ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್‌ ಫಲಿತಾಂಶ: ರಾಜ್ಯದ ಮೂವರು ಟಾಪರ್

Published 5 ಜೂನ್ 2024, 0:04 IST
Last Updated 5 ಜೂನ್ 2024, 0:04 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ ಮೂವರು ವಿದ್ಯಾರ್ಥಿಗಳು ಅಖಿಲ ಭಾರತ ಶ್ರೇಣಿಯಲ್ಲಿ 720ಕ್ಕೆ 720 ಅಂಕ ಗಳಿಸಿದ್ದಾರೆ.

ಮೊದಲ ಸ್ಥಾನ ಪಡೆದ ದೇಶದ 67 ವಿದ್ಯಾರ್ಥಿಗಳಲ್ಲಿ ಬೆಂಗಳೂರಿನ ನಾರಾಯಣ ಕಾಲೇಜಿನ ವಿದ್ಯಾರ್ಥಿ ಸ್ಯಾಮ್‌ ಶ್ರೇಯಸ್‌ ಜೋಸೆಫ್, ಚೈತನ್ಯ ಶಿಕ್ಷಣ ಸಂಸ್ಥೆಯ ಕಲ್ಯಾಣ್ ವಿ, ಹಾಗೂ ಮಂಗಳೂರು ಎಕ್ಸ್‌ಪರ್ಟ್‌ ಕಾಲೇಜಿನ ಅರ್ಜುನ್‌ ಕಿಶೋರ್‌ (99.99 ಪರ್ಸೆಂಟೈಲ್‌) ಸಹ ಇದ್ದಾರೆ.

ಕಲ್ಯಾಣ್‌ ಅವರು ಪಶುವೈದ್ಯಕೀಯ ವಿಜ್ಞಾನ, ಬಿ ಫಾರ್ಮಾ, ಡಿ ಫಾರ್ಮಾ ಮತ್ತು ಬಿಎಸ್‌ಸಿ ನರ್ಸಿಂಗ್‌ನಲ್ಲಿ ಮೊದಲ ರ್‍ಯಾಂಕ್‌ ಗಳಿಸುವ ಮೂಲಕ ಸಿಇಟಿಯಲ್ಲೂ ಅಗ್ರಸ್ಥಾನ ಪಡೆದಿದ್ದರು. ಅವರು ದೆಹಲಿಯ ‘ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ (ಎಐಎಂಎಸ್)’ ಸೇರುವ ಗುರಿ ಇಟ್ಟುಕೊಂಡಿದ್ದಾರೆ.

‘ವೈದ್ಯರೂ ಆಗಿರುವ ನನ್ನ ತಂದೆ ನನಗೆ ಸ್ಫೂರ್ತಿ. ಅವರ ಹಾದಿಯಲ್ಲಿ ನಾನು ನಡೆಯುವೆ. ದೆಹಲಿಯ ಏಮ್ಸ್‌ಗೆ ಪ್ರವೇಶ ಪಡೆಯುವೆ’ ಎಂದು ಶ್ರೇಯಸ್‌ ಜೋಸೆಫ್‌ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯದ ಆರು ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ 100ರ ಒಳಗಿನ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.  

ಕರ್ನಾಟಕದ 1,50,171 ವಿದ್ಯಾರ್ಥಿಗಳು ನೀಟ್‌ ಬರೆದಿದ್ದರು. ಅವರಲ್ಲಿ 89,088 ಅಭ್ಯರ್ಥಿಗಳು ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಹೇಳಿದೆ. 2023ರಲ್ಲಿ ರಾಜ್ಯದ 75,248 ವಿದ್ಯಾರ್ಥಿಗಳು, 2022 ರಲ್ಲಿ 72,262 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. 

ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. 1,065 ಅಭ್ಯರ್ಥಿಗಳು ಕನ್ನಡದಲ್ಲಿ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT