ನವದೆಹಲಿ: ಉತ್ತರಕಾಶಿಯ ಸುರಂಗದಲ್ಲಿ 41 ಕಾರ್ಮಿಕರು ಸಿಲುಕಿಕೊಂಡ ಪ್ರಕರಣದ ಬೆನ್ನಲ್ಲೇ, ದೇಶದಲ್ಲಿ ನಿರ್ಮಾಣ ಹಂತದಲ್ಲಿರುವ 29 ಸುರಂಗಗಳ ಸುರಕ್ಷತಾ ಪರಿಶೀಲನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೀರ್ಮಾನಿಸಿದೆ.
ಪ್ರಾಧಿಕಾರದ ಅಧಿಕಾರಿಗಳು, ದೆಹಲಿ ಮೆಟ್ರೊ ರೈಲು ನಿಗಮ ಹಾಗೂ ಇತರ ಸುರಂಗ ತಜ್ಞರ ತಂಡವು 79 ಕಿ.ಮೀ. ಉದ್ದದ ಎಲ್ಲ ಸುರಂಗಗಳ ಪರಿಶೀಲನೆ ನಡೆಸಲಿದೆ. ಈ ತಂಡವು ಏಳು ದಿನಗಳಲ್ಲಿ ವರದಿ ಸಲ್ಲಿಸಲಿದೆ. ಹಿಮಾಚಲ ಪ್ರದೇಶದಲ್ಲಿ 12, ಜಮ್ಮು ಮತ್ತು ಕಾಶ್ಮೀರದಲ್ಲಿ ಆರು, ಮಹಾರಾಷ್ಟ್ರ, ಒರಿಸ್ಸಾ, ರಾಜಸ್ಥಾನದಲ್ಲಿ ತಲಾ ಎರಡು, ಕರ್ನಾಟಕ, ಮಧ್ಯ ಪ್ರದೇಶ, ಛತ್ತೀಸಗಢ, ಉತ್ತರಾಖಂಡ ಹಾಗೂ ನವದೆಹಲಿಯಲ್ಲಿ ತಲಾ ಒಂದು ಸುರಂಗ ಇವೆ.
ಪ್ರಾಧಿಕಾರವು ಕೊಂಕಣ ರೈಲ್ವೆ ನಿಗಮದೊಂದಿಗೆ ಸಹ ಒಪ್ಪಂದ ಮಾಡಿಕೊಂಡಿದೆ. ಸುರಂಗ ನಿರ್ಮಾಣ, ಇಳಿಜಾರು ಸ್ಥಿರೀಕರಣಕ್ಕೆ ಸಂಬಂಧಿಸಿದ ವಿನ್ಯಾಸ ಹಾಗೂ ಸುರಕ್ಷತಾ ಅಂಶಗಳನ್ನು ಪರಿಶೀಲಿಸಲು ನಿಗಮವು ಪ್ರಾಧಿಕಾರಕ್ಕೆ ನೆರವು ನೀಡಲಿದೆ. ಜತೆಗೆ, ಸುರಂಗಗಳ ಸುರಕ್ಷತಾ ಪರಿಶೋಧನೆ ನಡೆಸಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.