ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Muda Scam | 14 ನಿವೇಶನ ಹಿಂದಿರುಗಿಸಲು ನಿರ್ಧಾರ: ಬಹಿರಂಗ ಪತ್ರ ಬರೆದ CM ಪತ್ನಿ

ನಾನೆಂದೂ ಮನೆ, ಆಸ್ತಿ, ಚಿನ್ನ, ಸಂಪತ್ತನ್ನು ಬಯಸಿದವಳಲ್ಲ; ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಬಹಿರಂಗ ಪತ್ರ
Published : 30 ಸೆಪ್ಟೆಂಬರ್ 2024, 17:23 IST
Last Updated : 30 ಸೆಪ್ಟೆಂಬರ್ 2024, 17:23 IST
ಫಾಲೋ ಮಾಡಿ
Comments

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) 14 ಬದಲಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ , ಲೋಕಾಯುಕ್ತ, ಜಾರಿ ನಿರ್ದೇಶನಾಲಯ (ಇ.ಡಿ) ದೂರು ದಾಖಲಿಸಿದ ಬೆನ್ನಲ್ಲೇ ಸಿಎಂ ಪತ್ನಿ ಬಿ.ಎಂ. ಪಾರ್ವತಿ ಅವರು ಬಹಿರಂಗ ಪತ್ರ ಬರೆದಿದ್ದು, 14 ನಿವೇಶನಗಳನ್ನು ವಾಪಸ್ ನೀಡುವುದಾಗಿ ತಿಳಿಸಿದ್ದಾರೆ.

‘ಕುಟುಂಬದ ಘನತೆಗೆ ಮಸಿ ಬಳಿಯಬೇಡಿ’

‘ರಾಜಕೀಯ ದ್ವೇಷ ಸಾಧನೆಗಾಗಿ ರಾಜಕಾರಣಿಗಳ ಕುಟುಂಬದ ಹೆಣ್ಣುಮಕ್ಕಳ ಘನತೆಗೆ ಮಸಿ ಬಳಿಯಬೇಡಿ’ ಎಂದು ಅವರು ಮನವಿ ಮಾಡಿದ್ದಾರೆ. ರಾಜಕೀಯ ಪಕ್ಷಗಳ ನಾಯಕರು, ಮಾಧ್ಯಮದವರನ್ನು ಉದ್ದೇಶಿಸಿ ಅವರು ಬರೆದಿರುವ ಪತ್ರದ ವಿವರ ಹೀಗಿದೆ.

‘ನನ್ನ ಪತಿಯಾಗಿರುವ ಸಿದ್ದರಾಮಯ್ಯನವರು ತಮ್ಮ 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಸಣ್ಣ ಕಳಂಕವೂ ಅಂಟಿಕೊಳ್ಳದಂತಹ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದವರು. ರಾಜಕೀಯವೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡು ಅವರಿಗೆ ಮುಜುಗರ ಉಂಟು ಮಾಡಬಾರದು ಎಂಬ ನಿರ್ಧಾರಕ್ಕೆ ಬದ್ಧಳಾಗಿ ಬದುಕಿದವಳು.

‘ನಾನೆಂದೂ ಮನೆ, ಆಸ್ತಿ, ಚಿನ್ನ, ಸಂಪತ್ತನ್ನು ಬಯಸಿದವಳಲ್ಲ. ಯಾವುದೇ ಕಾರಣಕ್ಕೂ ನನ್ನಿಂದ ಅವರ ರಾಜಕೀಯ ಜೀವನಕ್ಕೆ ಒಂದು ಸಣ್ಣ ಹನಿಯಷ್ಟೂ ಕಳಂಕ ತಟ್ಟಬಾರದೆಂದು ಎಚ್ಚರಿಕೆಯಿಂದ ನಡೆದುಕೊಂಡವಳು. ಹೀಗಿದ್ದರೂ ಮೈಸೂರಿನ ಮುಡಾ ನಿವೇಶನಕ್ಕೆ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳಿಂದ ನಾನು ಗಾಸಿಗೊಂಡಿದ್ದೇನೆ. ನನ್ನ ಸ್ವಂತ ಸೋದರ ಅರಿಶಿನ– ಕುಂಕುಮದ ಭಾಗವಾಗಿ ಕೊಟ್ಟ ಜಮೀನಿನ ಬಾಬ್ತು ಪಡೆದ ನಿವೇಶನಗಳು ಇಷ್ಟೊಂದು ರಾದ್ಧಾಂತವಾಗುತ್ತದೆ. ಇದರಿಂದ ನನ್ನ ಪತಿಯವರು ಅನ್ಯಾಯವಾಗಿ ಆರೋಪಗಳನ್ನು ಎದುರಿಸುವಂತಾಗಬಹುದು ಎನ್ನುವುದನ್ನು ನಾನು ಊಹಿಸಿದವಳೂ ಅಲ್ಲ.

‘ನನಗೆ ಈ ನಿವೇಶನ, ಮನೆ, ಆಸ್ತಿ, ಸಂಪತ್ತು ಯಾವುದೂ ಕೂಡ ನನ್ನ ಪತಿಯ ಗೌರವ, ಘನತೆ, ಮರ್ಯಾದೆ ಮತ್ತು ಅವರ ನೆಮ್ಮದಿಗಿಂತ ದೊಡ್ಡದಲ್ಲ. ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಅವರಿಂದ ಏನನ್ನೂ ನನಗಾಗಲೀ, ನನ್ನ ಕುಟುಂಬಕ್ಕಾಗಲೀ ಬಯಸದೇ ಇದ್ದ ನನಗೆ ಈ ನಿವೇಶನಗಳು ತೃಣಕ್ಕೆ ಸಮ. ಹೀಗಾಗಿ, 14 ನಿವೇಶನಗಳನ್ನು ವಾಪಸ್‌ ಮಾಡಲು ನಿರ್ಧರಿಸಿದ್ದೇನೆ.

‘ಈ ಹಂತದಲ್ಲಿ ಇಂತಹ ನಿರ್ಧಾರಕ್ಕೆ ಏಕೆ ಬಂದಿರಿ ಎಂದು ಯಾರಾದರೂ ಕೇಳಬಹುದು. ಆರೋಪ ಕೇಳಿ ಬಂದ ದಿನವೇ ನಾನು ಈ ನಿರ್ಧಾರ ಮಾಡಿದ್ದೆ. ಆದರೆ, ಈ ಮುಡಾ ನಿವೇಶನ ಹಂಚಿಕೆಯ ಆರೋಪವನ್ನು ರಾಜಕೀಯ ದುರುದ್ದೇಶದಿಂದ ಮಾಡಲಾಗಿದ್ದು, ಈ ಅನ್ಯಾಯದ ವಿರುದ್ಧ ಹೋರಾಡಬೇಕು. ಅವರ ಸಂಚಿಗೆ ನಾವು ಬಲಿಯಾಗಬಾರದು ಎಂದು ಕೆಲವು ಹಿತೈಷಿಗಳು ಹೇಳಿದ ಕಾರಣಕ್ಕೆ ನಿವೇಶನ ವಾಪಸು ಮಾಡಬೇಕೆಂಬ ನಿರ್ಧಾರವನ್ನು ಕೈ ಬಿಟ್ಟಿದ್ದೆ.

‘ಎಲ್ಲ ರಾಜಕೀಯ ಪಕ್ಷದ ನಾಯಕರು ಮತ್ತು ಮಾಧ್ಯಮವರಲ್ಲಿ ನನ್ನ ವಿನಂತಿ ಎಂದರೆ ದಯವಿಟ್ಟು ರಾಜಕೀಯ ಕ್ಷೇತ್ರದಿಂದ ದೂರವಿದ್ದು, ತಮ್ಮ ಪಾಡಿಗೆ ತಾವಿರುವ ರಾಜಕೀಯ ಕುಟುಂಬದ ಹೆಣ್ಣು ಮಕ್ಕಳನ್ನು ರಾಜಕೀಯ ದ್ವೇಷ ಸಾಧನೆಗಾಗಿ ವಿವಾದದ ಕಣಕ್ಕೆ ಎಳೆದು ತಂದು ಅವರ ಘನತೆ, ಗೌರವಗಳಿಗೆ ಹಾನಿ ಮಾಡಬೇಡಿ’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT