ಬೆಂಗಳೂರು: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ರಾಷ್ಟ್ರೀಯ ಅನ್ವೇಷಣಾ ಪ್ರತಿಷ್ಠಾನವು ಈಚೆಗೆ ಆಯೋಜಿಸಿದ್ದ, ‘ಇನ್‌ಸ್ಪೈರ್ ಮಾನಕ್ ಪ್ರಶಸ್ತಿ: ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆ’ಯಲ್ಲಿ ರಾಜ್ಯದ ಇಬ್ಬರು ವಿದ್ಯಾರ್ಥಿನಿಯರು ಪದಕ ಮತ್ತು ಪ್ರಶಸ್ತಿ ಗಳಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಕುಕ್ಕುಜೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಮೂಲ್ಯ ಹೆಗ್ಡೆ ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಪ್ರವಾಹಕ್ಕೂ ಮುನ್ನ ಆ ಬಗ್ಗೆ ಎಚ್ಚರಿಕೆ ನೀಡುವ ‘ಫ್ಲಡ್ ಡಿಟೆಕ್ಟಿಂಗ್ ಪೋಲ್’ ಮಾದರಿಯನ್ನು ಪ್ರದರ್ಶಿಸಿದ್ದರು. ಈ ಮಾದರಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕ ಲಭ್ಯವಾಗಿದೆ.
ಶೌಚಾಲಯದಲ್ಲಿ ಯಾರಾದರೂ ಕುಸಿದು ಬಿದ್ದರೆ ಆ ಬಗ್ಗೆ ಎಚ್ಚರಿಕೆ ನೀಡುವ ‘ಫಾಲ್ ಡಿಟೆಂಕ್ಷನ್ ಇನ್ ಟಾಯ್ಲೆಟ್ ಯೂಸಿಂಗ್ ಥರ್ಮಲ್ ಇಮೇಜಿಂಗ್’ ಮಾದರಿಯನ್ನು ಬೆಂಗಳೂರಿನ ವೈದೇಹಿ ಸ್ಕೂಲ್ ಆಫ್ ಎಕ್ಸಲೆನ್ಸ್‌ನ ವಿದ್ಯಾರ್ಥಿನಿ ಈಶ್ವರಿ ಮೋರೆ ಪ್ರದರ್ಶಿಸಿದ್ದರು. ಈ ಮಾದರಿಗೆ ‘ರಾಷ್ಟ್ರೀಯ ಪ್ರಶಸ್ತಿ’ ದೊರೆತಿದೆ.
ದೇಶದ ಎಲ್ಲ ರಾಜ್ಯಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿತ್ತು. ಕರ್ನಾಟಕದಿಂದ 39 ವಿದ್ಯಾರ್ಥಿಗಳು ಭಾಗಿಯಾಗಿದ್ದು, ಅತಿಹೆಚ್ಚು ವಿದ್ಯಾರ್ಥಿಗಳು ಭಾಗಿಯಾದ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.