ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಸ್ತಿ ತೆರಿಗೆ ಸಂಗ್ರಹದಲ್ಲಿ ಹಿಂದೆ: ಪ್ರಿಯಾಂಕ್‌ ಖರ್ಗೆ ಅಸಮಾಧಾನ

Published 3 ಆಗಸ್ಟ್ 2024, 0:17 IST
Last Updated 3 ಆಗಸ್ಟ್ 2024, 0:17 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಣೆಯ ಗುರಿ ಮುಟ್ಟಲು ಅಧಿಕಾರಿಗಳು ವಿಫಲವಾಗಿರುವ ಬಗ್ಗೆ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಶುಕ್ರವಾರ ನಡೆದ ವಿಡಿಯೊ ಸಂವಾದದಲ್ಲಿ ಮಾತನಾಡಿದ ಅವರು, ‘ತೆರಿಗೆಯನ್ನು ಪಂಚಾಯತಿಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆಯಾ ಪಂಚಾಯಿತಿಯವರು ತೆರಿಗೆ ಸಂಗ್ರಹಿಸಲು ಹೆಚ್ಚು ಆಸಕ್ತಿವಹಿಸಬೇಕು’ ಎಂದು ನಿರ್ದೇಶನ ನೀಡಿದರು.

ರಾಜ್ಯದಲ್ಲಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 1.38 ಕೋಟಿ ಆಸ್ತಿಗಳಿದ್ದು, ಇವುಗಳಲ್ಲಿ 1.33 ಕೋಟಿ ಆಸ್ತಿಗಳ ಸಮೀಕ್ಷೆ ನಡೆಸಲಾಗಿದೆ. ಪ್ರತಿ ಗ್ರಾಮದ ಮ್ಯಾಪಿಂಗ್‌ ಮಾಡುವ ಮೂಲಕ ವೈಜ್ಞಾನಿಕವಾಗಿ ತೆರಿಗೆ ಸಂಗ್ರಹಿಸುವಂತೆ ಅವರು ಸಲಹೆ ನೀಡಿದರು.

’ಬೆಳಗಾವಿ ವಿಮಾನ ನಿಲ್ದಾಣದಂತಹ ಸಂಸ್ಥೆಯೇ ತೆರಿಗೆ ಪಾವತಿಸುತ್ತಿಲ್ಲ’ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದಾಗ, ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲ ಸಂಸ್ಥೆಗಳು, ಕೈಗಾರಿಕೆಗಳು, ಉದ್ಯಮಿಗಳ ಪಟ್ಟಿ ಮಾಡಿ ಪ್ರಚಾರ ಮಾಡಿ‘ ಎಂದು ಸಚಿವರು ಸೂಚಿಸಿದರು.

‘ಇ-ಸ್ವತ್ತು‘ಗೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ಬರುತ್ತಿವೆ. ಜನರಿಗೆ ಸುಲಭವಾಗಿ ಇ-ಸ್ವತ್ತು ಪ್ರಮಾಣಪತ್ರಗಳು ಸಿಗುವಂಥ ವಾತಾವರಣವನ್ನು ಅಧಿಕಾರಿಗಳು ಸೃಷ್ಟಿಸಬೇಕು. ತಪ್ಪಿದರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಿಯಾಂಕ್‌ ಎಚ್ಚರಿಸಿದರು.

ಗ್ರಾಮೀಣ ನೀರು ಸರಬರಾಜು ಯೋಜನೆಯ ಕಾಮಗಾರಿಗಳಲ್ಲಿಯೂ ಲೋಪಗಳಾಗುತ್ತಿದ್ದು, ಕಳಪೆ ಕಾಮಗಾರಿಗಳಿಗೆ ಹಣ ಪಾವತಿ ಮಾಡಿದ್ದು ಕಂಡು ಬಂದರೆ, ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಸಚಿವರು ಎಚ್ಚರಿಸಿದರು.

ಸಭೆಯಲ್ಲಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್‌, ಪಂಚಾಯತ್‌ ರಾಜ್‌ ಆಯುಕ್ತೆ ಅರುಂಧತಿ ಚಂದ್ರಶೇಖರ್‌, ನರೇಗಾ ಆಯುಕ್ತ ಪವನ್‌ ಕುಮಾರ್ ಮಾಲಪಾಟಿ, ಗ್ರಾಮೀಣ ನೀರು ಸರಬರಾಜು ಆಯುಕ್ತ ಕೆ. ನಾಗೇಂದ್ರ ಪ್ರಸಾದ್‌, ಇ-ಆಡಳಿತ ನಿರ್ದೇಶಕಿ ನಂದಿನಿದೇವಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT