ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೋವಿ ಅಭಿವೃದ್ಧಿ ನಿಗಮದಿಂದ ಲೆಕ್ಕ ಪರಿಶೋಧನೆ l ₹42 ಕೋಟಿ ಅಕ್ರಮ ಬಹಿರಂಗ?

Published : 5 ಆಗಸ್ಟ್ 2024, 23:31 IST
Last Updated : 5 ಆಗಸ್ಟ್ 2024, 23:31 IST
ಫಾಲೋ ಮಾಡಿ
Comments

ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ 2021–22ನೇ ಸಾಲಿನ ಸಂಪೂರ್ಣ ಅನುದಾನವನ್ನು ಸಾಂಸ್ಥಿಕ ಕೋಟಾದಡಿ ಸಚಿವರು ಮತ್ತು ನಿಗಮದ ಅಧ್ಯಕ್ಷರು ಹಾಗೂ ವ್ಯವಸ್ಥಾ‍ಪಕ ನಿರ್ದೇಶಕರು ಜಿಲ್ಲೆಗಳಿಗೆ ಹಂಚಿಕೆ ಮಾಡಿದ ಕಾರಣ ಸುಮಾರು ₹42.58 ಕೋಟಿ ಅಕ್ರಮ ನಡೆದಿದೆ ಎಂದು
ಸ್ವತಂತ್ರ ಲೆಕ್ಕ ಪರಿಶೋಧಕರ ವರದಿ ಬಿಚ್ಚಿಟ್ಟಿದೆ.

ನಿಗಮದಲ್ಲಿ ನಡೆದ ಅವ್ಯವಹಾರ ದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಮತ್ತು ಸಿಐಡಿ ತನಿಖೆ ನಡೆಸುತ್ತಿರುವ ಮಧ್ಯೆಯೇ, ನಿಗಮವು ಸ್ವತಂತ್ರ ಲೆಕ್ಕ ಪರಿಶೋಧನಾ ಕಂಪನಿಯಿಂದ ಲೆಕ್ಕ ಪರಿಶೋಧನೆ ನಡೆಸಿದೆ. ಅನುದಾನ ಹರಿವಿನ ಸಂಪೂರ್ಣ ವಿವರಗಳನ್ನೂ ಈ  ಲೆಕ್ಕ ಪರಿಶೋಧನಾ ವರದಿಯು ಬಹಿರಂಗ ಪಡಿಸಿದೆ. ಈ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಕೋಟ ಶ್ರೀನಿವಾಸ ಪೂಜಾರಿ ಸಮಾಜಕಲ್ಯಾಣ ಸಚಿವರಾಗಿದ್ದರು.

ನಿಗಮಕ್ಕೆ ಪ್ರತಿವರ್ಷ ನಿಗದಿ ಪಡಿಸುವ ಅನುದಾನದಲ್ಲಿ ಶೇ 80ರಷ್ಟನ್ನು ವಿಧಾನಸಭಾ ಕ್ಷೇತ್ರವಾರು ಶಾಸಕರ ಅಧ್ಯಕ್ಷತೆಯ ಸಮಿತಿ ಮೂಲಕ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಉಳಿದಂತೆ, ವಿವಿಧ ಯೋಜನೆಗಳಿಗೆ ಸಾಂಸ್ಥಿಕ ಕೋಟಾದಲ್ಲಿ ಸರ್ಕಾರದ ಕೋಟಾದಡಿ (ಸಮಾಜ ಕಲ್ಯಾಣ ಸಚಿವರು) ಶೇ 15, ಮಂಡಳಿಯ ಕೋಟಾದಡಿ (ನಿಗಮದ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ) ಶೇ 5ರಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡಿ ಸೌಲಭ್ಯ ಒದಗಿಸಲಾಗುತ್ತದೆ. ಈ ನಿಯಮವನ್ನು ಉಲ್ಲಂಘಿಸಿ 2021–22ನೇ ಸಾಲಿನಲ್ಲಿ ಜಿಲ್ಲೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ವರದಿಯಲ್ಲಿದೆ. ಈ ಹಣ ಹಂಚಿಕೆಯ ಕುರಿತು ಸಕ್ಷಮ ಪ್ರಾಧಿಕಾರವು ಸಮಗ್ರವಾದ ತನಿಖೆ ನಡೆಸಿದರೆ, ಜಿಲ್ಲಾಮಟ್ಟದಲ್ಲಿ ನಡೆದಿರಬಹುದಾದ ಅವ್ಯವಹಾರವನ್ನು ಪತ್ತೆ ಮಾಡಲು ಸಾಧ್ಯ ಎಂದೂ ವರದಿಯಲ್ಲಿದೆ.

ಈ ಅವ್ಯವಹಾರಗಳಲ್ಲಿ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಆರ್‌. ಲೀಲಾವತಿ, ಪ್ರಧಾನ ವ್ಯವಸ್ಥಾಪಕರಾಗಿದ್ದ ಬಿ.ಕೆ. ನಾಗರಾಜಪ್ಪ, ಹಿಂದಿನ ಕಚೇರಿ ಅಧೀಕ್ಷಕ ಪಿ.ಡಿ. ಸುಬ್ಬಪ್ಪ, ವಿಜಯಪುರ ಜಿಲ್ಲಾ ಅಭಿವೃದ್ಧಿ ಅಧಿಕಾರಿಯಾಗಿದ್ದ ಶಂಕರ ಜು. ದೇವರಮನಿ, ಕಲಬುರಗಿ ಜಿಲ್ಲಾ ಅಭಿವೃದ್ಧಿ ಅಧಿಕಾರಿಯಾಗಿದ್ದ ಕೆ.ಎಸ್‌. ನಾಗಮೂರ್ತಿ ಆರೋಪಿಗಳು.

ಆರೋಪಿಗಳ ಪೈಕಿ, ಲೀಲಾವತಿ ಅವರನ್ನು ಸಚಿವಾಲಯದ ವಿಶೇಷ ಕಾರ್ಯದರ್ಶಿ ಹುದ್ದೆಗೆ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ವಾಪಸ್‌ ಕಳುಹಿಸಲಾಗಿತ್ತು. ಅವರು ಮತ್ತು ಪಿ.ಡಿ. ಸುಬ್ಬಪ್ಪ ವಯೋನಿವೃತ್ತಿಯಾಗಿದ್ದಾರೆ.

ಉಳಿದವರನ್ನು ನಿಗಮದ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ನಾಗರಾಜಪ್ಪ ಅವರು 2022ರ ಜುಲೈ 1ರಂದು ನಿಗಮದ ಕೆಲಸದಿಂದ ಬಿಡುಗಡೆ ಹೊಂದಿದ್ದು, ಕರ್ನಾಟಕ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಆಯೋಗಕ್ಕೆ ವರ್ಗಾವಣೆಯಾಗಿದ್ದಾರೆ. ಶಂಕರ ಜು. ದೇವರಮನಿ ಅವರು ವಿಜಯಪುರ ಜಿಲ್ಲೆಯ ಮಿಣಜಗಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಕೆ.ಎಸ್‌. ನಾಗಮೂರ್ತಿ ಕಲಬುರಗಿ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಯಾದಗಿರಿಯ ಯೆಸ್‌ ಬ್ಯಾಂಕ್‌ನ ಶಾಖೆಯಲ್ಲಿ ನಾಗಮೂರ್ತಿ ಖಾತೆ ತೆರೆದು ₹11.80 ಕೋಟಿ ಅನುದಾನವನ್ನು 118 ಫಲಾನುಭವಿಗಳ ಪೈಕಿ 20 ಫಲಾನುಭವಿಗಳ ಹಣವನ್ನು ಆರ್‌ಟಿಜಿಎಸ್‌ ಮೂಲಕ ಸೋಮನಾಥೇಶ್ವರ ಎಂಟರ್‌ಪ್ರೈಸಸ್‌ ಖಾತೆಗೆ ವರ್ಗಾವಣೆ ಮಾಡಿದ್ದರು. ಅನ್ಯ ಕರ್ತವ್ಯದ ಮೇಲೆ ನಿಗಮದ ವಿಜಯಪುರ ಜಿಲ್ಲಾ ಅಭಿವೃದ್ಧಿ ಅಧಿಕಾರಿಯಾಗಿ ಪ್ರಭಾರ ಹುದ್ದೆಯಲ್ಲಿದ್ದ ಶಂಕರ ಜೂ ದೇವರಮನಿ ಅವರು ವಿಜಯಪುರದ ಯೆಸ್‌ ಬ್ಯಾಂಕಿನಲ್ಲಿ ಖಾತೆ ತೆರೆದು ₹8.15 ಕೋಟಿ ಅನುದಾನವನ್ನು 53 ಫಲಾನುಭವಿಗಳ ಖಾತೆಗೆ ‌ವರ್ಗಾವಣೆ ಮಾಡಿದ್ದರು. 

ಬೆಂಗಳೂರು ನಗರ ಜಿಲ್ಲೆಯಲ್ಲಿ ವಿವಿಧ ಬ್ಯಾಂಕ್‌ಗಳ ಖಾತೆಯಿಂದ ಒಟ್ಟು ₹11.65 ಕೋಟಿಯನ್ನು ‌ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಇದೇ ರೀತಿ ಹಣ ಬಿಡುಗಡೆ ಮಾಡಲಾಗಿತ್ತು. ರಾಯಚೂರು ಜಿಲ್ಲೆಯಲ್ಲಿ ಉದ್ಯಮಶೀಲತಾ ಯೋಜನೆಯಡಿ 100 ಫಲಾನುಭವಿಗಳಿಗೆ ತಲಾ ₹1 ಲಕ್ಷದಂತೆ ₹1 ಕೋಟಿಯನ್ನು ನೀಡದೆ ವಿವಿದ್ದೋಶ ಸಹಕಾರ ಸಂಘಕ್ಕೆ ಪಾವತಿಸಲಾಗಿತ್ತು. ಹೀಗೆ, ನಿಗಮದಲ್ಲಿ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳಲ್ಲಿ ಹಣ ದುರ್ಬಳಕೆ ಆಗಿರುವುದು ಪತ್ತೆಯಾಗಿದೆ.

ವರದಿಯಲ್ಲಿರುವ ಅಂಶಗಳು

  • ವೈದ್ಯಕೀಯ ಕಿಟ್‌ಗಳ ಪೂರೈಕೆಗೆ ಶ್ರೀ ಸಾಯಿ ಥೆರಪ್ಯೂಟಿಕ್ಸ್‌ (ಇಂಡಿಯಾ) ಪ್ರೈವೆಟ್‌ ಲಿ. ಸಂಸ್ಥೆಗೆ ಪಾವತಿಸಿದ ₹1.78 ಕೋಟಿ ಮುಂಗಡ ಹಣದ ದಾಖಲೆಗಳೇ ಇಲ್ಲ.

  • ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನೀಡಿದ್ದ ₹10.95 ಕೋಟಿಯ ವೆಚ್ಚದ ವಿವರಗಳಿಲ್ಲ.

  • ಬೆಂಗಳೂರು ನಗರ ಜಿಲ್ಲೆಗೆ ನೀಡಿದ್ದ ₹27.13 ಕೋಟಿ ಖರ್ಚು ವೆಚ್ಚದ ವಿವರಗಳಿಲ್ಲ.

  • ವಿಜಯಪುರ ಜಿಲ್ಲೆಗೆ ನೀಡಿದ್ದ ₹2.70 ಕೋಟಿ ವೆಚ್ಚದ ವಿವರವೂ ಲಭ್ಯವಿಲ್ಲ

ಭೋವಿ ನಿಗಮ– ಹಣಕಾಸು ವಿವರ (₹ ಕೋಟಿಗಳಲ್ಲಿ)

‘ನಯಾ ಪೈಸೆ ವಶಪಡಿಸಿಕೊಂಡಿಲ್ಲ’
ಭೋವಿ ಅಭಿವೃದ್ಧಿ ನಿಗಮದಲ್ಲಿ 2021–22ನೇ ಸಾಲಿನಲ್ಲಿ ಒಟ್ಟು ₹88.74 ಕೋಟಿ ಮೊತ್ತದ ಅವ್ಯವಹಾರ ಆಗಿದೆ ಎಂದು ಆಂತರಿಕ ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವ ಮಾಹಿತಿಯನ್ನು ಸಮಾಜ ಕಲ್ಯಾಣ ಇಲಾಖೆ ನೀಡಿದೆ. ಆದರೆ, ದುರ್ಬಳಕೆ ಆಗಿರುವ ಮೊತ್ತದಲ್ಲಿ ನಯಾ ಪೈಸೆ ಈವರೆಗೆ ವಶಪಡಿಸಿಕೊಂಡಿಲ್ಲ ಎಂದೂ ಇಲಾಖೆ ಹೇಳಿದೆ. ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾದ ನೂರಾರು ಕೋಟಿ ಹಣ ಈ ರೀತಿ ಭ್ರಷ್ಟರ ಪಾಲಾಗುವುದನ್ನು ತಡೆಯಲು ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಎಚ್‌.ಪಿ. ಸುಧಾಮ್‌ ದಾಸ್‌, ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT