ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಷತ್‌ನಲ್ಲಿ ಬಲಾಬಲ ಬದಲು: ಹೊರಟ್ಟಿ ಸ್ಥಾನಕ್ಕೆ ಕುತ್ತು?

Published 8 ಜೂನ್ 2024, 0:09 IST
Last Updated 8 ಜೂನ್ 2024, 0:09 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಪರಿಷತ್‌ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಪರಿಷತ್‌ನಲ್ಲಿ ರಾಜಕೀಯ ಪಕ್ಷಗಳ ಬಲಾಬಲ ಏರುಪೇರಾಗಿದೆ. ಆದರೆ, ಸಭಾಪತಿ ಬಸವರಾಜ ಹೊರಟ್ಟಿ ಅವರ ಸ್ಥಾನಕ್ಕೆ ಸದ್ಯಕ್ಕಂತೂ ಯಾವುದೇ ಭಂಗವಿಲ್ಲ.

ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ 11 ಕ್ಷೇತ್ರಗಳು, ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳ 6 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅತ್ಯಧಿಕ ಸ್ಥಾನಗಳು ಅಂದರೆ ಒಟ್ಟು 17 ರಲ್ಲಿ 10 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದೆ. ಬಿಜೆಪಿಗೆ ನಾಲ್ಕು ಮತ್ತು ಜೆಡಿಎಸ್‌ಗೆ 3 ಸ್ಥಾನಗಳು ಸಿಕ್ಕಿವೆ.

ಇದರಿಂದಾಗಿ ಕಾಂಗ್ರೆಸ್‌ ಬಲ 34ಕ್ಕೆ ಏರಿದೆ. ಬಿಜೆಪಿ ಸಂಖ್ಯೆ 30ಕ್ಕೆ ಇಳಿದಿದೆ. ಜೆಡಿಎಸ್‌ 8, ಸಭಾಪತಿ 1, ಪಕ್ಷೇತರ 1 ಇದೆ. ಜಗದೀಶ ಶೆಟ್ಟರ್ ರಾಜೀನಾಮೆಯಿಂದ 1 ಸ್ಥಾನ ಖಾಲಿ ಇದ್ದು, ಅದಕ್ಕೆ ಶೀಘ್ರವೇ ಚುನಾವಣೆ ನಡೆಯಲಿದ್ದು, ಬಸವನಗೌಡ ಬಾದರ್ಲಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಪ್ರಕಟಿಸಿದೆ. ಅವರು ಅವಿರೋಧವಾಗಿ ಆಯ್ಕೆ ಆಗಲಿದ್ದಾರೆ.

ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ–ಚಿಕ್ಕಮಗಳೂರು ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿರುವುದರಿಂದ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದರಿಂದ ಇನ್ನೂ ಒಂದು ಸ್ಥಾನ ತೆರವಾಗಲಿದೆ. ಕೋಟ ಅವರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆ ಆಗಿದ್ದರು.

ಸಭಾಪತಿ ಬಸವರಾಜ ಹೊರಟ್ಟಿ ಅವರು 2022ರಲ್ಲಿ ಬಿಜೆಪಿ ಸೇರಿದರು. ಆ ಬಳಿಕ ನಡೆದ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಬಿಜೆಪಿ ಮತ್ತು ಜೆಡಿಎಸ್‌ ನೆರವಿನಿಂದ ಸಭಾಪತಿ ಸ್ಥಾನಕ್ಕೇರಿದರು. ಸದನದಲ್ಲಿ ಪಕ್ಷಗಳ ಬಲಾಬಲ ಬದಲಾವಣೆ ಆಗಿದೆ. ಸದ್ಯಕ್ಕೆ ಅವರ ಹುದ್ದೆಗೆ ಯಾವುದೇ ಬಾಧಕವಿಲ್ಲ. ಬಿಜೆಪಿ, ಜೆಡಿಎಸ್‌ ಮತ್ತು ಪಕ್ಷೇತರರಾದ ಲಖನ್ ಜಾರಕಿಹೊಳಿ ಸೇರಿ 40 ಸಂಖ್ಯೆಯ ಬಲವನ್ನು ಹೊಂದಿವೆ. ಆದರೆ, ವರ್ಷಾಂತ್ಯದಲ್ಲಿ ಕಾಂಗ್ರೆಸ್‌ ಬಲ ಇನ್ನಷ್ಟು ಹೆಚ್ಚಾಗಲಿದೆ. ಆಗ ಕಾಂಗ್ರೆಸ್‌ ಪಕ್ಷ ಅವರನ್ನು ಹುದ್ದೆಯಿಂದ ಇಳಿಸುತ್ತದೆಯೇ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಸ್ನೇಹ ಹೊಂದಿರುವ ಹೊರಟ್ಟಿ ಮುಂದುವರಿಯುತ್ತಾರೆಯೇ ಎಂಬ ಚರ್ಚೆಯೂ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT