ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ ನಗರಿಗೆ ಮೋದಿ ಇಂದು: ₹3,783 ಕೋಟಿ ಮೊತ್ತದ ಯೋಜನೆಗಳ ಲೋಕಾರ್ಪಣೆ

Last Updated 2 ಸೆಪ್ಟೆಂಬರ್ 2022, 7:32 IST
ಅಕ್ಷರ ಗಾತ್ರ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಕಡಲ ನಗರಿ ಸಜ್ಜಾಗಿದೆ. ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಮತ್ತು ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್‌ನ (ಎಂಆರ್‌ಪಿಎಲ್‌) ಒಟ್ಟು ₹3,783 ಕೋಟಿ ಮೊತ್ತದ ಎಂಟು ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವನ್ನು ಪ್ರಧಾನಿ ನೆರವೇರಿಸುವರು.

ಶುಕ್ರವಾರ (ಸೆ. 2) ಕೇರಳ ಕೊಚ್ಚಿಯಿಂದ ಮಧ್ಯಾಹ್ನ 1 ಗಂಟೆಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. 1.20ಕ್ಕೆ ಹೆಲಿಕಾಪ್ಟರ್‌ ಮೂಲಕ ಎನ್ಎಂಪಿಎ ಹೆಲಿಪ್ಯಾಡ್ ತಲುಪುವರು. 1.30ರಿಂದ 2.45ರವರೆಗೆ ಬಂಗ್ರಕುಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆಯುವ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸುವರು. 2.45ರಿಂದ 3.45ರವರೆಗೆ ಎನ್‌ಎಂಪಿಎದಲ್ಲಿ ಬಿಜೆಪಿ ರಾಜ್ಯ ಪ್ರಮುಖರ ಜೊತೆ ಚರ್ಚಿಸುವರು.

ಸಮಾವೇಶದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಸರ್ಬಾನಂದ ಸೋನೊವಾಲ್, ಶಂತನು ಠಾಕೂರ್, ಶೋಭಾ ಕರಂದ್ಲಾಜೆ ಭಾಗವಹಿಸುವರು. ‘ಪ್ರಧಾನಿ ಸಮಾವೇಶದಲ್ಲಿ ಪಕ್ಷದ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು, ವಿವಿಧ ಯೋಜನೆಗಳ 70 ಸಾವಿರಕ್ಕೂ ಅಧಿಕ ಫಲಾನುಭವಿಗಳು ಭಾಗವಹಿಸಲಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಮೋದಿ ಭೇಟಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮೈಲಿಗಲ್ಲು ಆಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಪ್ರತಿಕ್ರಿಯಿಸಿದರು.

ಕಂಚಿನ ಮೂರ್ತಿ ಉಡುಗೊರೆ
‘ಕರಾವಳಿ ಪರಶುರಾಮ ಸೃಷ್ಟಿಯ ನೆಲ. ಸೃಷ್ಟಿಕರ್ತನ ಪ್ರತಿಮೆಯನ್ನು ಪ್ರಧಾನ ಮಂತ್ರಿಯವರಿಗೆ ನೀಡಬೇಕು ಎಂಬುದು ಅಭಿಲಾಷೆ. ಅಲ್ಲದೆ, ಕಾರ್ಕಳದಲ್ಲಿ ಪರಶುರಾಮ ಪಾರ್ಕ್ ನಿರ್ಮಾಣವಾಗಲಿದ್ದು, ಅಲ್ಲಿ ಸ್ಥಾಪನೆಯಾಗಲಿರುವ ಮೂರ್ತಿಯ ಯಥಾವತ್‌ ಮೂರ್ತಿಯನ್ನು ನೀಡಲಾಗುತ್ತದೆ. ಕಂಚಿನ ಮೂರ್ತಿಯು 2.5 ಅಡಿ ಉದ್ದ ಇದೆ’ ಎಂದು ಸಚಿವ
ಸುನಿಲ್ ಕುಮಾರ್ ತಿಳಿಸಿದರು.

ಸರ್ಕಾರಿ ಕಾರ್ಯಕ್ರಮ ಇದೇ ಮೊದಲು
ನಾಲ್ಕೂವರೆ ದಶಕಗಳ ಬಳಿಕ ಪ್ರಧಾನಿಯೊಬ್ಬರು ಅಧಿಕೃತ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುತ್ತಿದ್ದಾರೆ. 1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಎನ್‌ಎಂಪಿಟಿ ಉದ್ಘಾಟನೆಗೆ ಬಂದಿದ್ದರು.

ಈ ಹಿಂದೆ ನರೇಂದ್ರ ಮೋದಿ, ಚುನಾವಣಾ ಪ್ರಚಾರ, ಉಡುಪಿಯ ಧರ್ಮ ಸಂಸತ್‌ ಸಭೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮ, ಲಕ್ಷದ್ವೀಪ ಭೇಟಿ ವೇಳೆ ಮಂಗಳೂರಿನಲ್ಲಿ ವಾಸ್ತವ್ಯ ಮಾಡಿದ್ದರೂ, ಇಲ್ಲಿ ಅಧಿಕೃತ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು.

ತುಳುಗೆ ಸ್ಥಾನಮಾನ ನೀಡಿ
‘ಬಹುವರ್ಷಗಳ ಬೇಡಿಕೆಯಾಗಿರುವ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ, ತುಳುವನ್ನು ರಾಜ್ಯಭಾಷೆ ಎಂದು ಘೋಷಿಸುವ ನಿರ್ಧಾರ ಪ್ರಕಟಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT