ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು 6ಕ್ಕೂ ಹೆಚ್ಚು ಶಾಸಕರ ರಾಜೀನಾಮೆ ಸಾಧ್ಯತೆ| ಸರ್ಕಾರ ಉಳಿಯುತ್ತಾ, ಉರುಳುತ್ತಾ?

ಸಭಾಧ್ಯಕ್ಷರ ಮಂಗಳವಾರದ ನಡೆಯತ್ತ ಕುತೂಹಲ
Last Updated 8 ಜುಲೈ 2019, 2:55 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕರ ರಾಜೀನಾಮೆಯಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿಯುವುದು ಖಚಿತವಾಗುತ್ತಿದ್ದಂತೆ ಅಖಾಡಕ್ಕೆ ಇಳಿದಿರುವ ಮೈತ್ರಿಕೂಟದ ನಾಯಕರು, ಸರ್ಕಾರವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವ ಕಸರತ್ತಿಗೆ ಕೈ ಹಾಕಿದ್ದಾರೆ.

ಈಗಾಗಲೇ 13 ಶಾಸಕರ ರಾಜೀನಾಮೆ ಕೊಡಿಸಿ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ನಾಯಕರು, ಸೋಮವಾರ (ಜುಲೈ 8) ಮತ್ತಷ್ಟು ಶಾಸಕರ ರಾಜೀನಾಮೆ ಕೊಡಿಸಿ, ಮೈತ್ರಿಯ ಜಂಘಾಬಲ ಉಡುಗಿಸುವ ಯತ್ನವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ. ಎರಡನೇ ಹಂತದಲ್ಲಿ 6 ಹಾಗೂ ಅಗತ್ಯ ಬಿದ್ದರೆ ಮತ್ತೆ 5 ಶಾಸಕರ ರಾಜೀನಾಮೆ ಕೊಡಿಸುವ ತಯಾರಿ ನಡೆದಿದೆ. ವಿಧಾನಮಂಡಲ ಅಧಿವೇಶನಕ್ಕೆ ಮುನ್ನವೇ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ಅವರಿಂದ ರಾಜೀನಾಮೆ ಕೊಡಿಸುವಂತಹ ಸನ್ನಿವೇಶ ಸೃಷ್ಟಿಸುವುದು ಸದ್ಯದ ಗುರಿ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.

ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಸಂಜೆ ನಗರಕ್ಕೆ ವಾಪಸ್ ಆಗಿದ್ದು, ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಿದರು. ಇದಕ್ಕೆ ಕಾಂಗ್ರೆಸ್ ನಾಯಕರು ಕೈಗೂಡಿಸಿದರು.

ಸರಣಿ ಸಭೆ

ಶನಿವಾರವೇ ಬೆಂಗಳೂರಿಗೆ ದೌಡಾಯಿಸಿದ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನಾಯಕರ ಜತೆ ಸುದೀರ್ಘ ಸಮಾಲೋಚನೆ ನಡೆಸಿದರು. ಭಾನುವಾರ ಬೆಳಿಗ್ಗೆಯೂ ಈ ಸಭೆ ಮುಂದುವರಿಯಿತು.

ಸಿದ್ದರಾಮಯ್ಯ, ಜಿ. ಪರಮೇಶ್ವರ, ಎಂ.ಬಿ. ಪಾಟೀಲ, ಡಿ.ಕೆ. ಶಿವಕುಮಾರ್, ಸತೀಶ ಜಾರಕಿಹೊಳಿ ಅವರನ್ನು ಕರೆಸಿಕೊಂಡ ವೇಣುಗೋಪಾಲ್ ಮುಂದಿನ ಕಾರ್ಯಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದರು.

ಶ್ರೀಕಂಠಯ್ಯ, ರಾಮಸ್ವಾಮಿ ಗೈರು

ಸಿಎಂ ನೇತೃತ್ವದಲ್ಲಿ ರಾತ್ರಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೆ ರವೀಂದ್ರ ಶ್ರೀಕಂಠಯ್ಯ ಮತ್ತು ಎ.ಟಿ.ರಾಮಸ್ವಾಮಿ ಗೈರಾಗಿದ್ದಾರೆ. ದೇವೇಗೌಡರೇ ಫೋನ್ ಮಾಡಿದರೂ ಸ್ವೀಕರಿಸಿಲ್ಲ ಎಂದು ಮಾಹಿತಿ ಇದೆ.

ರಾಜೀನಾಮೆ ಕೊಟ್ಟರೂ ಮುಂಬೈಗೆ ಹೋಗದೇ ಬೆಂಗಳೂರಿನಲ್ಲೇ ಉಳಿದಿರುವ ರಾಮಲಿಂಗಾರೆಡ್ಡಿ, ಮುನಿರತ್ನ ಅವರನ್ನು ಸಂಪರ್ಕಿಸಿ ರಾಜೀನಾಮೆ ವಾಪಸ್ ಪಡೆಯುವಂತೆ ಮನವೊಲಿಸುವ ಯತ್ನ ಮಾಡಿದರು. ಸಚಿವ ಸ್ಥಾನವೂ ಸೇರಿದಂತೆ ನಿಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಲು ಪಕ್ಷ ಸಿದ್ಧವಿದೆ ಎಂಬ ಭರವಸೆಯನ್ನೂ ನೀಡಿದರು. ಸೋಮವಾರ ರಾಜೀನಾಮೆ ಕೊಡಲಿರುವ ಪಟ್ಟಿಯಲ್ಲಿದ್ದಾರೆ ಎನ್ನಲಾದ ಅನೇಕ ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಸರ್ಕಾರ ಉಳಿಸಿಕೊಳ್ಳುವ ಅಗತ್ಯತೆ ಬಗ್ಗೆ ವಿವರಿಸಿದರು. ಸಿದ್ದರಾಮಯ್ಯ ಕೂಡ ಅನೇಕ ಶಾಸಕರಿಗೆ ಕರೆ ಮಾಡಿ, ರಾಜೀನಾಮೆ ಕೊಡದಂತೆ ಮನವೊಲಿಸಿದರು.

ಶನಿವಾರ ಬೆಳಿಗ್ಗೆಯೇ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರನ್ನು ಭೇಟಿಯಾದ ಸಚಿವ ಡಿ.ಕೆ. ಶಿವಕುಮಾರ್‌, ಮುಂದೇನು ಮಾಡಿದರೆ ಸರ್ಕಾರ ಉಳಿಯಲಿದೆ. ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಅವರಿಂದ ಸಲಹೆ ಪಡೆದರು.

ಬಿಜೆಪಿ ಪಣ

ಸರ್ಕಾರವನ್ನು ಹೇಗಾದರೂ ಮಾಡಿ ಪತನ ಮಾಡಲೇಬೇಕು ಎಂಬ ಹಟಕ್ಕೆ ಬಿದ್ದಿರುವ ಬಿಜೆಪಿ ನಾಯಕರು, ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಅಧಿವೇಶನಕ್ಕೆ ಮೊದಲೇ ಸರ್ಕಾರ ಅಲ್ಪಮತಕ್ಕೆ ಕುಸಿಯುವಂತೆ ಮಾಡುವಲ್ಲಿ ಮಗ್ನರಾಗಿದ್ದಾರೆ.

ಮುಂಬೈನಲ್ಲಿ ಮೊಕ್ಕಾಂ ಮಾಡಿರುವ 10 ಶಾಸಕರ ಜವಾಬ್ದಾರಿಯನ್ನು ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ಹಾಗೂ ಮುಖಂಡ ಸಿ.‍ಪಿ. ಯೋಗೇಶ್ವರ್ ನೋಡಿಕೊಳ್ಳುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್.ಆರ್‌. ಸಂತೋಷ್ ಪೂರ್ಣ ಹೊಣೆ ಹೊತ್ತಿದ್ದಾರೆ. 10 ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಜತೆಗೆ, ಇನ್ನಷ್ಟು ಶಾಸಕರನ್ನು ಪಕ್ಷದತ್ತ ಸೆಳೆದು ಮೈತ್ರಿಯ ಬಲ ಕುಗ್ಗಿಸುವ ಯತ್ನವನ್ನೂ ನಡೆಸಿದ್ದಾರೆ ಎನ್ನಲಾಗಿದೆ.

‘ಈ ಬೆಳವಣಿಗೆಗಳ ಮಧ್ಯೆಯೇ ಬಿಜೆಪಿಯ ಎಲ್ಲ ಶಾಸಕರನ್ನೂ ರೆಸಾರ್ಟ್‌ಗೆ ಕರೆದೊಯ್ಯಲು ಸಿದ್ಧತೆ ನಡೆದಿದೆ. ಮಂಗಳವಾರ ಕಚೇರಿಗೆ ಬರಲಿರುವ ಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್, ಶಾಸಕರ ರಾಜೀನಾಮೆ ಅಂಗೀಕರಿಸುವ ವಿಶ್ವಾಸವಿದೆ. ಅವರು ಅಂಗೀಕರಿಸದೇ ಇದ್ದರೆ, ರಾಜ್ಯಪಾಲರನ್ನು ಭೇಟಿಯಾಗುವ ಚಿಂತನೆ ಇದೆ’ ಎಂದು ಮೂಲಗಳು ತಿಳಿಸಿವೆ.

‘ರಾಜೀನಾಮೆ ವಾಪಸ್ ಇಲ್ಲ’

‘ನಾವು 13 ಜನ ಒಗ್ಗಟ್ಟಿನಿಂದ ಇದ್ದೇವೆ. ರಾಜೀನಾಮೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ’ ಎಂದು ಮುಂಬೈನ ಸೋಫಿಟೆಲ್ ಹೋಟೆಲ್‌ನಲ್ಲಿ ಮೊಕ್ಕಾಂ ಮಾಡಿರುವ ಶಾಸಕರು ಒಕ್ಕೊರಲಿನಿಂದ ಪ್ರತಿಪಾದಿಸಿದ್ದಾರೆ.

ಬಂಡಾಯ ಶಾಸಕರ ಪರವಾಗಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಎಸ್.ಟಿ. ಸೋಮಶೇಖರ್‌, ‘ನಾವೆಲ್ಲ ಬೆಂಗಳೂರಿಗೆ ವಾಪಸ್‌ ಬಂದು ರಾಜೀನಾಮೆ ವಾಪಸ್‌ ಪಡೆಯಲಿದ್ದೇವೆ ಎಂಬ ಸುದ್ದಿ ಹರಿದಾಡುತ್ತಿದೆ. ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇಲ್ಲಿ 10 ಶಾಸಕರು ಇದ್ದೇವೆ. ಆನಂದ್‌ಸಿಂಗ್, ರಾಮಲಿಂಗಾರೆಡ್ಡಿ, ಮುನಿರತ್ನ ನಮ್ಮ ಜತೆ ಸೇರಿಕೊಳ್ಳಲಿದ್ದಾರೆ’ ಎಂದರು.

ಶಾಸಕರ ಕಟ್ಟಿ ಹಾಕಲು ‘ಕೈ’ ರಣತಂತ್ರ

ರಾಜೀನಾಮೆ ಕೊಟ್ಟಿರುವ, ಕೊಡಲಿರುವ ತಮ್ಮ ಪಕ್ಷದ ಶಾಸಕರನ್ನು ‘ಅನರ್ಹತೆ’ಯ ಅಸ್ತ್ರ ಬಳಸಿ ಕಟ್ಟಿ ಹಾಕಲು ಕಾಂಗ್ರೆಸ್‌ ನಾಯಕರು ರಣತಂತ್ರ ಹೆಣೆದಿದ್ದಾರೆ.

ಇದರ ಭಾಗವಾಗಿಯೇ ಇದೇ 9ರ ಮಂಗಳವಾರ ಬೆಳಿಗ್ಗೆ ಶಾಸಕಾಂಗ ಪಕ್ಷದ ಸಭೆಯನ್ನು ನಾಯಕ ಸಿದ್ದರಾಮಯ್ಯ ಕರೆದಿದ್ದಾರೆ.

ಹಿಂದೆ ಇದೇ ರೀತಿ ಶಾಸಕರನ್ನು ಬಿಜೆಪಿ ನಾಯಕರು ಮುಂಬೈಗೆ ಕರೆದುಕೊಂಡು ಹೋಗಿದ್ದಾಗ, ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವಂತೆ ಎಚ್ಚರಿಕೆ ನೀಡಲಾಗಿತ್ತು.‘ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ನಿಮ್ಮನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ನಿಮ್ಮ ಶಾಸಕತ್ವ ಅನರ್ಹಗೊಳಿಸಲು ವಿಧಾನಸಭಾಧ್ಯಕ್ಷರಿಗೆ ಯಾಕೆ ಶಿಫಾರಸು ಮಾಡಬಾರದು’ ಎಂದು ಕಾರಣ ಕೇಳುವ ನೋಟಿಸ್ ನೀಡಲಾಗಿತ್ತು. ಬಹುತೇಕ ಶಾಸಕರು ಸಭೆಗೆ ಹಾಜರಾಗಿದ್ದರು. ಈಗ ಮುಂಬೈನಲ್ಲಿರುವ ಶಾಸಕರಿಗೆ ಇದೇ ಮಾದರಿ ಎಚ್ಚರಿಕೆ ನೀಡಿ ಅವರನ್ನು ಮತ್ತೆ ಕರೆತರುವ ಯತ್ನ ಮಾಡುವುದು ಮೊದಲ ಹೆಜ್ಜೆ. ಒಂದು ವೇಳೆ ಬರದೇ ಇದ್ದರೆ, ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅವರ ಶಾಸಕತ್ವ ಅನರ್ಹಗೊಳಿಸುವಂತೆ ಸಭಾಧ್ಯಕ್ಷರ ಮೇಲೆ ಒತ್ತಡ ಹೇರಲು ನಾಯಕರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

* ಮೈತ್ರಿ ಸರ್ಕಾರ ಜನರ, ಶಾಸಕರ ವಿಶ್ವಾಸ ಕಳೆದುಕೊಂಡಿದೆ. ಮುಂದುವರಿಯುವುದು ಸರಿಯಲ್ಲ. ಸುಮ್ಮನೆ ಕೂರಲು ನಾವೇನೂ ಸನ್ಯಾಸಿಗಳಲ್ಲ

-ಬಿ.ಎಸ್‌.ಯಡಿಯೂರಪ್ಪ,ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

*ರಾಜೀನಾಮೆ ಅಂಗೀಕಾರವಾಗಿಲ್ಲ. ಸಭಾಧ್ಯಕ್ಷರ ಮೇಲೆ ಅಂಗೀಕಾರಕ್ಕೆ ಒತ್ತಡ ಹೇರಿದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ. ಶಾಸಕರನ್ನು ಮನವೊಲಿಸಿ, ಕರೆ ತರುವ ಯತ್ನ ನಡೆಸಿದ್ದೇವೆ

-ಸಿದ್ದರಾಮಯ್ಯ, ಅಧ್ಯಕ್ಷ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT