ಬೆಂಗಳೂರು: ಹೈಕೋರ್ಟ್ ತೀರ್ಪು ಪ್ರಕಟಿಸುತ್ತಿದ್ದಂತೆ, ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ‘ಕಾವೇರಿ’ ನಿವಾಸದ ಕಡೆಗೆ ತರಾತುರಿಯಲ್ಲಿ ತೆರಳಿದರು. ಅದೇ ವೇಳೆಗೆ ಸಚಿವ ಸಂಪುಟದ ಸಹೋದ್ಯೋಗಿಗಳು, ಕೆಲವು ಕಾಂಗ್ರೆಸ್ ಮುಖಂಡರೂ ಮುಖ್ಯಮಂತ್ರಿ ಭೇಟಿಗೆ ಅಲ್ಲಿಗೆ ದೌಡಾಯಿಸಿದರು.
ಹೈಕೋರ್ಟ್ ತೀರ್ಪು ಹಾಗೂ ಮುಂದಿನ ಹೆಜ್ಜೆಯ ಕುರಿತು ಸಚಿವರು ಮತ್ತು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದರು. ದೂರವಾಣಿ ಮೂಲಕ ತಮ್ಮ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಜೊತೆಗೂ ಸಮಾಲೋಚನೆ ನಡೆಸಿದರು. ಅಲ್ಲದೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಕರೆ ಮಾಡಿದ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿದರು.
ಸಚಿವರಾದ ಎಚ್.ಕೆ. ಪಾಟೀಲ, ಎಚ್.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ಈಶ್ವರ ಖಂಡ್ರೆ, ಎನ್. ಚಲುವರಾಯಸ್ವಾಮಿ, ಬೈರತಿ ಸುರೇಶ್, ಶಾಸಕ ಆರ್.ವಿ. ದೇಶಪಾಂಡೆ ಮತ್ತಿತರರು ಇದ್ದರು.