ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬದಲಿ ನಿವೇಶನ ಹಂಚಿಕೆ ಹಣ ಅಕ್ರಮ ವರ್ಗಾವಣೆಯಲ್ಲ: ಸಿಎಂ ಸಿದ್ದರಾಮಯ್ಯ

Published : 1 ಅಕ್ಟೋಬರ್ 2024, 23:30 IST
Last Updated : 1 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ‘ಸ್ವಾಧೀನಪಡಿಸಿಕೊಂಡ ಜಮೀನಿನ ಬದಲಿಯಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಹಣದ ಅಕ್ರಮ ವರ್ಗಾವಣೆಯಾಗುವುದಿಲ್ಲ. ಮುಡಾ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. 

ಜಾರಿ ನಿರ್ದೇಶನಾಲಯವು (ಇಡಿ) ಇಸಿಐಆರ್ ದಾಖಲಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಕಾನೂನು ರೀತಿ ಯಾವೆಲ್ಲಾ ಕ್ರಮವಿದೆ ಅವನ್ನು ತೆಗೆದುಕೊಳ್ಳಲಿ’ ಎಂದರು.

‘ವಿರೋಧ ಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಗತ್ಯವಾಗಿ ರಾಜೀನಾಮೆ ಕೇಳಲಾಗುತ್ತಿದೆ. ನನ್ನ ತಪ್ಪು ಇಲ್ಲ ಎಂದ ಮೇಲೆ ರಾಜೀನಾಮೆ ಏಕೆ ನೀಡಬೇಕು’ ಎಂದು ಪ್ರಶ್ನಿಸಿದರು. 

‘ಯಡಿಯೂರಪ್ಪ ಅವರ ಪ್ರಕರಣಕ್ಕೂ ನನ್ನ ಪ್ರಕರಣಕ್ಕೂ ವ್ಯತ್ಯಾಸವಿದೆ. ಅವರು ಡಿನೋಟಿಫೈ ಮಾಡಿದ್ದರು. ನಾನು ಡಿನೋಟಿಫೈ ಮಾಡಿದ್ದೇನಾ? ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ, ಪತ್ರ ವ್ಯವಹಾರ ಇದೆಯಾ? ನನ್ನ ಯಾವುದೇ ಪಾತ್ರ ಈ ಪ್ರಕರಣದಲ್ಲಿ ಇಲ್ಲದ್ದರಿಂದ ಆತ್ಮಸಾಕ್ಷಿಯಂತೆ ನಾನು ಕೆಲಸ ಮಾಡುತ್ತೇನೆ’ ಎಂದು ಹೇಳಿದರು.  

‘ನಿವೇಶನ ಹಿಂದಿರುಗಿಸುವಿಕೆಗೆ ಸಂಬಂಧಿಸಿದಂತೆ ಪತ್ನಿ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಆಕೆಯ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಅವರು ಉಡುಗೊರೆ ರೂಪದಲ್ಲಿ 3 ಎಕರೆ 16 ಗುಂಟೆ ಜಮೀನು ನೀಡಿದ್ದರು. ಅದನ್ನು ಮುಡಾದವರು ಒತ್ತುವರಿ ಮಾಡಿಕೊಂಡು, ನಿವೇಶನಗಳನ್ನು ರಚಿಸಿ, ಮಾರಿಕೊಂಡಿದ್ದರು. ಅದಕ್ಕೆ ಬದಲಿ ನಿವೇಶನ ಕೋರಿದ್ದು, ವಿಜಯನಗರದ 3 ಮತ್ತು 4ನೇ ಹಂತದಲ್ಲಿ ನಿವೇಶನಗಳನ್ನು ಮಂಜೂರು ಮಾಡಲಾಗಿತ್ತು. ವಿಜಯನಗರದಲ್ಲೇ ನಿವೇಶನ ನೀಡುವಂತೆ ನನ್ನ ಪತ್ನಿ ಕೇಳಿರಲಿಲ್ಲ. ಈಗ ಅದು ದೊಡ್ಡ ವಿವಾದವಾಗಿದೆ’ ಎಂದರು.

‘ಈ ಪ್ರಕರಣದಿಂದ ಪತಿಯ ತೇಜೋವಧೆಯಾಗುತ್ತಿರುವುದು, ವಿರೋಧಿಗಳು ರಾಜಕೀಯ ದ್ವೇಷ, ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಿರುವುದರಿಂದ ಮನನೊಂದು ನಿವೇಶನಗಳನ್ನು ಮರಳಿಸಿದ್ದಾರೆ’ ಎಂದು ಹೇಳಿದರು. 

ನನ್ನನ್ನು ಹಿಟ್ ಆ್ಯಂಡ್ ರನ್ ಪಾರ್ಟಿ ಎಂದು ಕರೆಯುತ್ತಾರೆ. ಹಾಗಾದರೆ ಸಿದ್ದರಾಮಯ್ಯ ಅವರೇನು ಯೂ ಟರ್ನಾ? ನಿವೇಶನ ವಾಪಸ್ ತರಾತುರಿ ನಿರ್ಧಾರ ಮಾಡುವಂತೆ ಯಾರು ಹೇಳಿಕೊಟ್ಟಿದ್ದು? ಎಚ್‌.ಡಿ ಕುಮಾರಸ್ವಾಮಿ, ಕೇಂದ್ರ ಸಚಿವ
ತಪ್ಪೇ ಮಾಡಿಲ್ಲ, ನಾನು ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಆರ್ಭಟಿಸುತ್ತಿದ್ದ ಸಿದ್ದರಾಮಯ್ಯ, ₹62 ಕೋಟಿ ನನಗೆ ಕೊಡ್ತಾರಾ? ನಾನ್ಯಾಕೆ ಸೈಟು ವಾಪಸ್‌ ಕೊಡಲಿ ಎನ್ನುತ್ತಿದ್ದರು, ಅವರಿಗೆ ಈಗೇನಾಯಿತು? 
ಬಿ.ವೈ.ವಿಜಯೇಂದ್ರ, ಅಧ್ಯಕ್ಷ, ರಾಜ್ಯ ಬಿಜೆಪಿ
ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ? ಕದ್ದ ಮಾಲನ್ನು ವಾಪಸ್‌ ಕೊಟ್ಟ ತಕ್ಷಣ ಕಳ್ಳತನ ಮಾಫಿ ಆಗಿಬಿಡುತ್ತದೆಯೇ?
ಆರ್‌.ಅಶೋಕ, ವಿರೋಧಪಕ್ಷದ ನಾಯಕ

ಸಿದ್ದರಾಮಯ್ಯ ‘ಮೂಲ ಫಲಾನುಭವಿ’: ಇ.ಡಿ

 ‘ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯವು ಪ್ರಕರಣದ ಮಾಹಿತಿ ವರದಿಯಲ್ಲಿ  (ಇಸಿಐಆರ್‌) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಮೂಲ ಫಲಾನುಭವಿ’ ಎಂದು ಉಲ್ಲೇಖಿಸಿದೆ’ ಎಂಬುದು ಗೊತ್ತಾಗಿದೆ. ಲೋಕಾಯುಕ್ತದ ಎಫ್‌ಐಆರ್ ಆಧಾರದಲ್ಲಿ ಇ.ಡಿ ಸೋಮವಾರ ಇಸಿಐಆರ್ ದಾಖಲಿಸಿತ್ತು.

‘ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಪತ್ನಿಗೆ ನಿವೇಶನ ಹಂಚಿಕೆಯಾಗಿದ್ದರೂ ಅದರ ಲಾಭ ಸಿದ್ದರಾಮಯ್ಯಗೂ ಆಗಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಹೀಗಾಗಿ ಅವರನ್ನು ‘ಮೂಲ ಫಲಾನುಭವಿ’ ಎಂದು ಉಲ್ಲೇಖಿಸಲಾಗಿದೆ’ ಎಂದು ಇ.ಡಿ ಮೂಲಗಳು ವಿವರಿಸಿವೆ.

ಯಾವುದೇ ಅಕ್ರಮ ವ್ಯವಹಾರಗಳ ಅಂತಿಮ ಲಾಭ ಯಾರಿಗೆ ದೊರೆಯುತ್ತದೆಯೋ ಅವರನ್ನೇ ‘ಮೂಲ ಫಲಾನುಭವಿ’ ಎಂದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಗುರುತಿಸುತ್ತದೆ. ಅಂತಹ ವ್ಯಕ್ತಿ ನೇರವಾಗಿ ಈ ವ್ಯವಹಾರದಲ್ಲಿ ಭಾಗಿಯಾಗಿರಲೇಬೇಕು ಎಂದೇನಿಲ್ಲ. ಪರೋಕ್ಷವಾಗಿ ಪ್ರಭಾವ ಬೀರಿದ್ದರೂ ಮೌಖಿಕ ಆದೇಶ ಅಥವಾ ಸೂಚನೆ ನೀಡಿದ್ದರೂ ಆತ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾನೆ ಎಂದೇ ಈ ಕಾನೂನು ಪರಿಗಣಿಸುತ್ತದೆ.

‘ಸಿದ್ದರಾಮಯ್ಯ ಯಾವುದೇ ಲಿಖಿತ ಆದೇಶ ನೀಡದೇ ಇದ್ದರೂ ಅವರ ವಿರುದ್ಧ ತನಿಖೆ ನಡೆಸಲು ಅವಕಾಶವಿದೆ. ಈ ಪ್ರಕರಣದಲ್ಲಿ ಅಪರಾಧ ಸಾಬೀತಾದರೆ ತಪ್ಪಿತಸ್ಥರಿಗೆ ಕನಿಷ್ಠ 3 ವರ್ಷದಿಂದ ಗರಿಷ್ಠ 7 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದಾಗಿದೆ’ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

ಲೋಕಾಯುಕ್ತದ ಎಫ್‌ಐಆರ್ ಆಧಾರದಲ್ಲಿ ಇ.ಡಿ ಸೋಮವಾರ ಇಸಿಐಆರ್ ದಾಖಲಿಸಿತ್ತು. ‘ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಪತ್ನಿಗೆ ನಿವೇಶನ ಹಂಚಿಕೆಯಾಗಿದ್ದರೂ ಅದರ ಲಾಭ ಸಿದ್ದರಾಮಯ್ಯಗೂ ಆಗಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಹೀಗಾಗಿ ಅವರನ್ನು ‘ಮೂಲ ಫಲಾನುಭವಿ’ ಎಂದು ಉಲ್ಲೇಖಿಸಲಾಗಿದೆ’ ಎಂದು ಇ.ಡಿ ಮೂಲಗಳು ವಿವರಿಸಿವೆ. ಯಾವುದೇ ಅಕ್ರಮ ವ್ಯವಹಾರಗಳ ಅಂತಿಮ ಲಾಭ ಯಾರಿಗೆ ದೊರೆಯುತ್ತದೆಯೋ ಅವರನ್ನೇ ‘ಮೂಲ ಫಲಾನುಭವಿ’ ಎಂದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಗುರುತಿಸುತ್ತದೆ. ಪರೋಕ್ಷವಾಗಿ ಪ್ರಭಾವ ಬೀರಿದ್ದರೂ ಮೌಖಿಕ ಆದೇಶ ಅಥವಾ ಸೂಚನೆ ನೀಡಿದ್ದರೂ ಆತ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾನೆ ಎಂದೇ ಈ ಕಾನೂನು ಪರಿಗಣಿಸುತ್ತದೆ.

ಉಡುಗೊರೆಗೂ ಅನ್ವಯ...

ಪಿಎಂಎಲ್‌ಎ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಹಣಕಾಸಿನ ವ್ಯವಹಾರವೇ ನಡೆದಿರಬೇಕು ಎಂದೇನಿಲ್ಲ. ಈ ಕಾಯ್ದೆಯಲ್ಲಿ ‘ವರ್ಗಾವಣೆ’ ಎಂಬುದು ಹಣ ಚರಾಸ್ತಿ ಸ್ಥಿರಾಸ್ತಿಗೂ ಅನ್ವಯವಾಗುತ್ತದೆ. ಜತೆಗೆ ಉಡುಗೊರೆ ನೀಡುವುದು ಮತ್ತು ಪಡೆದುಕೊಳ್ಳುವುದನ್ನೂ ‘ವರ್ಗಾವಣೆ’ ಎಂದೇ ವ್ಯಾಖ್ಯಾನಿಸಲಾಗಿದೆ. ‘ಪಾರ್ವತಿ ಅವರಿಗೆ ಅವರ ಸೋದರ ಅರಿಶಿನ–ಕುಂಕುಮಕ್ಕೆ ಎಂದು ಜಮೀನು ಉಡುಗೊರೆ ನೀಡಿದ್ದಾರೆ. ಆ ಜಮೀನು ಖರೀದಿಯೇ ಅಕ್ರಮ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಕಾರಣ ಪಿಎಂಎಲ್‌ಎ ಅಡಿ ಜಾರಿ ನಿರ್ದೇಶನಾಲಯವು ಈ ಬಗ್ಗೆ ತನಿಖೆ ನಡೆಸಲು ಅವಕಾಶವಿದೆ’ ಎಂದು ಕಾನೂನು ತಜ್ಞರು ಹೇಳಿದ್ದಾರೆ.  

ದಾಖಲೆ ಸಲ್ಲಿಸುವಂತೆ ಸಮನ್ಸ್‌
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್‌ ನೀಡಿದ್ದು, ‘ದೂರಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ’ ಎಂದು ಸೂಚಿಸಿದೆ ಎಂದು ಗೊತ್ತಾಗಿದೆ. ‘ಅಕ್ಟೋಬರ್ 3ರ ಬೆಳಿಗ್ಗೆ 11ರ ಹೊತ್ತಿಗೆ ದಾಖಲೆಗಳನ್ನು ಇ–ಮೇಲ್‌ ಮೂಲಕ ಸಲ್ಲಿಸಿ ಎಂದು ಸೂಚಿಸಲಾಗಿದೆ’ ಎಂದು ಇ.ಡಿ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT