ಬೆಂಗಳೂರು: ಒಕ್ಕಲಿಗ ಸಮುದಾಯದ ಸಚಿವರು, ಶಾಸಕರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿ, ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಮನವಿ ಸಲ್ಲಿಸಿತು.
ಕಂದಾಯ ಸಚಿವ ಕೃಷ್ಣ ಬೈರೇಗೌಡ, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ನೇತೃತ್ವದಲ್ಲಿ ತೆರಳಿದ್ದ ನಿಯೋಗ, ಮುನಿರತ್ನ ವಿರುದ್ಧ ಕಮಿಷನ್ ದಂಧೆ, ಅತ್ಯಾಚಾರ, ಹನಿಟ್ರ್ಯಾಪ್, ಎಚ್‌ಐವಿ ಹರಡುವಿಕೆ ಸೇರಿದಂತೆ ವಿವಿಧ ಆರೋಪಗಳು ಇವೆ. ಹಾಗಾಗಿ, ಎಲ್ಲ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂದು ಕೋರಿದರು.
ಮುಖ್ಯಮಂತ್ರಿ ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಕೃಷ್ಣ ಬೈರೇಗೌಡ, ‘ಮುನಿರತ್ನ ಒಕ್ಕಲಿಗರನ್ನು ಅವಹೇಳನ ಮಾಡಿದ್ದಾರೆ. ಸಮುದಾಯದ ಮೇಲೆ ದಾಳಿ ನಡೆದಾಗ ಎಲ್ಲರೂ ಎಚ್ಚೆತ್ತುಕೊಂಡು ಖಂಡಿಸಬೇಕು. ರಾಜ್ಯದಲ್ಲಿ ಒಕ್ಕಲಿಗ ಸಮಾಜ ಗೌರವಯುತವಾಗಿ ಬಾಳಿಕೊಂಡು ಬಂದಿದೆ. ವಿನಾಕಾರಣ ಅವಹೇಳನ ಮಾಡುವುದು ಗೌರವಕ್ಕೆ ಚ್ಯುತಿ ತರುತ್ತದೆ’ ಎಂದರು.
‘ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಸಮುದಾಯ ಗೌರವ ಕೊಡುತ್ತದೆ. ಅವರ ನೇತೃತ್ವದಲ್ಲಿ ಖಂಡನಾ ನಿರ್ಣಯ ಸಭೆ ಆಗಬೇಕು ಎಂದು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಸ್ವಾಮೀಜಿ ಅವರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ’ ಎಂದು ಹೇಳಿದರು.