ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕರ್ ಬಾಂಬ್ ತಯಾರಿಸಲು ಅಫ್ಸರ್‌ ತರಬೇತಿ

ಮಂಗಳೂರು ಸ್ಫೋಟದ ಪ್ರಮುಖ ರೂವಾರಿ: ನಾಗಪುರ ಪೊಲೀಸರ ತನಿಖೆ
Published 30 ಜುಲೈ 2023, 23:55 IST
Last Updated 30 ಜುಲೈ 2023, 23:55 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಅಫ್ಸರ್‌ ಪಾಷಾ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಪ್ರಮುಖ ರೂವಾರಿಯೆಂಬ ಸಂಗತಿ ನಾಗಪುರ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.

‘ಲಷ್ಕರ್–ಎ–ತಯಬಾ’ ನಿಷೇಧಿತ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಅಫ್ಸರ್ ಪಾಷಾ, ಬಾಂಗ್ಲಾದೇಶದಲ್ಲಿ ಬಾಂಬ್ ತಯಾರಿಕೆ ತರಬೇತಿ ಪಡೆದಿದ್ದಾನೆ. ಜೈಲಿನಲ್ಲಿದ್ದುಕೊಂಡೇ ಈತ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದ. ಗೋಡೆ ಬರಹ ಪ್ರಕರಣದಲ್ಲಿ ಬಂಧಿತನಾಗಿದ್ದ ಮೊಹಮ್ಮದ್ ಶಾರೀಕ್‌, ಕೆಲದಿನ ಜೈಲಿನಲ್ಲಿದ್ದ. ಇದೇ ಸಂದರ್ಭದಲ್ಲಿ ಶಾರೀಕ್‌ಗೆ ಕುಕ್ಕರ್ ಬಾಂಬ್ ತಯಾರಿಸುವುದು ಹೇಗೆ? ಎಂಬುದನ್ನು ಅ‍ಫ್ಸರ್ ಪಾಷಾ ಹೇಳಿಕೊಟ್ಟಿದ್ದ’ ಎಂದು ನಾಗಪುರ ಪೊಲೀಸರು ತಿಳಿಸಿದ್ದಾರೆ.

‘ಮಂಗಳೂರು ಬಾಂಬ್‌ ಸ್ಫೋಟಕ್ಕೆ ಮುನ್ನ ಅಫ್ಸರ್ ಪಾಷಾ ಬ್ಯಾಂಕ್ ಖಾತೆಗೆ ₹ 5 ಲಕ್ಷ ಜಮೆ ಆಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಅಬ್ದುಲ್ ಜಲೀಲ್ ಎಂಬಾತನ ಮೂಲಕ ಹಣ ಜಮೆ ಆಗಿರುವುದು ತನಿಖೆಯಿಂದ ಗೊತ್ತಾಗಿದೆ. ಇದಾದ ನಂತರವೇ ಶಾರೀಕ್, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಲು ಸಜ್ಜಾಗಿದ್ದ’ ಎಂದು ಹೇಳಿದ್ದಾರೆ. ‘ಮಂಗಳೂರು ಬಾಂಬ್ ಸ್ಫೋಟದ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ. ಆದರೆ, ಅಫ್ಸರ್ ಪಾಷಾ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದುವರೆಗೂ ಲಭ್ಯವಾಗಿರಲಿಲ್ಲ. ನಿತಿನ್‌ ಗಡ್ಕರಿ ಅವರಿಗೆ ಕೊಲೆ ಬೆದರಿಕೆಯೊಡ್ಡಿರುವ ಪ್ರಕರಣದಲ್ಲಿ ವಿಚಾರಣೆ ನಡೆಸಿದಾಗ, ಅಫ್ಸರ್ ಪಾಷಾ ಮಾಹಿತಿ ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಎನ್‌ಐಎ, ಎಟಿಎಸ್ ಹಾಗೂ ಕೇಂದ್ರ ಗುಪ್ತದಳ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ’ ಎಂದು ನಾಗಪುರ ಪೊಲೀಸರು ತಿಳಿಸಿದ್ದಾರೆ.

ಚಿಂತಾಮಣಿಯ ಅಫ್ಸರ್ ಪಾಷಾ: ಕೋಲಾರ ಜಿಲ್ಲೆಯ ಚಿಂತಾಮಣಿಯ ಅಫ್ಸರ್ ಪಾಷಾ, 2012ರಲ್ಲಿ ಲಷ್ಕರ್–ಎ–ತಯಬಾ ಸಂಘಟನೆ ಸೇರಿದ್ದ. ಕೆಲದಿನ ಜಮ್ಮು–ಕಾಶ್ಮೀರದಲ್ಲಿದ್ದ. ಐಐಎಸ್ಸಿ ಮೇಲೆ ಉಗ್ರರು ದಾಳಿ ನಡೆಸಿದ್ದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದರು. ಕೆಲದಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಈತನನ್ನು, ಇತ್ತೀಚೆಗಷ್ಟೇ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಹಿಂಡಲಗಾ ಜೈಲಿನಲ್ಲಿದ್ದ ಜಯೇಶ್ ಪೂಜಾರಿ ಅಲಿಯಾಸ್ ಶಾಹೀರ್, ದಾವೂದ್ ಇಬ್ರಾಹಿಂ ಸಹಚರನೆಂದು ಹೇಳಿಕೊಂಡು ನಿತಿನ್ ಗಡ್ಕರಿ ಅವರ ಸಾರ್ವಜನಿಕರ ಸಂಪರ್ಕ ಅಧಿಕಾರಿಗೆ ವಿಡಿಯೊ ಕರೆ ಮಾಡಿದ್ದ. ₹ 100 ಕೋಟಿ ನೀಡದಿದ್ದರೆ, ನಿತಿನ್ ಗಡ್ಕರಿಯನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ನಾಗಪುರ ಪೊಲೀಸರು, ಹಿಂಡಲಗಾ ಜೈಲಿನಿಂದ ಅಫ್ಸರ್‌ ಪಾಷಾನನ್ನು ಇತ್ತೀಚೆಗೆ ಕಸ್ಟಡಿಗೆ ಪಡೆದು ಕರೆದೊಯ್ದಿದ್ದರು. ಅಫ್ಸರ್ ಪಾಷಾ, ಮುಸ್ಲಿಂನ ಕೆಲ ಯುವಕರನ್ನು ಲಷ್ಕರ್–ಎ–ತಯಬಾ ಸಂಘಟನೆಗೆ ನೇಮಿಸುತ್ತಿದ್ದ. ಈ ಪ್ರಕರಣದಲ್ಲೂ ಈತ ಸಿಕ್ಕಿಬಿದ್ದಿದ್ದ. ಬಾಂಗ್ಲಾದೇಶದ ಢಾಕಾದಲ್ಲಿ ಕೆಲವು ತಿಂಗಳು ನೆಲೆಸಿದ್ದ ಪಾಷಾ, ಅಲ್ಲಿಯೇ ಬಾಂಬ್ ತಯಾರಿಕೆ ಬಗ್ಗೆ ತರಬೇತಿ ಪಡೆದಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT