ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿಯಲ್ಲಿ ಶುಕ್ರವಾರ ನಾಡಹಬ್ಬ ದಸರೆಯ ಸಂಭ್ರಮಕ್ಕೆ ‘ಗಜ ಪಯಣ’ವು ಮುನ್ನುಡಿ ಬರೆಯಿತು.
ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುತ್ತಿರುವ ಅಭಿಮನ್ಯು ಸೇರಿ 9 ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಪುಷ್ಪಾರ್ಚನೆ ಮಾಡಿ ಗಜ ಪಯಣಕ್ಕೆ ಚಾಲನೆ ನೀಡಿದರು.
‘ವರಲಕ್ಷ್ಮಿ, ‘ವಿಜಯಾ’ ಜೊತೆ ಗಾಂಭೀರ್ಯದ ಹೆಜ್ಜೆಗಳನ್ನಿರಿಸಿ ಬಂದ ಅಂಬಾರಿ ಆನೆ ‘ಅಭಿಮನ್ಯು’ ನಾಡಹಬ್ಬ ದಸರೆಯ ಸಡಗರಕ್ಕೆ ಕಳೆ ತುಂಬಿದ. ಅವನೊಂದಿಗೆ ಮತ್ತಿಗೋಡು ಆನೆ ಶಿಬಿರದ ಭೀಮ, ಮಹೇಂದ್ರ, ಬಳ್ಳೇ ಶಿಬಿರದ ‘ಅರ್ಜುನ’, ಕೊಡಗು ಜಿಲ್ಲೆಯ ದುಬಾರೆ ಶಿಬಿರದ ‘ಧನಂಜಯ’, ‘ಗೋಪಿ’, ‘ಕಂಜನ್’ ಹೆಜ್ಜೆಹಾಕಿದರು. ಈ ಮೊದಲ ತಂಡದಲ್ಲಿ 7 ಗಂಡು ಹಾಗೂ 2 ಹೆಣ್ಣಾನೆಗಳಿವೆ.
ಅರಮನೆ ಪುರೋಹಿತ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಆನೆಗಳಿಗೆ ಪಂಚಫಲ, ಕಡುಬು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ಕಲ್ಲು ಸಕ್ಕರೆ, ಮೋದಕ ನೈವೇದ್ಯ ನೀಡಿ ‘ಶೋಡಷೋಪಚಾರ’ ಪೂಜೆ ಮಾಡಲಾಯಿತು. ಗಣಪತಿ ಅರ್ಚನೆ ಜೊತೆ ವನದೇವತೆ, ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಶಾಸಕ ಜಿ.ಡಿ.ಹರೀಶ್‌ಗೌಡ ಈಡುಗಾಯಿ ಒಡೆದು, ಆರತಿ ಬೆಳಗಿದರು. ಆನೆಗಳ ಮಾವುತರು, ಕಾವಡಿಗಳಿಗೆ ಸಚಿವ ಈಶ್ವರ ಖಂಡ್ರೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಫಲ–ತಾಂಬೂಲ ನೀಡಿ ಆಹ್ವಾನಿಸಿದರು. ಪೂಜೆ ನಂತರ ಸ್ವಲ್ಪ ದೂರದವರೆಗೆ ಆನೆಗಳನ್ನು ನಡೆಸಿಕೊಂಡು ಬರಲಾಯಿತು. ನಂತರ ಲಾರಿಗಳಲ್ಲಿ ಮೈಸೂರಿನ ಅರಣ್ಯ ಭವನಕ್ಕೆ ಸಾಗಿಸಲಾಯಿತು.
ಈ ಆನೆಗಳು ಸೆ.5ರಂದು ಮಧ್ಯಾಹ್ನ ಅರಮನೆ ಪ್ರವೇಶಿಸಲಿವೆ. ಅ.15ರಿಂದ ನವರಾತ್ರಿ ಆರಂಭವಾಗಲಿದೆ. ಅ.24ರ ವಿಜಯದಶಮಿಯಂದು ಜಂಬೂ ಸವಾರಿ ನಡೆಯಲಿದೆ.
₹ 30 ಕೋಟಿ ಅನುದಾನ: ಸಚಿವ ಮಹದೇವಪ್ಪ
‘ನಾಡಹಬ್ಬ ದಸರೆಗೆ ₹ 30 ಕೋಟಿ ಅನುದಾನ ಕೇಳಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡುವ ಭರವಸೆ ನೀಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ‘ಅದ್ದೂರಿ ದಸರಾ ಆಚರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಕಾರ್ಯಕಾರಿ ಸಮಿತಿಗಳ ರಚನೆಗೆ ಸಭೆಯನ್ನು ನಡೆಸಲಾಗಿದೆ. ಸಂವಿಧಾನವು ಧಾರ್ಮಿಕ ಅಭಿವ್ಯಕ್ತಿ ಆಚರಣೆಯನ್ನು ಮುಕ್ತವಾಗಿ ಮಾಡುವ ಸ್ವಾತಂತ್ರ್ಯವನ್ನು ಪ್ರಜೆಗಳಿಗೆ ನೀಡಿದೆ. ಜನರ ನಂಬಿಕೆ ಅನುಸಾರವೇ ನಾಡಹಬ್ಬ ಆಚರಿಸಲಾಗುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.