ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

34 ಮಂದಿಗೆ ಉದ್ಯೋಗ ಕಲ್ಪಿಸಲು ಗೈಲ್ ಜತೆ ಮಾತುಕತೆ: ಎಂ.ಬಿ. ಪಾಟೀಲ

Published 13 ಫೆಬ್ರುವರಿ 2024, 15:59 IST
Last Updated 13 ಫೆಬ್ರುವರಿ 2024, 15:59 IST
ಅಕ್ಷರ ಗಾತ್ರ

ಬೆಂಗಳೂರು: ‘ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ (ಎಸ್ಇಜೆಡ್) ಸಕ್ರಿಯವಾಗಿದ್ದ ಜೆಬಿಎಫ್ ಕಂಪನಿಯು ಆರ್ಥಿಕ ತೊಂದರೆಗೆ ಸಿಲುಕಿದ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ 34 ಉದ್ಯೋಗಿಗಳಿಗೆ ‘ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್’ನಲ್ಲಿ (ಗೈಲ್) ಉದ್ಯೋಗ ನೀಡಬೇಕೆಂದು ಕೇಂದ್ರ ಸರ್ಕಾರದ ಜೊತೆ ನಿರಂತರವಾಗಿ ವ್ಯವಹರಿಸಲಾಗುತ್ತಿದೆ. ಗೈಲ್‌ನ ಹಿರಿಯ ಅಧಿಕಾರಿಗಳ ಜೊತೆ ಮತ್ತೊಮ್ಮೆ ಮಾತುಕತೆ ನಡೆಸಲಾಗುವುದು’ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಸಂಕಷ್ಟಕ್ಕೆ ಸಿಲುಕಿರುವವರು ಜೆಬಿಎಫ್ ಕಂಪನಿಗೆ ಜಮೀನು ನೀಡಿ, ನಿರ್ವಸಿತರಾಗಿರುವವರು. ಸರ್ಕಾರದ ನಿಯಮಗಳಂತೆ ಆ ಕಂಪನಿಯು ಇಂಥ 115 ಮಂದಿಗೆ ಉದ್ಯೋಗ ನೀಡಬೇಕಿತ್ತು. 2012ರಲ್ಲಿ 81 ಜನರನ್ನು ಉದ್ಯೋಗಕ್ಕೆ ತೆಗೆದುಕೊಂಡ ಕಂಪನಿ, 2017ರಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಬಳಿಕ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಪ್ರಕ್ರಿಯೆಯಡಿಯಲ್ಲಿ ಜೆಬಿಎಫ್ ಕಂಪನಿಯನ್ನು ಕೇಂದ್ರ ಸರ್ಕಾರ ‘ಗೈಲ್’ಗೆ ವಹಿಸಿದೆ. ಆ ಸಂಸ್ಥೆಯು ಈ ಕಾರ್ಮಿಕರಿಗೆ 2023ರ ಮಾರ್ಚ್‌ವರೆಗೆ ವೇತನ ನೀಡಿದೆ. ಆದರೆ, ನಂತರ ಅದು ಲಿಖಿತ ಮತ್ತು ಮೌಖಿಕ ಪರೀಕ್ಷೆಗಳನ್ನು ನಡೆಸಿ ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಿತು. ಇದರಿಂದ ಸಮಸ್ಯೆ ಸೃಷ್ಟಿಯಾಗಿದೆ’ ಎಂದು ವಿವರಿಸಿದರು.

‘ಕೈಗಾರಿಕಾ ಉದ್ದೇಶಗಳಿಗಾಗಿ ಜಮೀನು ಕಳೆದುಕೊಂಡ ಕುಟುಂಬಗಳ ಅರ್ಹರಿಗೆ ಉದ್ಯೋಗ ನೀಡುವುದು ಕಡ್ಡಾಯವಾಗಿದೆ. ಈಗ ಸಂಕಷ್ಟಕ್ಕೆ ಸಿಲುಕಿರುವವರ ಬದುಕನ್ನು ಪರಿಗಣಿಸಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಮಂಗಳೂರು ಎಸ್ಇಜೆಡ್ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಹಲವು ಸಭೆಗಳನ್ನು ನಡೆಸಲಾಗಿದೆ. 2023ರ ನ. 7ರಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೂಡ ಅವರನ್ನೆಲ್ಲ ಉದ್ಯೋಗದಲ್ಲಿ ಮುಂದುವರಿಸಲು ಅನುಮೋದನೆ ಪಡೆದುಕೊಳ್ಳುವಂತೆ ಜಿಎಂಪಿಎಲ್ ಸಂಸ್ಥೆಯ ಸಿಇಒ ಅವರಿಗೆ ಸೂಚಿಸಲಾಗಿದೆ’ ಎಂದರು.

‘ಮಂಗಳೂರು ತಾಲ್ಲೂಕಿನ ಇಪಿಎಪಿ 2ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ 104.28 ಎಕರೆ ಪ್ರದೇಶದಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದ 50:50 ಅನುಪಾತದಲ್ಲಿ ನಡೆಯುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಸಚಿವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT