ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದ್ದಿಗಳು ಪರಾಮರ್ಶಿತ, ಪತ್ರಿಕೆಗಳು ಸುರಕ್ಷಿತ

Last Updated 23 ಮಾರ್ಚ್ 2020, 20:30 IST
ಅಕ್ಷರ ಗಾತ್ರ

ಪ್ರಿಯ ಓದುಗರೇ,

ದಿನ ಪತ್ರಿಕೆಗಳು, ನಿಯತಕಾಲಿಕೆಗಳು ನಾಗರಿಕ ಜಗತ್ತಿನ ಅವಿಭಾಜ್ಯ ಅಂಗ. ಹೊಣೆಗಾರಿಕೆಯ ಪ್ರತೀಕ. ಸೇವೆಯ ದ್ಯೋತಕ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇವತ್ತಿನ ಕೊರೊನಾ ಆಪತ್ತಿನತನಕ ಜನರಿಗೆ ಅಗತ್ಯ-ಅಧಿಕೃತ ಸುದ್ದಿ ಮುಟ್ಟಿಸುವಲ್ಲಿ ದಿನಪತ್ರಿಕೆಗಳು ಮಹತ್ವದ ಪಾತ್ರ ವಹಿಸಿವೆ. ಅರವತ್ತರ ದಶಕದಲ್ಲಿ ಹರಡಿದ ಪ್ಲೇಗ್‌ ಮಹಾಮಾರಿ, ಮಾರಣಾಂತಿಕ ಎಬೋಲಾ ಇತ್ಯಾದಿ ಕಾಯಿಲೆಗಳಿಂದ ಹಿಡಿದು ಈವರೆಗೆ ಹತ್ತು ಹಲವು ಸವಾಲು, ಸಂಕಷ್ಟಗಳನ್ನು ಎದುರಿಸಿ ಗೆದ್ದಿವೆ. ಈಗಲೂ ನಾವು ಅಂಥದ್ದೇ ಗಟ್ಟಿ ಸಂಕಲ್ಪ ಮಾಡಿದ್ದೇವೆ.

ಈಗಾಗಲೇ ನಮ್ಮ ಪತ್ರಿಕಾಲಯಗಳು, ಪ್ರಿಂಟಿಂಗ್‌ ಪ್ರೆಸ್‌ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆಗೆ ತಂದಿವೆ. ಪತ್ರಿಕೆಗಳು ಮುದ್ರಣಗೊಂಡು ಕೊನೆಯ ವಿತರಣಾ ಕೇಂದ್ರದವರೆಗೆ ತಲುಪುವವರೆಗೂ ಯಾಂತ್ರೀಕೃತ ವ್ಯವಸ್ಥೆಗಳಿವೆ. ಆಸ್ಪತ್ರೆಯಲ್ಲಿ ವೈದ್ಯರು ಎಷ್ಟು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬಹುದೋ ಪತ್ರಿಕಾ ಸಂಸ್ಥೆಗಳೂ ಅಷ್ಟೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿವೆ. ವಿಶ್ವ ಆರೋಗ್ಯ ಸಂಸ್ಥೆಯೇ ಪತ್ರಿಕೆಗಳಿಂದ ಕೊರೊನಾ ಹರಡುವ ಸಾಧ್ಯತೆಗಳು ಇಲ್ಲ ಎಂದು ಸ್ಪಷ್ಟಪಡಿಸಿದೆ. ಇತರೆ ಯಾವುದೇ ವೈದ್ಯಕೀಯ ಸಂಸ್ಥೆಗಳೂ ಪತ್ರಿಕೆಗಳಿಂದ ವೈರಸ್ ಹರಡುತ್ತದೆ ಎಂದು ಹೇಳಿಲ್ಲ. ಪತ್ರಿಕೆಗಳಿಂದ ಯಾವುದೇ ವೈರಸ್‌ ಹರಡಿದ ಒಂದೇ ಒಂದು ಉದಾಹರಣೆ ಇಲ್ಲ. ಇದೇ ಮೊದಲ ಬಾರಿ ಪತ್ರಿಕೆಗಳು ಇಂಥ ಸುಳ್ಳುವದಂತಿಯ ಅಪಾಯವನ್ನು ಎದುರಿಸುತ್ತಿವೆ. ಖಚಿತ ಮಾಹಿತಿಯನ್ನು ಕೊರೊನಾದಂತಹ ತುರ್ತು ಸಂದರ್ಭಗಳಲ್ಲಿ ಪಡೆಯುವ ವಿಶ್ವಾಸಾರ್ಹ ಮಾಧ್ಯಮವೆಂದರೆ ಅವು ಪತ್ರಿಕೆಗಳು ಎನ್ನುವುದನ್ನು ನಾವು ಮರೆಯಬಾರದು.

ಅನಗತ್ಯ ಭಯ ಬಿತ್ತಿ, ಸುಳ್ಳು ಸುದ್ದಿಗಳನ್ನು ಹರಡಿ ಸೋಷಿಯಲ್‌ ಮೀಡಿಯಾಗಳು, ವಾಟ್ಸ್‌ಆ್ಯಪ್‌ ಸಂದೇಶಗಳು ಜನರ ಜೀವನವನ್ನು ದುರ್ಬರಗೊಳಿಸುತ್ತಿರುವ ಇವತ್ತಿನ ಸಂದರ್ಭಗಳಲ್ಲಿ ಖಚಿತ, ವಿಶ್ವಾಸಾರ್ಹ, ಪರಾಮರ್ಶೆ ಮಾಡಿದ ಸುದ್ದಿಗಳನ್ನು ಪಡೆಯುವ ಸುರಕ್ಷಿತ ಮಾರ್ಗ ಪತ್ರಿಕೆಗಳನ್ನು ಬಿಟ್ಟು ಬೇರೆ ಯಾವುದಿದೆ? ಮಳೆ, ಗಾಳಿ, ಚಳಿಗೆ ಜಗ್ಗದೆ ಪತ್ರಿಕೆ ಹೊತ್ತು ತರುವ ವಿತರಣಾ ಸೇನಾನಿಗಳು ‘ಅಗತ್ಯ ಸೇವೆ’ಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರಿಯ ಓದುಗರೆ, ನಾವು ಗರಿಷ್ಠ ಹೊಣೆಗಾರಿಕೆಯಿಂದ ಕೆಲಸ ಮಾಡುವ ಸಂಕಲ್ಪ ಮಾಡಿದ್ದೇವೆ. ವದಂತಿಗಳಿಗೆ ಕಿವಿಗೊಡಬೇಡಿ. ನಾವು ನೀವು ಸೇರಿ ಯುದ್ಧ ಮತ್ತು ಶಾಂತಿಯ ಕಾಲಗಳೆರಡರಲ್ಲೂ ಮನುಕುಲದ ಹಿತ ಕಾಯುವ ಕೆಲಸ ಮಾಡೋಣ. ಕೊರೊನಾ ಮಣಿಸೋಣ, ದೇಶವನ್ನು ಗೆಲ್ಲಿಸೋಣ...
ಸುದ್ದಿ ಮಾಧ್ಯಮ ಒಂದು ಹೊಣೆಗಾರಿಕೆ, ಮುದ್ರಣ
ಒಂದು ಪ್ರಮಾಣ...

-ಸಂಪಾದಕರು
ಪ್ರಜಾವಾಣಿ, ವಿಜಯ ಕರ್ನಾಟಕ, ವಿಜಯವಾಣಿ, ಉದಯವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ವಿಶ್ವವಾಣಿ, ಹೊಸ ದಿಗಂತ

ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕಾ ಮುದ್ರಣಾಲಯದಲ್ಲಿ ವೈರಾಣು ನಿರೋಧಕ ರಾಸಾಯನಿಕ ಸಿಂಪಡಿಸಿದ ನಂತರ ಓದುಗರಿಗೆ ತಲುಪಿಸುವ ಮೂಲಕ ಕೋವಿಡ್-19 ಸೋಂಕಿನ ವಿರುದ್ಧ ಮುಂಜಾಗ್ರತೆ ವಹಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT