ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) 14 ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ಸಿಬಿಐ ಅಥವಾ ಬೇರಾವುದೇ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಲು ಆದೇಶಿಸಬೇಕು’ ಎಂದು ಕೋರಲಾದ ಖಾಸಗಿ ದೂರಿನ ಸ್ವೀಕಾರಾರ್ಹತೆ ಕುರಿತಾದ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇದೇ 20ಕ್ಕೆ ಕಾಯ್ದಿರಿಸಿದೆ.
ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಈ ದೂರನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಮಂಗಳವಾರ ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಸ್ನೇಹಮಯಿ ಕೃಷ್ಣ ಪರ ಹೈಕೋರ್ಟ್‌ನ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್, ‘ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಅದಾಗ್ಯೂ, ಈ ದೂರಿನ ಬಗ್ಗೆ ರಾಜ್ಯಪಾಲರಿಗೆ ಪೂರ್ವಾನುಮತಿ ನೀಡಲು ಈಗಾಗಲೇ ಕೋರಲಾಗಿದೆ. ಒಂದೊಮ್ಮೆ ರಾಜ್ಯಪಾಲರು ಪೂರ್ವಾನುಮತಿ ನೀಡದೇ ಇದ್ದರೂ ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ವಿವಿಧ ಕಲಂಗಳ ಅಡಿಯಲ್ಲಿ ಇದನ್ನು ಅಪರಾಧವಾಗಿ ಪರಿಗಣಿಸಬಹುದು’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ಅರ್ಜಿ ಪರಿಗಣಿಸಿ, ದೂರುದಾರರ ಹೇಳಿಕೆ ದಾಖಲಿಸಲು ರಾಜ್ಯಪಾಲರ ಪೂರ್ವಾನುಮತಿ ಅಗತ್ಯವಿದೆ. ಪೊಲೀಸರಿಂದ ತನಿಖೆಗೆ ಆದೇಶಿಸಿದರೆ ಅವರಿಗೂ ರಾಜ್ಯಪಾಲರ ಪೂರ್ವಾನುಮತಿ ಬೇಕಾಗುತ್ತದೆ. ಅಂತೆಯೇ, ಅರ್ಜಿಯನ್ನು ತಿರಸ್ಕರಿಸುವ ಆಯ್ಕೆಯೂ ಈ ನ್ಯಾಯಾಲಯದ ಮುಂದಿದೆ’ ಎಂದರು.
ಆಗ ಲಕ್ಷ್ಮಿ ಅಯ್ಯಂಗಾರ್, ‘ಹಾಗಾದರೆ, ಈ ಪ್ರಕರಣವನ್ನು ಐಪಿಸಿಯ ವಿವಿಧ ಕಲಂಗಳಡಿಯಾದರೂ ಪರಿಗಣಿಸಬೇಕು’ ಎಂದರು. ಇದನ್ನು ಆಲಿಸಿದ ನ್ಯಾಯಾಧೀಶರು ಈ ಕುರಿತಾಗಿ ಇದೇ 20ರಂದು ಆದೇಶ ನೀಡುವುದಾಗಿ ತಿಳಿಸಿದರು.
ಮತ್ತೊಂದು ದೂರು: ಬೆಂಗಳೂರಿನ ಟಿ.ಜೆ.ಅಬ್ರಹಾಂ ಸಲ್ಲಿಸಿರುವ ಖಾಸಗಿ ದೂರು ಹಾಗೂ ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತ ಆಲಂ ಪಾಷ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಾಧೀಶ ಸಂತೋಷ ಗಜಾನನ ಭಟ್ ಇದೇ ವೇಳೆ ವಿಚಾರಣೆ ನಡೆಸಿದರು.
ಅಬ್ರಹಾಂ ಅವರ ಖುದ್ದು ವಾದವನ್ನು ಆಲಿಸಿದ ನ್ಯಾಯಾಧೀಶರು, ರಾಜ್ಯಪಾಲರ ಪೂರ್ವಾನುಮತಿಗೆ ಸಂಬಂಧಿಸಿದಂತೆ ವಾದ ಮಂಡಿಸಲು ಅಬ್ರಹಾಂ ಅವರಿಗೆ ಸೂಚಿಸಿ ಇದೇ 21ಕ್ಕೆ ವಿಚಾರಣೆ ಮಂದೂಡಿದರು. ಅಂತೆಯೇ, ‘ಆಲಂ ಪಾಷಾ ಅವರಿಗೆ ಮಧ್ಯಂತರ ಅರ್ಜಿ ಸಲ್ಲಿಸುವ ಹಕ್ಕು ಇಲ್ಲ’ ಎಂಬ ಅಭಿಪ್ರಾಯದೊಂದಿಗೆ ಅದನ್ನು ವಜಾ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.