ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂತ ಎದೆಬಡಿತದ ಮರುಚಾಲನೆಗೆ ಲಭ್ಯವಿರಲಿ ಎಇಡಿ

ಹೃದಯಾಘಾತ: ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಸಿಗಬೇಕು ತುರ್ತು ಚಿಕಿತ್ಸೆ
Last Updated 4 ನವೆಂಬರ್ 2021, 22:15 IST
ಅಕ್ಷರ ಗಾತ್ರ

ಬೆಂಗಳೂರು: ಚಿತ್ರನಟ ಪುನೀತ್‌ ರಾಜ್‌ ಕುಮಾರ್‌ ಅವರ ನಿಧನದ ಬೆನ್ನಲ್ಲೇ, ಹೃದಯಾಘಾತ ಸಂಭವಿಸಿದಾಗ ತುರ್ತು ಚಿಕಿತ್ಸೆ ನೀಡಲು ವ್ಯವಸ್ಥೆ ಎಷ್ಟು ಸಜ್ಜಾಗಿದೆ ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ನಿಂತು ಹೋದ ಎದೆಬಡಿತವನ್ನು ಮತ್ತೆ ಆರಂಭಿಸಲು ಬಳಸುವ ‘ಆಟೊಮೇಟೆಡ್‌ ಎಕ್ಸ್‌ಟರ್ನಲ್ ಡಿಫೈಬ್ರಿಲ್ಲೇಟರ್ಸ್‌’ (ಎಇಡಿ) ಸಾಧನಗಳು ಸಾರ್ವಜನಿಕ ಬಳಕೆಗೆ ಅಲ್ಲಲ್ಲಿ ಲಭ್ಯವಿರಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ನಗರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಬಸ್‌ ಟರ್ಮಿನಲ್‌, ಮೆಟ್ರೊ ನಿಲ್ದಾಣ, ರೈಲು ನಿಲ್ದಾಣ, ದೊಡ್ಡ ಉದ್ಯಾನ, ಮಾರುಕಟ್ಟೆ, ಬಿಬಿಎಂಪಿ, ವಿಧಾನಸೌಧ ಮುಂತಾದ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಇಂತಹ ಸಾಧನ ಹೊಂದಿರಬೇಕು. ತರಬೇತಿ ನೀಡಿದರೆ ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಯಾರು ಬೇಕಾದರೂ ಈ ಸಾಧನವನ್ನು ಸುಲಭವಾಗಿ ಬಳಸಬಹುದು. ಹೃದಯಾಘಾತಕ್ಕೆ ಒಳಗಾಗುವವರ ಜೀವ ಉಳಿಸಬಹುದು ಎನ್ನುತ್ತಾರೆ ತಜ್ಞರು.

‘ಹೃದಯಾಘಾತದಿಂದ ಕುಸಿದುಬಿದ್ದವರಿಗೆ ಐದು ನಿಮಿಷಗಳೊಳಗೆ ತುರ್ತು ಚಿಕಿತ್ಸೆ ಲಭಿಸಬೇಕು. ಕುಸಿದ ತಕ್ಷಣವೇ ಅವರ ಎದೆಗೆ ಲಘು ಒತ್ತಡ ಹಾಕಿ ಪ್ರಥಮ ಚಿಕಿತ್ಸೆ ನೀಡಬೇಕು. ಎದೆಬಡಿತ ನಿಂತಿದ್ದರೆ ಎಇಡಿ ಮೂಲಕ ಅದನ್ನು ಮತ್ತೆ ಆರಂಭಿಸಬಹುದು’ ಎಂದು ವೈಟಲ್‌ ಹೆಲ್ತ್‌ ಕೇರ್‌ನ ನಿರ್ದೇಶಕ ಡಾ.ಡಿ.ದಿನಕರ್‌ ತಿಳಿಸಿದರು. ತುರ್ತು ಚಿಕಿತ್ಸೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಅವರು ಏರ್ಪಡಿಸುತ್ತಿದ್ದಾರೆ.

‘ಕಾರ್ಪೊರೇಟ್‌ ಕಂಪನಿಗಳ ಕಚೇರಿಗಳು, ಮಾಲ್‌ಗಳು, ಐಷಾರಾಮಿ ಹೋಟೆಲ್‌ಗಳು ಸಾಮಾನ್ಯವಾಗಿ ಎಇಡಿಗಳನ್ನು ಹೊಂದಿರುತ್ತವೆ. ಅಲ್ಲಿನ ಸಿಬ್ಬಂದಿಯೂ ಇದರ ಬಳಕೆಯ ತರಬೇತಿ ಪಡೆದಿರುತ್ತಾರೆ. ಆದರೆ, ಹೆಚ್ಚು ಜನ ಸೇರುವ ಇತರ ಸಾರ್ವಜನಿಕ ತಾಣಗಳಲ್ಲೂ ಇದರ ಅಗತ್ಯ ತುಂಬಾ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಎಇಡಿಗೆ ಹೆಚ್ಚೆಂದರೆ ₹1.5 ಲಕ್ಷದಿಂದ ₹ 2.5 ಲಕ್ಷ ದರ ಇರಬಹುದು. ಇದನ್ನು ಹತ್ತಾರು ವರ್ಷ ಬಳಸಬಹುದು. ಒಮ್ಮೆ ಬಳಸಿದ ಪ್ಯಾಡ್‌ ಬದಲಾಯಿಸಬೇಕಾಗುತ್ತದೆ. ಇವುಗಳಿಗೆ ₹2 ಸಾವಿರದಿಂದ ₹3 ಸಾವಿರ ದರ ಇದೆ. ಎಇಡಿಯಿಂದ ಉಳಿಯಬಹುದಾದ ಅಮೂಲ್ಯ ಜೀವಗಳಿಗೆ ಹೋಲಿಸಿದರೆ ಈ ಮೊತ್ತ ಏನೇನೂ ಅಲ್ಲ’ ಎಂದು ಅವರು ಹೇಳಿದರು.

ಬಿಬಿಎಂಪಿಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಕಡೆಗಳಲ್ಲಿ ಎಇಡಿಗಳು ಲಭ್ಯವಿರಬೇಕು. ಈ ಬಗ್ಗೆ ಜನರಿಗೂ ಮಾಹಿತಿ ಇರಬೇಕು. ಇದರ ಬಳಕೆ ಬಗ್ಗೆ ಜನರಿಗೆ ತರಬೇತಿ ಒದಗಿಸಬೇಕು ಎಂದು ಸಿಟಿಜನ್ಸ್‌ ಫಾರ್ ಸಿಟಿಜನ್ಸ್‌ ಸಂಘಟನೆಯು 2020ರ ಜನವರಿಯಲ್ಲಿ ಬಿಬಿಎಂಪಿಗೆ ಮನವಿ ಸಲ್ಲಿಸಿತ್ತು.

‘ನಮ್ಮ ಕೋರಿಕೆಗೆ ಆಗಿನ ಮೇಯರ್‌ ಗೌತಮ್‌ ಕುಮಾರ್‌ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದರು. ಆದರೆ, ಆ ಬಳಿಕ ಬಿಬಿಎಂಪಿ ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ’ ಎಂದು ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ ಸಂಘಟನೆಯ ರಾಜ್‌ಕುಮಾರ್ ದುಗರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಪುನೀತ್‌ ರಾಜ್‌ಕುಮಾರ್‌ ಸಾವಿನ ಬಳಿಕ ಈ ವಿಚಾರವನ್ನು ಹಾಗೂ ಮನವಿಯ ಪ್ರತಿಯನ್ನು ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಸರ್ಕಾರ ಈಗಲಾದರೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಕಡೆ ಎಇಡಿ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಆಸಕ್ತರಿಗೆ ಇದರ ಬಳಕೆ ಬಗ್ಗೆ ತಿಳಿಸಿಕೊಡಬೇಕು’ ಎಂದು ಒತ್ತಾಯಿಸಿದರು.

‘ಎಇಡಿ ಬಳಕೆಗೆ ಸೂಕ್ತ ತರಬೇತಿ ಅಗತ್ಯ’

ಹೃದಯಾಘಾತಕ್ಕೊಳಗಾದವರ ಜೀವ ಉಳಿಸುವಲ್ಲಿ ಎಇಡಿ ನೆರವಾಗುತ್ತದೆ. ಹೆಚ್ಚು ಜನ ಸೇರುವ ಕಡೆಗಳಲ್ಲಿ ಈ ಸಾಧನವನ್ನು ಹೊಂದಿರುವುದು ಒಳ್ಳೆಯದೇ. ಆದರೆ, ಇದರ ಬಳಕೆಗೆ ಸೂಕ್ತ ತರಬೇತಿಯೂ ಅಗತ್ಯ. ಹೃದಯಾಘಾತಕ್ಕೊಳಗಾದವರಿಗೆ ಪ್ರಥಮ ಚಿಕಿತ್ಸೆ ನೀಡುವ ಹಾಗೂ ಎಇಡಿ ಬಳಕೆಯ ಕುರಿತಾದ ವಿಡಿಯೊಗಳನ್ನು ಇಂತಹ ಕಡೆ ಪ್ರಸಾರ ಮಾಡಬಹುದು. ಗೃಹರಕ್ಷಕ ದಳ, ಭದ್ರತಾ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿಗೂ ಇದರ ಬಳಕೆ ಬಗ್ಗೆ ತರಬೇತಿ ನೀಡಬಹುದು’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT