ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ | ರಾಜ್ಯಪಾಲರಿಗೆ ಝೆಡ್‌ ಶ್ರೇಣಿ ಭದ್ರತೆ: ಬುಲೆಟ್‌ ಪ್ರೂಫ್‌ ಕಾರು

ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಹೆಚ್ಚಿದ ಭದ್ರತಾ ವ್ಯವಸ್ಥೆ
Published 21 ಆಗಸ್ಟ್ 2024, 7:19 IST
Last Updated 21 ಆಗಸ್ಟ್ 2024, 7:19 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿರುವ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ಮೇರೆಗೆ ಝೆಡ್ ಶ್ರೇಣಿಯ ಭದ್ರತೆ ಒದಗಿಸಲಾಗಿದೆ.

ಅಲ್ಲದೇ, ಕಳೆದ ಎರಡು ದಿನಗಳಿಂದ ರಾಜಭವನದ ಸುತ್ತಮುತ್ತ ಹೆಚ್ಚಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

ತನಿಖೆಗೆ ಅನುಮತಿ ನೀಡಿದ ದಿನದಿಂದ ರಾಜ್ಯಪಾಲರ ವಿರುದ್ಧ ರಾಜ್ಯದಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯಪಾಲರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಎರಡು ದಿನಗಳ ಹಿಂದೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಸಚಿವರೊಬ್ಬರು, ‘ರಾಜ್ಯದಲ್ಲಿ ಗದ್ದಲ ಹಾಗೂ ಹಲ್ಲೆಗಳು ನಡೆದರೆ ರಾಜ್ಯಪಾಲರೇ ಹೊಣೆ’ ಎಂದು ಎಚ್ಚರಿಸಿದ್ದರು. ರಾಜ್ಯಪಾಲರು ಸಂಚರಿಸುವ ಮಾರ್ಗಗಳಲ್ಲಿ ಅವರಿಗೆ ಪ್ರತಿಭಟನೆಯ ಬಿಸಿತಟ್ಟುವ ಸಾಧ್ಯತೆ ಇದೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಸಿಕ್ಕಿದ್ದು, ಹೆಚ್ಚಿನ ಭದ್ರತೆ ಒದಗಿಸುವಂತೆ ಸೂಚಿಸಲಾಗಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಂಬಂಧ ನಡೆಯುತ್ತಿರುವ ಬೆಳವಣಿಗೆಯ ಮಾಹಿತಿಯನ್ನು ರಾಜ್ಯದಲ್ಲಿರುವ ಅಧಿಕಾರಿಗಳಿಂದ ಕೇಂದ್ರ ಗುಪ್ತಚರ ಇಲಾಖೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

ಥಾವರಚಂದ್ ಗೆಹಲೋತ್ ಅವರು ರಾಜ್ಯದ ರಾಜ್ಯಪಾಲರಾಗಿ ನೇಮಕವಾದ ದಿನದಿಂದಲೂ ಇನೋವಾ ಕಾರನ್ನೇ ಓಡಾಟಕ್ಕೆ ಬಳಸುತ್ತಿದ್ದರು. ಈಗ ಅವರ ಭದ್ರತಾ ಸಿಬ್ಬಂದಿಯ ಸೂಚನೆ ಮೇರೆಗೆ ಬುಲೆಟ್‌ ಪ್ರೂಫ್‌ ಕಾರನ್ನು ಬಳಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಆಗಸ್ಟ್ 29ರ‌ವರೆಗೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿ ಆಗದಂತೆಯೂ ರಾಜ್ಯಪಾಲರಿಗೆ ಗುಪ್ತಚರ ಇಲಾಖೆಯಿಂದ ಸೂಚನೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ನಗರದಲ್ಲಿ ಬುಧವಾರ ನಡೆದ ನೃಪತುಂಗ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲರು ಗೈರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT