ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಮಹೋತ್ಸವ: ಟಿಕೆಟ್‌, ಪಾಸ್‌ ಅವ್ಯವಸ್ಥೆ; ಲೆಕ್ಕ ನೀಡುವವರಾರು?

ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
Last Updated 10 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಮೈಸೂರು: ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆಂದು ಮುದ್ರಿಸಲಾದ ಪಾಸ್‌, ಟಿಕೆಟ್‌ ಎಷ್ಟು? ಎಷ್ಟು ಟಿಕೆಟ್‌ ಮಾರಾಟಕ್ಕೆ ಇಡಲಾಗಿತ್ತು? ಹಣವೆಷ್ಟು ಸಂಗ್ರಹವಾಯಿತು? ಗೋಲ್ಡ್‌ ಕಾರ್ಡ್‌ನಿಂದ ಬಂದ ಹಣವೆಷ್ಟು? ಜನಪ್ರತಿನಿಧಿಗಳ ನಡುವೆ ಹಂಚಿಕೆಯಾದ ಪಾಸ್‌ಗಳು ಎಷ್ಟು? ಯಾವತ್ತು ಲೆಕ್ಕ ಕೊಡುತ್ತೀರಿ?

–ಗೋಲ್ಡ್ ಕಾರ್ಡ್‌, ಪಾಸ್‌ ಹಾಗೂ ಟಿಕೆಟ್‌ ಅವ್ಯವಸ್ಥೆ ಕುರಿತು ಸಾರ್ವಜನಿಕರು, ಸಂಘ ಸಂಸ್ಥೆಗಳು, ವಿವಿಧ ಸಂಘಟನೆಗಳು ಎತ್ತಿರುವ ಪ್ರಶ್ನೆ ಇದು.

‘ರಾಜಕಾರಣಿಗಳು, ಅವರ ಹಿಂಬಾಲಕರು ಹಾಗೂ ಅಧಿಕಾರಿಗಳಿಗೆ ಪಾಸ್‌ಗಳು ಹಂಚಿಕೆಯಾಗಿದ್ದು, ಹೆಸರಿಗೆ ಮಾತ್ರ ಜನರ ದಸರೆ ಎನ್ನುತ್ತಾರೆ. ಖಾಸಗಿ ಕಾರ್ಯಕ್ರಮದಂತೆ ತಮಗಿಷ್ಟ ಬಂದವರಿಗೆ ಹಂಚಲಾಗಿದೆ’ ಎಂಬುದು ಅವರ ಆರೋಪ.

ಪಾಸ್, ಟಿಕೆಟ್‌ ವಿತರಣೆ ಮತ್ತು ದಸರೆಯ ಖರ್ಚು ವೆಚ್ಚ ಕುರಿತು ಅಧಿಕೃತವಾಗಿ ಲೆಕ್ಕ ಕೊಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಮೈಸೂರು ಟ್ರಾವೆಲ್‌ ಅಸೋಸಿಯೇಷನ್‌ ಅಧ್ಯಕ್ಷ ಬಿ.ಎಸ್‌.ಪ್ರಶಾಂತ್‌ ಅವರು ಆರ್‌ಟಿಐ ಮೂಲಕ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.

ಆದರೆ, ಇದುವರೆಗೆ ದಸರಾ ಸಮಿತಿಯಾಗಲಿ, ಜಿಲ್ಲಾಡಳಿತವಾಗಲಿ, ಕಾರ್ಯಕ್ರಮ ಉಸ್ತುವಾರಿ ಹೊತ್ತ ಜನಪ್ರತಿನಿಧಿಗಳಾಗಲಿ, ಪಾಸ್‌, ಟಿಕೆಟ್‌ ಸಂಬಂಧ ಸರಿಯಾದ ಮಾಹಿತಿ ನೀಡುತ್ತಿಲ್ಲ.

‘ಈ ಬಾರಿ ಗೋಲ್ಡ್‌ ಕಾರ್ಡ್‌ ಮಾರಾಟ ಮಾಡಿದ್ದು ಕಡಿಮೆ. ಕೆಲವೇ ದಿನಗಳಲ್ಲಿ ಎಲ್ಲಾ ಮಾಹಿತಿ ನೀಡುತ್ತೇವೆ. ಒಂದೂ ಪೈಸೆ ದುರುಪಯೋಗವಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದರು.

‘ದಸರೆ ಆಚರಣೆಗೆ ಸರ್ಕಾರದಿಂದ ಏಕೆ ಖರ್ಚು ಮಾಡಬೇಕು? ಬೇರೆ ಬೇರೆ ಮೂಲಗಳಿಂದ ಹಣ ಸಂಗ್ರಹಿಸಿ ಆಚರಿಸಬಹುದು. ಟಿಕೆಟ್‌ನಿಂದ ಬಂದ ಹಣವನ್ನೂ ಬಳಸಿಕೊಳ್ಳಬಹುದು. ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಆದರೆ, ಪಾಸ್‌ ವ್ಯವಸ್ಥೆ ಸಂಪೂರ್ಣವಾಗಿ ಕೈಬಿಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಹೊಸ ಪರಿಕಲ್ಪನೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ನೀಡಿದ ಮಾಹಿತಿ ಪ್ರಕಾರ ಅರಮನೆ ಆವರಣದಲ್ಲಿ 26 ಸಾವಿರ ಆಸನ ವ್ಯವಸ್ಥೆ ಮಾಡಲಾಗಿತ್ತು. ಟಿಕೆಟ್‌ಗಳಿಗೆ ಈ ಬಾರಿ ₹ 500, 1,000 ದರ ನಿಗದಿಪಡಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಬಳಿ ಸಾರ್ವಜನಿಕರು ನಿತ್ಯ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಂತು ವಾಪಸ್‌ ಹೋಗಿದ್ದರು.

ಕಾಳಸಂತೆಯಲ್ಲಿ ಮಾರಾಟ: ಈ ಬಾರಿ ಪಾಸ್‌ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಿರುವುದೂ ಕಂಡುಬಂದಿದೆ. ಜೊತೆಗೆ ಪಾಸ್‌ ಹಾಗೂ ಟಿಕೆಟ್‌ ಇದ್ದವರನ್ನು ಕೆಲ ದ್ವಾರಗಳಲ್ಲಿ ಒಳಗೆ ಬಿಡದೆ ಸತಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT