ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ ಚುನಾವಣೆ: ಸೂರಜ್ ರೇವಣ್ಣಗೆ ಸಂತಸದ ಸುದ್ದಿ

Last Updated 6 ಡಿಸೆಂಬರ್ 2021, 8:29 IST
ಅಕ್ಷರ ಗಾತ್ರ

ಬೆಂಗಳೂರು:‘ಹಾಸನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ವಿಧಾನ್ ಪರಿಷತ್ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆರ್. ಸೂರಜ್ ಅವರ ನಾಮಪತ್ರ ಕಾನೂನು ಬಾಹಿರವಾಗಿದೆ’ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಸಂಬಂಧ ಹಾಸನ ಜಿಲ್ಲೆ ದಂಡಿಗಾನ ಹೋಬಳಿಯ ಕುಂದೂರು ಗ್ರಾಮದ ಕೆ.ಎಲ್.ಹರೀಶ್‌ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಚುನಾವಾಣಾ ವೇಳಾಪಟ್ಟಿ ಘೋಷಣೆಯಾದ ಮೇಲೆ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ನಿಮ್ಮ ಆಕ್ಷೇಪಣೆ ಏನಾದರೂ ಅದನ್ನು ಚುನಾವಣಾ ತಕರಾರು ಅರ್ಜಿ ಸಲ್ಲಿಸಿ ಪರಿಹಾರ ಪಡೆಯಿರಿ" ಎಂದು ನ್ಯಾಯಪೀಠ ಆದೇಶಿಸಿದೆ.

ಆಕ್ಷೇಪಣೆ ಏನಿತ್ತು?

‘ಆರ್.ಸೂರಜ್‌ ಅವರು ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿರುವ ನಮೂನೆ 26ರ ಅಡಿಯಲ್ಲಿನ ಪ್ರಮಾಣ ಪತ್ರದಲ್ಲಿ ಅನೇಕ ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ. ಆದ್ದರಿಂದ, ಇವರ ನಾಮಪತ್ರ ತಿರಸ್ಕೃರಿಸಬೇಕು ಅಥವಾ ಆಯುಕ್ತರಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದರು.

‘ಸೂರಜ್‌ ಅವರು ಪ್ರಮಾಣ ಪತ್ರದಲ್ಲಿ ತಮ್ಮ ಹಾಗೂ ಕುಟುಂಬದ ಸದಸ್ಯರ ಆಸ್ತಿ ವಿವರ, ನಗದು, ಸಾಲ ಹಾಗೂ ಆರ್ಥಿಕ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ. ಇವುಗಳಿಗೆ ಅನ್ವಯವಾಗುವ ಕಾಲಂಗಳಲ್ಲಿ ಇದು ಅನ್ವಯಿಸುವುದಿಲ್ಲ’ ಎಂದು ವಿವರಿಸಿದ್ದರು.

‘ಸಾಕಷ್ಟು ಅಪೂರ್ಣ ಮಾಹಿತಿಗಳನ್ನು ಒಳಗೊಂಡ ಇವರ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ಯಾಂತ್ರಿಕವಾಗಿ ಸ್ವೀಕರಿಸಿದ್ದಾರೆ. ಇದು ಜನತಾ ಪ್ರತಿನಿಧಿ ಕಾಯ್ದೆ–1957ರ ಕಲಂ 33 (ಎ) ಮತ್ತು ಸಂವಿಧಾನದ 19ನೇ ವಿಧಿಯ ಉಲ್ಲಂಘನೆಯಾಗಿದೆ. ಅಂತೆಯೇ ಚುನಾವಣಾ ನಡವಳಿಕೆಗಳ ನಿಯಮ 4 (ಎ)ಕ್ಕೆ ವ್ಯತಿರಿಕ್ತವಾವಾಗಿದೆ. ಹಾಗಾಗಿ, ಇದೇ 10ರಂದು ನಡೆಯಲಿರುವ ಹಾಸನ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ತಡೆ ನೀಡಬೇಕು ಇಲ್ಲವೇ, ಅರ್ಜಿದಾರರು ನವೆಂಬರ್ 25ರಂದು ಸಲ್ಲಿಸಿರುವ ಮನವಿ ಪತ್ರ ಪರಿಗಣಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದ್ದರು.

‘ಸೂರಜ್‌ ಅವರ ನಾಮಪತ್ರವನ್ನು ಅಂಗೀಕರಿಸಿ ಜಿಲ್ಲಾ ಚುನಾವಣಾಧಿಕಾರಿ ನವೆಂಬರ್ 24ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು. ಈ ಸಂಬಂಧ ಅರ್ಜಿದಾರರು ನವೆಂಬರ್ 25ರಂದು ಸಲ್ಲಿಸಿರುವ ಮನವಿ ಪತ್ರವನ್ನು ಪರಿಗಣಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು. ಅದರಂತೆ, ಸೂರಜ್ ರೇವಣ್ಣ ಅವರ ಉಮೇದುವಾರಿಕೆಯನ್ನು ಅನರ್ಹ ಎಂದು ಘೋಷಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

‘ಮದುವೆಯ ವಿವರ ಮುಚ್ಚಿಟ್ಟಿದ್ದಾರೆ’

‘ಸೂರಜ್‌ 2017ರ ಮಾರ್ಚ್‌ 4ರಂದು ಅರಮನೆ ಮೈದಾನದಲ್ಲಿ ಸಾಗರಿಕಾ ಅವರನ್ನು ವಿವಾಹವಾಗಿದ್ದಾರೆ. ಆದರೆ, ಪ್ರಮಾಣ ಪತ್ರದಲ್ಲಿ ಅವರು ತಮ್ಮ ಮದುವೆಯ ಕುರಿತಾದ ವಿವರಗಳನ್ನು ಮುಚ್ಚಿಟ್ಟಿದ್ದಾರೆ. ಅವರ ಆಸ್ತಿ ವಿವರಗಳನ್ನು ಘೋಷಿಸಿಲ್ಲ. ಅಂತೆಯೇ ತಮ್ಮ ಕುಟುಂಬಸ್ಥರ ಆಸ್ತಿ ವಿವರಗಳ ಬಗ್ಗೆಗಾಗಲೀ ಅಥವಾ ಹೊಳೆನರಸೀಪುರದಲ್ಲಿನ ಕರ್ನಾಟಕ ಬ್ಯಾಂಕ್‌ ಶಾಖೆಯಲ್ಲಿ ಹೊಂದಿರುವ ಅವರ ಖಾತೆ ಸಂಖ್ಯೆ 608ರಲ್ಲಿರುವ ₹ 15 ಲಕ್ಷದ ವಿವರ ನೀಡಿಲ್ಲ’ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT