ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ಲಣ ಮೂಡಿಸಿದ ಯೋಗೇಶ್ವರ್ ಬಾವನ ಕೊಲೆ

Published 4 ಡಿಸೆಂಬರ್ 2023, 19:30 IST
Last Updated 4 ಡಿಸೆಂಬರ್ 2023, 19:30 IST
ಅಕ್ಷರ ಗಾತ್ರ

ಚನ್ನಪಟ್ಟಣ (ರಾಮನಗರ): ಜಿಲ್ಲೆಯ ಪ್ರಭಾವಿ ರಾಜಕಾರಣಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರ ಬಾವ ಮಹದೇವಯ್ಯ ಪಿ. ಅವರ ನಾಪತ್ತೆ ಪ್ರಕರಣವು, ಅಪಹರಣದ ತಿರುವು ಪಡೆದುಕೊಂಡು ಇದೀಗ ಕೊಲೆಯಲ್ಲಿ ಅಂತ್ಯಗೊಂಡಿದೆ.

ಮಹದೇವಯ್ಯ ಅವರು ಕ್ಷೇಮವಾಗಿ ಬರಲಿದ್ದಾರೆ ಎಂಬ ವಿಶ್ವಾಸದೊಂದಿಗೆ ಮೂರು ದಿನಗಳಿಂದ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಅವರ ಕುಟುಂಬದ ನಿರೀಕ್ಷೆ ಹುಸಿಯಾಗಿದೆ. ಬರ ಸಿಡಿಲಿನಂತೆ ಬಂದ ಸಾವಿನ ಸುದ್ದಿಯಿಂದಾಗಿ ಕುಟುಂಬದವರು, ಸಂಬಂಧಿಕರು ಹಾಗೂ ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ. 

ಆಗಂತುಕರು ಪ್ರಭಾವಿ ರಾಜಕಾರಣಿಯ ತಂಗಿಯ ಗಂಡನನ್ನು, ಅವರ ಮನೆಯಿಂದಲೇ ಅಪಹರಿಸಿ ಕೊಲೆ ಮಾಡಿರುವುದು ಜಿಲ್ಲೆಯಲ್ಲಿ ತಲ್ಲಣ ಮೂಡಿಸಿದೆ. ಕೊಲೆಗೆ ಕಾರಣವೇನಿರಬಹುದು? ಕೃತ್ಯದ ಹಿಂದೆ ಯಾರಿದ್ದಾರೆ? ಪರಿಚಿತರೇ ಅಥವಾ ಹೊರಗಿನವರೇ? ದುಡ್ಡಿಗಾಗಿ ನಡೆದಿದೆಯೇ ಅಥವಾ ರಿಯಲ್ ಎಸ್ಟೇಟ್ ವ್ಯವಹಾರ ಕಾರಣವೇ...? 69 ವರ್ಷದ ಮಹದೇವಯ್ಯ ಅವರ ಕೊಲೆ ಕುರಿತು ಹೀಗೆ ಹತ್ತು ಹಲವು ಆಲೋಚನೆಗಳು ಜನರ ಮನಸ್ಸಿನಲ್ಲಿ ಮೂಡತೊಡಗಿವೆ.

ತೋಟದಲ್ಲಿ ಮನೆ: ಮಹದೇವಯ್ಯ ಅವರು ಪತ್ನಿ ಹಾಗೂ ಇಬ್ಬರು ಪುತ್ರರೊಂದಿಗೆ ಬೆಂಗಳೂರಿನ ಗಿರಿನಗರದಲ್ಲಿ ನೆಲೆಸಿದ್ದರು. ಜೊತೆಗೆ ತಮ್ಮೂರು ವಡ್ಡರದೊಡ್ಡಿಯಲ್ಲಿರುವ ಐದು ಎಕರೆ ಜಾಗದಲ್ಲಿ ತೋಟ ಅಭಿವೃದ್ಧಿಪಡಿಸಿಕೊಂಡು, ಅಲ್ಲಿಯೇ ತಂಗಲು ಮನೆಯೊಂದನ್ನು ನಿರ್ಮಿಸಿಕೊಂಡಿದ್ದರು. ತೆಂಗು, ಸಪೋಟಾ ಬೆಳೆದಿದ್ದ ತೋಟದಲ್ಲಿ ಹಸು ಹಾಗೂ ಕುರಿಗಳನ್ನು ಸಹ ಸಾಕಿದ್ದರು.

ಇತ್ತೀಚೆಗೆ ಬೆಂಗಳೂರಿನ ಮನೆಯ ನವೀಕರಣ ಕಾರ್ಯ ಕೈಗೆತ್ತಿಕೊಂಡಿದ್ದರಿಂದ, ಕುಟುಂಬದವರು ಅಲ್ಲಿಯೇ ಬೇರೆಡೆಗೆ ಸ್ಥಳಾಂತರವಾಗಿದ್ದರು. ತೋಟದ ಬಗ್ಗೆ ಅತೀವ ಪ್ರೀತಿ ಇಟ್ಟಕೊಂಡಿದ್ದ ಮಹದೇವಯ್ಯ ಅವರು, ತಾವು ತೋಟದ ಮನೆಯಲ್ಲಿ ಹೆಚ್ಚಾಗಿ ಇರುತ್ತಿದ್ದರು. ಓಡಾಡುವುದಕ್ಕೆ ಕಾರು ಹೊಂದಿದ್ದ ಅವರು, ಆಗಾಗ ಬೆಂಗಳೂರಿಗೆ ಹೋಗಿ ಕುಟುಂಬದವರನ್ನು ಮಾತನಾಡಿಸಿಕೊಂಡು ಬರುತ್ತಿದ್ದರು.

ಚನ್ನಪಟ್ಟಣ ತಾಲ್ಲೂಕಿನ ವಡ್ಡರದೊಡ್ಡಿಯಲ್ಲಿರುವ ಮಹದೇವಯ್ಯ ಪಿ. ಅವರ ತೋಟದ ಮನೆ
ಚನ್ನಪಟ್ಟಣ ತಾಲ್ಲೂಕಿನ ವಡ್ಡರದೊಡ್ಡಿಯಲ್ಲಿರುವ ಮಹದೇವಯ್ಯ ಪಿ. ಅವರ ತೋಟದ ಮನೆ

ತಮ್ಮ ಪಾಡಿಗೆ ತಾವಿದ್ದರು: ‘ಮಹದೇವಯ್ಯ ಅವರು ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತಿದ್ದರು. ಯೋಗೇಶ್ವರ್ ಅವರು ರಾಜಕಾರಣಕ್ಕೆ ಬಂದು ನೆಲೆಯೂರುವುದಕ್ಕೆ ಮುಂಚೆಯೇ, ಅವರ ಮೊದಲ ತಂಗಿ ಪುಷ್ಪಾ ಅವರನ್ನು ಮಹದೇವಯ್ಯ ರು ಮದುವೆಯಾಗಿದ್ದರು. ಪದವಿ ಓದಿದ್ದ ಅವರು ಕೃಷಿ ಸೇರಿದಂತೆ ಕೆಲ ವ್ಯವಹಾರಗಳನ್ನು ಮಾಡುತ್ತಿದ್ದರು’ ಎಂದು ಸಂಬಂಧಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯೋಗೇಶ್ವರ್ ಅವರು ಮೊದಲ ಸಲ ಶಾಸಕರಾಗಿ ಆಯ್ಕೆಯಾದ ನಂತರ, ತಮ್ಮ ಬಾವ ವಹಿಸುತ್ತಿದ್ದ ಕೆಲಸಗಳನ್ನು ಮಾಡುತ್ತಿದ್ದರು. ಯೋಗೇಶ್ವರ್ ಅವರ ಮೆಗಾಸಿಟಿ ಡೆವಲಪರ್ಸ್ ನಿರ್ದೇಶಕರೂ ಆಗಿದ್ದ ಮಹದೇವಯ್ಯ, ನಂತರ ತಮ್ಮ ಬಾವನ ಭೂ ವ್ಯವಹಾರಗಳನ್ನು ಸಹ ನೋಡಿಕೊಳ್ಳುತ್ತಿದ್ದರು. ಬೆಂಗಳೂರಿನದ್ದರೂ, ವ್ಯವಹಾರ ನಿಮಿತ್ತ ಚನ್ನಪಟ್ಟಣಕ್ಕೆ ಬಂದು ಹೋಗುವುದು ಸಾಮಾನ್ಯವಾಗಿತ್ತು. ರಾಜಕೀಯ,‌ ಸಂಘ–ಸಂಸ್ಥೆ, ಸಂಘಟನೆಗಳಲ್ಲಿ ಕಾಣಿಸಿಕೊಳ್ಳದ ಅವರು, ತೆರೆಮರೆಯಲ್ಲೇ ತಮ್ಮ ಬಾವನ ಪರವಾಗಿ ಕೆಲಸ ಮಾಡುತ್ತಿದ್ದರು’ ಎಂದು ಹೇಳಿದರು.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಪತ್ತೆಯಾಗಿದ್ದ ಮಹದೇವಯ್ಯ ಅವರ ಕಾರು
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಪತ್ತೆಯಾಗಿದ್ದ ಮಹದೇವಯ್ಯ ಅವರ ಕಾರು

‘ಸಜ್ಜನರಾಗಿದ್ದ ಮಹದೇವಯ್ಯ ಅವರು, ಯೋಗೇಶ್ವರ್ ಅವರ ಬಾವನಾಗಿದ್ದರೂ ಅತಿರೇಕದ ವರ್ತನೆ ತೋರಿ ಅವರಿವರ ಬಳಿ ದ್ವೇಷ ಕಟ್ಟಿಕೊಂಡವರಲ್ಲ. ವ್ಯವಹಾರದ ವಿಷಯದಲ್ಲೂ ಹಾಗೆಯೇ ಇದ್ದರು. ಅಂತಹವರು ಈ ರೀತಿಯ ದುರಂತ ಅಂತ್ಯ ಕಂಡಿರುವುದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಕಣ್ಣೀರು ಹಾಕಿದರು.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರಕ್ಕೆ ಭೇಟಿ ನೀಡಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ತಮ್ಮ ಬಾವನ ಪ್ರಕರಣ ಕುರಿತು ಅಲ್ಲಿದ್ದವರ ಜೊತೆ ಮಾಹಿತಿ ಪಡೆದರು
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರಕ್ಕೆ ಭೇಟಿ ನೀಡಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ತಮ್ಮ ಬಾವನ ಪ್ರಕರಣ ಕುರಿತು ಅಲ್ಲಿದ್ದವರ ಜೊತೆ ಮಾಹಿತಿ ಪಡೆದರು
ಕರೆ ಸ್ವೀಕರಿಸಿದ್ದ ಹಂತಕರು ತಮ್ಮ ತಂದೆ ಕಾಣೆಯಾಗಿದ್ದಾರೆ ಎಂದು ಡಿ. 2ರಂದು ಮಧ್ಯಾಹ್ನ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದ ಪುತ್ರ ಪ್ರಶಾಂತ್ ಸಿ.ಎಂ ಅವರು ಅದೇ ದಿನ ಸಂಜೆ ತಮ್ಮ ತಂದೆ ಮೊಬೈಲ್ ಸಂಖ್ಯೆಗೆ 4 ಗಂಟೆ ಸುಮಾರಿಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ್ದ ಹಂತಕರು ‘ಯಾರು ನೀವು? ಯಾರು ಬೇಕು?’ ಎಂದು ಪಾನಮತ್ತ ಸ್ಥಿತಿಯಲ್ಲಿ ಮಾತನಾಡಿದ್ದರು. ಕೆಲವು ಸಲ ಕರೆ ಸ್ವೀಕರಿಸಿದ್ದ ಹಂತಕರು ಯಾವುದಕ್ಕೂ ಸರಿಯಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ನಂತರ ಅವರ ಮೊಬೈಲ್ ಸ್ವಿಚ್‌ ಆಫ್ ಆಗಿತ್ತು. ಆಗ ತಂದೆಯನ್ನು ಯಾರೊ ಅಪಹರಿಸಿದ್ದಾರೆ ಎಂದು ಖಚಿತಪಡಿಸಿಕೊಂಡ ಪುತ್ರ ಮಾರನೆಯೇ ದಿನ ತಂದೆಯನ್ನು ಯಾರೊ ಅಪಹರಿಸಿದ್ದಾರೆ ಎಂದು ದೂರು ಕೊಟ್ಟಿದ್ದರು. ಮಾದೇಶ್ವದ ಬೆಟ್ಟದ ಜಾಡು ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಮಹದೇವಯ್ಯ ಅವರ ಮೊಬೈಲ್ ಫೋನ್‌ನ ಟವರ್ ಲೋಕೇಷನ್ ಆಧರಿಸಿ ಮಾದೇಶ್ವರ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವ ಅನುಮಾನದ ಮೇರೆಗೆ ಡಿ. 3ರಿಂದ ಹುಡುಕಾಟ ಆರಂಭಿಸಿದ್ದರು. ಇದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು 4 ವಿಶೇಷ ತಂಡಗಳನ್ನು ರಚಿಸಿದ್ದರು. ಅವರ ಕಾರಿನ ನಂಬರ್ ಅನ್ನು ಸಹ ಆ ಭಾಗದ ಪೊಲೀಸರೊಂದಿಗೆ ಹಂಚಿಕೊಂಡಿದ್ದರು. ಆಗ ರಾತ್ರಿ ಹನೂರು ತಾಲ್ಲೂಕಿನ ರಾಮಾಪುರದ ಆಸ್ಪತ್ರೆಯ ಬಳಿ ಮಹದೇವಯ್ಯ ಅವರ ಕಾರನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಕಾರಿನ ಬಾಗಿಲು ಮತ್ತು ಡಿಕ್ಕಿ ತೆರೆದಾಗ ರಕ್ತದ ಕಲೆ ಇದ್ದಿದ್ದನ್ನು ಕಂಡ ಪೊಲೀಸರು ಅಪಹರಣಕಾರರು ಮಹದೇವಯ್ಯ ಅವರನ್ನು ಕೊಲೆ ಮಾಡಿರುವ ಶಂಕೆ ಮೇರೆಗೆ ಸುತ್ತಮುತ್ತ ಹುಡುಕಾಟ ಆರಂಭಿಸಿದ್ದರು. ತೋಟದಲ್ಲೇ ಅಂತ್ಯಕ್ರಿಯೆ ಮಹದೇವಯ್ಯ ಅವರ ಶವವನ್ನು ಅರಣ್ಯ ಪ್ರದೇಶದಲ್ಲಿ ಪತ್ತೆ ಹಚ್ಚಿದ ಪೊಲೀಸರು ರಾತ್ರಿಯೇ ಶವವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ಕುಟುಂಬದವರಿಗೆ ಶವ ಹಸ್ತಾಂತರಿಲಿದ್ದಾರೆ. ವಡ್ಡರದೊಡ್ಡಿಯಲ್ಲಿರುವ ತೋಟದಲ್ಲಿ ಮಹದೇವಯ್ಯ ಅವರ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬದವರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನಾವಳಿ

  • ಡಿ. 1: ಬೆಂಗಳೂರಿನಲ್ಲಿ ಕುಟುಂಬದವರನ್ನು ಮಾತನಾಡಿಸಿಕೊಂಡು ಸಂಜೆ ಚಕ್ಕೆರೆ ಬಳಿಯ ವಡ್ಡರದೊಡ್ಡಿ ಗ್ರಾಮದಲ್ಲಿರುವ ತೋಟದ ಮನೆಗೆ ಹೋಗುವುದಾಗಿ ಹೇಳಿ ಹೊರಟ್ಟಿದ್ದ ಮಹದೇವಯ್ಯ.

  • ಡಿ. 2: ಮಧ್ಯಾಹ್ನ 1.30ರ ಸುಮಾರಿಗೆ ತೋಟದ ಮನೆಗೆ ಮಹದೇವಯ್ಯ ಅವರ ಸ್ನೇಹಿತ ಮಾದೇಗೌಡ ಭೇಟಿ. ತೆರೆದಿದ್ದ ಮನೆಯ ಬಾಗಿಲು ಕಾಣದ ಮಹದೇವಯ್ಯ ಮತ್ತು ಕಾರು ಕುರಿತು ಅವರ ಕುಟುಂಬದವರಿಗೆ ಮಾಹಿತಿ ನೀಡಿದ್ದ ಮಾದೇಗೌಡ. ಸ್ಥಳದಲ್ಲಿ ಹುಡುಕಾಡಿ ಗ್ರಾಮಸ್ಥರು ಹಾಗೂ ಸಂಬಂಧಿಕರನ್ನು ವಿಚಾರಿಸಿದರೂ ಪತ್ತೆಯಾಗದ ಮಹದೇವಯ್ಯ. ತಂದೆ ಕಾಣೆಯಾಗಿರುವ ಕುರಿತು ಮಧ್ಯಾಹ್ನ 2.15ಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದ ಪುತ್ರ ಪ್ರಶಾಂತ್ ಸಿ.ಎಂ.

  • ಡಿ. 3: ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಹಾಗೂ ಕಾರು ಸಹ ಪತ್ತೆಯಾಗದ ಹಿನ್ನೆಲೆಯಲ್ಲಿ ತಂದೆಯನ್ನು ಕಾರು ಸಮೇತ ಅಪಹರಿಸಲಾಗಿದೆ ಎಂದು ಮತ್ತೆ ದೂರು ಕೊಟ್ಟಿದ್ದ ಪುತ್ರ. ಅಪಹರಣ ಕುರಿತು ಎಫ್‌ಐಆರ್‌ ದಾಖಲು. ಪತ್ತೆಗಾಗಿ ಮೂರು ವಿಶೇಷ ತಂಡ ರಚನೆ. ಅಂದೇ ತಡರಾತ್ರಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆ ಬಳಿ ಮಹದೇವಯ್ಯ ಅವರ ಕಾರು (ಮಾರುತಿ ಬ್ರೆಝ್ಝಾ) ಪತ್ತೆ.

  • ಡಿ. 4: ಬೆಳಿಗ್ಗೆ ಸ್ಥಳಕ್ಕೆ ದೌಡಾಯಿಸಿದ ಚನ್ನಪಟ್ಟಣ ಪೊಲೀಸರು ಹಾಗೂ ಮಹದೇವಯ್ಯ ಸಂಬಂಧಿಕರಾದ ಯೋಗೇಶ್ವರ್ ಮತ್ತಿತರರು ದೌಡು. ಸ್ಥಳಕ್ಕೆ ಶ್ವಾನದಳ ಬೆರಳಚ್ಚು ತಜ್ಞರು ಭೇಟಿ. ಕಾರಿನ ಡಿಕ್ಕಿ ಮತ್ತು ಗಾಜಿನಲ್ಲಿ ರಕ್ತದ ಕಲೆ ಪತ್ತೆ. ಕೊಲೆ ಶಂಕೆ ಮೇರೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ. ದೊಡ್ಡಗುಂಡು ಮುನೇಶ್ವರ ದೇವಾಲಯ ಬಳಿಯ ಅರಣ್ಯದ ಕಂದಕದಲ್ಲಿ ಮಧ್ಯಾಹ್ನ ಶವ ಪತ್ತೆ. ಸಂಜೆಯ ಹೊತ್ತಿಗೆ ಶವವನ್ನು ಹೊರತೆಗೆದು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಿದ ಪೊಲೀಸರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT