಮಸ್ಯೆ ಸೃಷ್ಟಿಯಾದರೂ ನನ್ನ ಗಮನಕ್ಕೆ ತನ್ನಿ. ಅದನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಪರಿಹರಿಸುತ್ತೇನೆ’ ಎಂದೂ ಸಚಿವರಿಗೆ ಅವರು ಭರವಸೆ ನೀಡಿದ್ದಾರೆ.

‘ರಾಷ್ಟ್ರದ ದೃಷ್ಟಿಯಿಂದ ಪಕ್ಷ ಈ ಮೈತ್ರಿ ಮಾಡಿಕೊಂಡಿದೆ.ಜೆಡಿಎಸ್‌ಗಿಂತ ಕಾಂಗ್ರೆಸ್‌ಗೆ ಇದು ಅನಿವಾರ್ಯ. ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಹೈಕಮಾಂಡ್‌ ಗಮನಿಸುತ್ತಿದೆ’ ಎಂದೂ ಹೇಳಿದ್ದಾರೆ.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪರಮೇಶ್ವರ, ‘ಎಐಸಿಸಿ ನೀಡಿದ ಸೂಚನೆಗಳನ್ನು ಸಚಿವರಿಗೆ ತಿಳಿಸಿದ್ದೇನೆ. ಮೈತ್ರಿ ಸರ್ಕಾರದಲ್ಲಿದ್ದೇವೆ. ತಮ್ಮ ಇಲಾಖೆಯಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ’ ಎಂದರು.

‘2019ರ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಿ, ಹೆಚ್ಚು ಸ್ಥಾನ ಗೆಲ್ಲಲು ರೂಪಿಸಬೇಕಾದ ರಣನೀತಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು, ಕ್ಷೇತ್ರಕ್ಕೆ ತೆರಳಿದಾಗ ಪಕ್ಷದ ಜಿಲ್ಲಾ ಕಚೇರಿಗೆ ಹೋಗಬೇಕು. ವಿಧಾನಸಭಾ ಕ್ಷೇತ್ರಗಳಿಗೆ ಹೋದಾಗ ಪಕ್ಷದ ಶಾಸಕರು, ಕಾರ್ಯಕರ್ತರ ಜೊತೆ ಮಾತನಾಡಬೇಕು ಎಂದು ಸಚಿವರಿಗೆ ತಿಳಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT