ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿ ಕೊಲೆ ಪ್ರಕರಣ: ಆರೋಪಿಗೆ ಹೈಕೋರ್ಟ್‌ ಜಾಮೀನು

Published 21 ಡಿಸೆಂಬರ್ 2023, 14:32 IST
Last Updated 21 ಡಿಸೆಂಬರ್ 2023, 14:32 IST
ಅಕ್ಷರ ಗಾತ್ರ

ಬೆಂಗಳೂರು: ‘ತೋಟದಲ್ಲಿ ಕೃಷಿ ಸಾಮಗ್ರಿ ಕಳವು ಮಾಡುತ್ತಿದ್ದ ಇಬ್ಬರನ್ನು ಹಿಡಿದು ಥಳಿಸಿ ಅವರ ಸಾವಿಗೆ ಕಾರಣವಾಗಿದ್ದಾರೆ‘ ಎಂಬ ಆರೋಪ ಹೊತ್ತು ಬಂಧನಕ್ಕೆ ಒಳಗಾಗಿದ್ದ ತುಮಕೂರಿನ ಪೆದ್ದನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಪಿ.ವಿ.ರಂಗಸ್ವಾಮಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಸಂಬಂಧ ಪ್ರಕರಣದಲ್ಲಿ ಎರಡನೇ ಆರೋಪಿಯಾದ ಪಿ.ವಿ.ರಂಗಸ್ವಾಮಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.‌

ವಿಚಾರಣೆ ವೇಳೆ ಆರೋಪಿ ಪರ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಅವರು, ’ಅರ್ಜಿದಾರರಿಗೆ ಮೃತರನ್ನು ಕೊಲೆ ಮಾಡುವ ಯಾವುದೇ ಉದ್ದೇಶ ಇರಲಿಲ್ಲ. ಕೇವಲ ಕಳ್ಳರನ್ನು ಹಿಡಿದು ಬುದ್ಧಿ ಕಲಿಸಬೇಕೆಂಬ ಇರಾದೆಯಿತ್ತು. ಅಂತೆಯೇ, ಆರೋಪಿಗಳು ತೆಂಗಿನ ಸುಳೆಪಟ್ಟೆಯಿಂದ ಸುಟ್ಟು ಗಾಯಗೊಳಿಸಿದ್ದರು ಎಂಬುದಾಗಿ ಘಟನೆಯ ಪ್ರತ್ಯಕ್ಷ ಸಾಕ್ಷಿದಾರರು ನೀಡಿರುವ ಹೇಳಿಕೆ ಸುಳ್ಳು. ಮೃತರ ಮೈಮೇಲೆ ಯಾವುದೇ ಸುಟ್ಟ ಗಾಯಗಳಿರಲಿಲ್ಲ. ಹೀಗಾಗಿ, ಸಾಕ್ಷಿಗಳ ಹೇಳಿಕೆ ನಂಬಲರ್ಹವಲ್ಲ. ಆದ್ದರಿಂದ, ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು‘ ಎಂದು ಕೋರಿದರು.

ಈ ವಾದಾಂಶವನ್ನು ಪುರಸ್ಕರಿಸಿದ ನ್ಯಾಯಪೀಠ, ‘ಅರ್ಜಿದಾರರು ₹ 1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಸಾಕ್ಷ್ಯನಾಶಕ್ಕೆ ಯತ್ನಿಸಬಾರದು. ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೇ ತುಮಕೂರು ಜಿಲ್ಲೆಯನ್ನು ಬಿಟ್ಟು ತೆರಳಬಾರದು. ವಿಚಾರಣಾ ನ್ಯಾಯಾಲಯದ ಮುಂದೆ ವಿಚಾರಣೆಗೆ ತಪ್ಪದೇ ಹಾಜರಾಗಬೇಕು’ ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತು.

ಪ್ರಕರಣವೇನು?:

‘ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಪೆದ್ದನಹಳ್ಳಿಯಲ್ಲಿ ಕೆ.ಗಿರೀಶ್‌ ಮತ್ತು ಪಿ.ಎನ್‌.ಗಿರೀಶ್‌ ತೋಟಗಳಿಂದ ಅಡಿಕೆ ಗೊನೆ, ಪಂಪ್ ಸೆಟ್ ಮೋಟಾರುಗಳು, ಸ್ಟಾರ್ಟರ್ ಸೇರಿದಂತೆ ಬೆಲೆಬಾಳುವ ಕೃಷಿ ಸಾಮಗ್ರಿಗಳನ್ನು ಕಳ್ಳತನ ಮಾಡುತ್ತಿದ್ದರು. ಇವರಿಬ್ಬರೂ 2023ರ ಏಪ್ರಿಲ್ 21ರಂದು ಗ್ರಾಮದ ತೋಟವೊಂದರಲ್ಲಿ ಸ್ಟಾರ್ಟರ್ ಕಳವು ಮಾಡುತ್ತಿದ್ದಾಗ ಊರ ಜನರಿಗೆ ಸಿಕ್ಕಿಬಿದ್ದಿದ್ದರು. ಆಗ ಊರ ಜನರು ಹಿಗ್ಗಾಮುಗ್ಗಾ ಥಳಿಸಿದ್ದರು. ಪರಿಣಾಮ ಕಳ್ಳರಿಬ್ಬರೂ ಸಾವನ್ನಪ್ಪಿದ್ದರು‘ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕೆ.ಗಿರೀಶ್‌ ತಾಯಿ ಗುಬ್ಬಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು, ಪಿ.ವಿ.ರಂಗಸ್ವಾಮಿ ಸೇರಿದಂತೆ ಒಟ್ಟು 29 ಆರೋಪಿಗಳನ್ನು ಮೇ 2ರಂದು ಬಂಧಿಸಿದ್ದರು. ಆರೋಪಿಗಳ ವಿರುದ್ಧ ಕೊಲೆ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಜಾಮೀನು ಕೋರಿ ಪಿ.ವಿ.ರಂಗಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ತುಮಕೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT