ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆಗೆ ಮುಂದಾದ ಎಂಎಲ್‌ಸಿ ಪುಟ್ಟಣ್ಣ

Last Updated 21 ಮೇ 2021, 20:05 IST
ಅಕ್ಷರ ಗಾತ್ರ

ರಾಮನಗರ: ‘ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ವಿಚಾರದಲ್ಲಿ ಸರ್ಕಾರ ಕುರುಡನಂತೆ ವರ್ತಿಸುತ್ತಿದೆ. ಈ ಧೋರಣೆ ಬದಲಿಸಿಕೊಳ್ಳದೇ ಹೋದಲ್ಲಿ ರಾಜೀನಾಮೆಗೂ ಸಿದ್ಧನಿದ್ದೇನೆ’ ಎಂದು ಬಿಜೆಪಿಯವರೇ ಆದ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಎಚ್ಚರಿಸಿದ್ದಾರೆ.

ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಖಾಸಗಿ ಶಿಕ್ಷಕರಿಗೆ ಈ ಬಾರಿಯ ಆರ್ಥಿಕ ಪ್ಯಾಕೇಜ್‌ನಲ್ಲಿ ಯಾವುದೇ ಪರಿಹಾರ ನೀಡದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಪುಟ್ಟಣ್ಣ, ‘ಪದೇ ಪದೇ ಮನವಿ ಮಾಡಿಕೊಂಡಾಗ್ಯೂ ಸರ್ಕಾರ ಖಾಸಗಿ ಶಾಲೆಗಳ ಶಿಕ್ಷಕರ ನೋವಿಗೆ ಸ್ಪಂದಿಸಿಲ್ಲ. ಹೀಗಾಗಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದವರು ರಾಜೀನಾಮೆ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಡ ಹೆಚ್ಚಾಗುತ್ತಿದೆ. ನಾನೂ ಈ ಬಗ್ಗೆ ಚಿಂತನೆ ನಡೆಸಿದ್ದೇನೆ’ ಎಂದರು.

‘ಈ ಸರ್ಕಾರದ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಆದರೆ, ನಮ್ಮ ಬೇಡಿಕೆಗಳ ಬಗ್ಗೆ ನಯಾಪೈಸೆಯ ಸ್ಪಂದನೆ ಸಿಗುತ್ತಿಲ್ಲ. ಖಾಸಗಿ ಶಾಲೆಗಳಿಗೆ ಇನ್ನೂ ಆರ್‌ಟಿಇ ಶುಲ್ಕ ಬಿಡುಗಡೆ ಮಾಡಿಲ್ಲ. ಮತ್ತೊಂದೆಡೆ ಶಿಕ್ಷಣ ಸಚಿವರು ಅರ್ಧ ವರ್ಷ ಮುಂಚೆಯೇ ಎಲ್ಲ ವಿದ್ಯಾರ್ಥಿಗಳೂ ಪಾಸ್ ಎಂದು ಘೋಷಿಸುತ್ತಾರೆ. ಹೀಗಿರುವಾಗ ಯಾವ ಪೋಷಕರು ಖಾಸಗಿ ಶಾಲೆಗಳಿಗೆ ಶುಲ್ಕ ಕಟ್ಟುತ್ತಾರೆ?’ ಎಂದು ಪ್ರಶ್ನಿಸಿದರು.

‘ಸರ್ಕಾರ ಕೇವಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳವರನ್ನು ಮಾತ್ರ ಶಿಕ್ಷಕರು ಎಂದು ಭಾವಿಸಿದೆ. ಖಾಸಗಿ ಶಾಲೆಗಳ ನೂರಾರು ಶಿಕ್ಷಕರು ಕೋವಿಡ್‌ನಿಂದ ಸತ್ತಿದ್ದಾರೆ. ಆ ಸಾವು ಅವರಿಗೆ ಲೆಕ್ಕಕ್ಕಿಲ್ಲ. ಶಿಕ್ಷಣ ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಸಂಬಳ ಪಾವತಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಸರ್ಕಾರ ಸಮಸ್ಯೆ ಬಗೆಹರಿಸಬೇಕು. ವಿಮಾ ಯೋಜನೆಯನ್ನು ಖಾಸಗಿ ಶಿಕ್ಷಕರಿಗೂ ವಿಸ್ತರಿಸಬೇಕು. ಬಡತನರೇಖೆಗಿಂತ ಕೆಳಗಿರುವ ಖಾಸಗಿ ಶಿಕ್ಷಕರು ಮತ್ತು ಸಿಬ್ಬಂದಿಗೆ ಆಹಾರದ ಕಿಟ್‌ಗಳನ್ನು ವಿತರಿಸಬೇಕು’ ಎಂದು ಆಗ್ರಹಿಸಿದರು.

‘ಇಡೀ ಶಿಕ್ಷಣ ಇಲಾಖೆ ಗೊಂದಲದ ಗೂಡಾಗಿದೆ. ಕಡ್ಡಾಯ ವರ್ಗಾವಣೆ ರದ್ದು ಮಾಡಿ ಶಿಕ್ಷಕ ಸ್ನೇಹಿ ವರ್ಗಾವಣೆ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿಕೊಂಡೇ ಸರ್ಕಾರ ಎರಡು ವರ್ಷ ಕಳೆದಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT