ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿಗೂ ನಂದಿನಿ ಹಾಲು: ಅಕ್ಟೋಬರ್‌ನಿಂದ ನಿತ್ಯ 2.5 ಲಕ್ಷ ಲೀಟರ್‌ ಪೂರೈಕೆ

ಅಕ್ಟೋಬರ್‌ನಿಂದ ನಿತ್ಯ 2.5 ಲಕ್ಷ ಲೀಟರ್‌ ಪೂರೈಕೆಗೆ ಸಿದ್ಧತೆ
Published 22 ಆಗಸ್ಟ್ 2024, 23:59 IST
Last Updated 22 ಆಗಸ್ಟ್ 2024, 23:59 IST
ಅಕ್ಷರ ಗಾತ್ರ

ನವದೆಹಲಿ: ’ಮದರ್ ಡೇರಿ’ ಹಾಗೂ ’ಅಮೂಲ್‌’ನ ಮಾರುಕಟ್ಟೆಗೆ ಲಗ್ಗೆ ಹಾಕಲು ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್‌) ಸಜ್ಜಾಗಿದೆ. ರಾಷ್ಟ್ರ ರಾಜಧಾನಿಗೆ ಅಕ್ಟೋಬರ್‌ನಿಂದ ಪ್ರತಿದಿನ 2.5 ಲಕ್ಷ ಲೀಟರ್ ನಂದಿನಿ ಹಾಲು ಪೂರೈಕೆ ಮಾಡಲು ಸಿದ್ಧತೆ ನಡೆಸಿದೆ. 

ಈ ಸಂಬಂಧ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್‌ ನೇತೃತ್ವದ ಅಧಿಕಾರಿಗಳ ತಂಡವು ನವದೆಹಲಿಯಲ್ಲಿ ಬುಧವಾರ ಹಾಗೂ ಗುರುವಾರ ಸುಮಾರು 70 ವಿತರಕರ ಜತೆಗೆ ಸಭೆಗಳನ್ನು ನಡೆಸಿ ಸಮಾಲೋಚಿಸಿದೆ. 

‘ಕರ್ನಾಟಕದಲ್ಲಿ ಈಗ ಅಂದಾಜು 1 ಕೋಟಿ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಸದ್ಯ ನಾವು ಆಂಧ್ರ ಪ್ರದೇಶ (ನಿತ್ಯ 2.5 ಲಕ್ಷ ಲೀಟರ್‌), ಮಹಾರಾಷ್ಟ್ರ (ನಿತ್ಯ 2.5 ಲಕ್ಷ ಲೀಟರ್) ಹಾಗೂ ತಮಿಳುನಾಡಿಗೆ (40 ಸಾವಿರ ಲೀಟರ್‌) ಹಾಲು ಪೂರೈಕೆ ಮಾಡುತ್ತಿದ್ದೇವೆ. ಇದೀಗ ಉತ್ತರ ಭಾರತದ ಮಾರುಕಟ್ಟೆಗೆ ನಂದಿನಿ ಹಾಲು ಪೂರೈಕೆ ಮಾಡಲು ತೀರ್ಮಾನಿಸಿದ್ದೇವೆ’ ಎಂದು ಎಂ.ಕೆ. ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಆರಂಭಿಕ ಹಂತದಲ್ಲಿ ನವದೆಹಲಿಗೆ ಪ್ರತಿದಿನ 2.5 ಲಕ್ಷ ಲೀಟರ್ ಹಾಕಲು ಪೂರೈಸಲು ಯೋಜನೆ ರೂಪಿಸಿದ್ದೇವೆ. ಆರು ತಿಂಗಳೊಳಗೆ 5 ಲಕ್ಷ ಲೀಟರ್‌ಗೆ ಏರಿಸುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಅವರು ತಿಳಿಸಿದರು. 

‘ನಾವು ನಂದಿನಿ ಹಾಲನ್ನು ರೈತರಿಂದ ಲೀಟರ್‌ಗೆ ₹32ಕ್ಕೆ ಖರೀದಿಸುತ್ತಿದ್ದೇವೆ. ನವದೆಹಲಿಯಲ್ಲಿ ಹಾಲಿನ ಬೆಲೆ ಕನಿಷ್ಠ ₹54 ಇದೆ. ಕರ್ನಾಟಕದಿಂದ ಇಲ್ಲಿಗೆ ಹಾಲು ಸಾಗಣೆ ಮಾಡುವುದು ದೊಡ್ಡ ಸವಾಲು. ಸಾಗಣೆಗೆ ಕನಿಷ್ಠ 53 ಗಂಟೆಗಳು ಬೇಕು. ಇದರ ನಡುವೆಯೂ, ದೆಹಲಿಗೆ ಹಾಲು ಪೂರೈಕೆ ಮಾಡಿದರೆ ಕೆಎಂಎಫ್‌ಗೆ ಹೆಚ್ಚಿನ ಲಾಭ ಉಂಟಾಗಲಿದೆ. ರಾಜ್ಯದ ರೈತರಿಗೂ ಅನುಕೂಲವಾಗಲಿದೆ’ ಎಂದು ಅವರು ತಿಳಿಸಿದರು. 

’ಹಾಸನ ಜಿಲ್ಲಾ ಹಾಲು ಒಕ್ಕೂಟದ ಮೂಲಕ ಇಲ್ಲಿ ಸಮೀಕ್ಷೆ ನಡೆಸಿ ಮಾರುಕಟ್ಟೆಯ ಮಾಹಿತಿ ಕಲೆ ಹಾಕಿದ್ದೇವೆ. ಹಾಸನ ಒಕ್ಕೂಟವು ಇಲ್ಲಿಗೆ ಹಾಲು ಪೂರೈಕೆ ಮಾಡಲಿದೆ. ಮುಂದಿನ ದಿನಗಳಲ್ಲಿ ಭೋಪಾಲ್‌, ಇಂದೋರ್‌ ಹಾಗೂ ಉಜ್ಜೈನಿಯಲ್ಲಿ ನಂದಿನಿ ಹಾಲು ಪೂರೈಸಲು ಯೋಜಿಸಲಾಗಿದೆ. ಇದಕ್ಕಾಗಿ ಶಿವಮೊಗ್ಗ ಜಿಲ್ಲಾ ಹಾಲು ಒಕ್ಕೂಟದ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು. 

’ನಂದಿನಿಯ ಉತ್ಪನ್ನಗಳನ್ನು ಮಾರಾಟ ಮಾಡಲು ಕರ್ನಾಟಕ ಭವನದಲ್ಲಿ ಮಳಿಗೆ ಆರಂಭಿಸಲು ‍‍ಪ್ರಸ್ತಾವ ಸಲ್ಲಿಸಲಾಗಿದೆ. ರಾಜಧಾನಿಯ ಪ್ರಮುಖ ಸ್ಥಳವೊಂದರಲ್ಲಿ ನಂದಿನಿ ಮಳಿಗೆ ತೆರೆಯಲು ಜಾಗ ನೀಡುವಂತೆ ದೆಹಲಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಜತೆಗೆ, ಇಲ್ಲಿನ ಸ್ಥಳೀಯ ಅಂಗಡಿಗಳಲ್ಲಿ ನಂದಿನಿ ತುಪ್ಪ ಮಾರಾಟಕ್ಕೆ ಯೋಜಿಸಿದ್ದೇವೆ’ ಎಂದರು. 

ವಿತರಕರ ಸಭೆಯಲ್ಲಿ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್‌ ಮಾತನಾಡಿದರು. ಕೆಎಂಎಫ್‌ ಅಧಿಕಾರಿಗಳು ಚಿತ್ರದಲ್ಲಿದ್ದಾರೆ. 
ವಿತರಕರ ಸಭೆಯಲ್ಲಿ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್‌ ಮಾತನಾಡಿದರು. ಕೆಎಂಎಫ್‌ ಅಧಿಕಾರಿಗಳು ಚಿತ್ರದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT