ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವಿಶೇಷ | ಕನ್ನಡ ಕಲಿಕೆಗೆ ಇಲ್ಲ ಅನುದಾನ

Published 27 ಸೆಪ್ಟೆಂಬರ್ 2023, 0:30 IST
Last Updated 27 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡೇತರರಿಗೆ ಕನ್ನಡ ಕಲಿಸುವ ಉದ್ದೇಶದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಾರಂಭಿಸಿದ್ದ ‘ಕನ್ನಡ ನುಡಿ ಕಲಿಕೆ’ ಪಾಠಗಳಿಗೆ ಯಾವ ಸರ್ಕಾರಗಳೂ ಅನುದಾನ ಒದಗಿಸಿಲ್ಲ. ಇದರಿಂದಾಗಿ ಹತ್ತು ಪಾಠಗಳಿಗೇ ಯೋಜನೆ ಸ್ಥಗಿತವಾಗಿದೆ.

ತಮಿಳು, ತೆಲುಗು, ಹಿಂದಿ ಸೇರಿದಂತೆ ವಿವಿಧ ಭಾಷಿಕರು ಉದ್ಯೋಗ, ಕಲಿಕೆ ಸಂಬಂಧ ಇಲ್ಲಿಗೆ ಬಂದು, ನೆಲೆಸುತ್ತಿದ್ದಾರೆ. ಹೀಗೆ ಬಂದವರು ಇಲ್ಲಿನ ನೆಲದ ಭಾಷೆಯಾದ ಕನ್ನಡವನ್ನು ಕಲಿಯಬೇಕೆಂಬ ಉದ್ದೇಶದಿಂದ ಪ್ರಾಧಿಕಾರ 2021ರಲ್ಲಿ ‘ಕನ್ನಡ ನುಡಿ ಕಲಿಕೆ’ ಯೋಜನೆ ರೂಪಿಸಿತ್ತು.

ಈ ಯೋಜನೆಯಡಿ ಕನ್ನಡೇತರರಿಗೆ ಒಟ್ಟು 50 ಪಾಠಗಳನ್ನು ಸಿದ್ಧಪಡಿಸಬೇಕಿತ್ತು. ಆದರೆ, ಸರ್ಕಾರವು ಪ್ರಾಧಿಕಾರದ ವಾರ್ಷಿಕ ಅನುದಾನವನ್ನು ಕಡಿತ ಮಾಡಿದ್ದರಿಂದ ಪಾಠಗಳನ್ನು ಕೈಬಿಡಲಾಗಿದೆ. ಕೇವಲ 10 ಪಾಠಗಳನ್ನು ಮಾತ್ರ ಪೂರ್ಣಗೊಳಿಸಿ, ಪ್ರಾಧಿಕಾರದ ಪೋರ್ಟಲ್‌ಗೆ ಅಪ್ಲೋಡ್ ಮಾಡಲಾಗಿದೆ. ಇದರಿಂದಾಗಿ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಪ್ರಾಧಿಕಾರದ ಆಶಯಕ್ಕೆ ಹಿನ್ನಡೆಯಾಗಿದೆ. 

ಈ ಹಿಂದೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಕನ್ನಡ ಭಾಷೆಯ ಅಭಿವೃದ್ಧಿ ಸಂಬಂಧ 2020ರ ನ.1ರಿಂದ 2021ರ ಅ.31ರವರೆಗೆ ‘ಕನ್ನಡ ಕಾಯಕ ವರ್ಷ’ವೆಂದು ಘೋಷಿಸಿತ್ತು. ಕನ್ನಡ ಭಾಷೆ ಬಳಕೆ ಹೆಚ್ಚಿಸಲು ಹಾಗೂ ಬೆಳೆಸಲು ಕನ್ನಡ ಪರ ಕಾರ್ಯಕ್ರಮ ರೂಪಿಸಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು. ಇದರ ಭಾಗವಾಗಿ ಪ್ರಾಧಿಕಾರವು ‘ಕನ್ನಡ ನುಡಿ ಕಲಿಕೆ’ ಪಾಠ ಪ್ರಾರಂಭಿಸಿತ್ತು.

ವಿಡಿಯೊ ರೂಪದಲ್ಲಿರುವ ಈ ಪಾಠಗಳು ತಲಾ 11 ರಿಂದ 14 ನಿಮಿಷಗಳಿದ್ದವು. ಕನ್ನಡ ಕಲಿಯುವ ಸರಳ ವಿಧಾನದ ಕುರಿತು ನಿರೂಪಕರು ಈ ವಿಡಿಯೊದಲ್ಲಿ ವಿವರಿಸಿದ್ದಾರೆ. ಕನ್ನಡ ಕಲಿಕೆಗೆ ಪೂರಕವಾದ ಸಂಭಾಷಣೆಗಳನ್ನೂ ಚಿತ್ರೀಕರಿಸಲಾಗಿತ್ತು. ಸಿದ್ಧಪಡಿಸಲಾದ ವಿಡಿಯೊಗಳಲ್ಲಿ ಕನ್ನಡದ ಸಂಭಾಷಣೆಗಳಿಗೆ ಇಂಗ್ಲಿಷ್ ಅಡಿ ಬರಹ ನೀಡಲಾಗಿತ್ತು. ಅದೇ ರೀತಿ, ದೈನಂದಿನ ವ್ಯವಹಾರದಲ್ಲಿ ಕನ್ನಡ ಬಳಕೆ ಬಗ್ಗೆಯೂ ಕನ್ನಡೇತರರಿಗೆ ಅರ್ಥವಾಗುವ ರೀತಿ ವಿವರಿಸಲಾಗಿತ್ತು. 

ಅನುದಾನ ಕಡಿತ:

‘ಸರ್ಕಾರವು ಕೋವಿಡ್ ಸೇರಿ ವಿವಿಧ ಕಾರಣಗಳನ್ನೊಡ್ಡಿ ಪ್ರಾಧಿಕಾರದ ವಾರ್ಷಿಕ ಅನುದಾನವನ್ನು ಕಡಿತ ಮಾಡಿತು. ₹ 2.5 ಕೋಟಿ ಅನುದಾನ ನೀಡಬೇಕಾಗಿದ್ದ ಸರ್ಕಾರ, ₹ 1 ಕೋಟಿಯನ್ನು ಮಾತ್ರ ಒದಗಿಸಿತು. 50 ಪಾಠಗಳನ್ನು ರೂಪಿಸಲು ಅನುಮೋದನೆ ದೊರೆತಿದ್ದರೂ ಅನುದಾನ ಇಲ್ಲದಿದ್ದರಿಂದ ಸಾಧ್ಯ ವಾಗಲಿಲ್ಲ. ಹೆಚ್ಚುವರಿಯಾಗಿ ₹ 50 ಲಕ್ಷ ನೀಡಿದ್ದಲ್ಲಿ ಪಾಠಗಳನ್ನು ಪೂರ್ಣಗೊಳಿಸಬಹುದಾಗಿತ್ತು. ಸಿದ್ಧಪಡಿಸಲಾದ 10 ಪಾಠಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್. ನಾಗಾಭರಣ ತಿಳಿಸಿದರು. 

‘ಐಎಎಸ್ ಅಧಿಕಾರಿಗಳು ಕನ್ನಡ ಪರ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಅವರಿಗೆ ಕನ್ನಡ ಕಲಿಕೆ ಬಗ್ಗೆ ಆಸಕ್ತಿ ಇಲ್ಲ. ಇದರಿಂದಾಗಿ ಕನ್ನಡಪರ ಕಾರ್ಯಕ್ರಮಗಳ ಜಾರಿಗೆ ಅವಕಾಶ ನೀಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ಸಾಕಾರವಾಗದ ಭಾಷಾ ಕೌಶಲ ಪರೀಕ್ಷೆ

ಕನ್ನಡ ಕಲಿತ ಅನ್ಯ ಭಾಷಿಕರ ಭಾಷಾ ಪ್ರೌಢಿಮೆ ಅರಿಯುವ ಸಂಬಂಧ ಕನ್ನಡ ಭಾಷಾ ಕೌಶಲ ಪರೀಕ್ಷೆ ನಡೆಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯಯೋಜನೆ ರೂಪಿಸಿತ್ತು. 

ಅನ್ಯ ರಾಜ್ಯದವರು ಹಾಗೂ ವಿದೇಶಿಗರು ಕನ್ನಡವನ್ನು ಎಷ್ಟರ ಮಟ್ಟಿಗೆ ಕಲಿತಿದ್ದಾರೆ ಎಂದು ತಿಳಿಯುವ ಜತೆಗೆ, ಅವರ ಕಲಿಕೆಯನ್ನು ಸರ್ಕಾರದ ಮಟ್ಟದಲ್ಲಿ ಗುರುತಿಸಲು ಆನ್‌ಲೈನ್ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಲು ಕ್ರಮವಹಿಸಿತ್ತು. ಈ ಪರೀಕ್ಷೆ ತೇರ್ಗಡೆಯಾದವರಿಗೆ ಪ್ರಮಾಣಪತ್ರ ನೀಡುವುದು ಯೋಜನೆಯಲ್ಲಿತ್ತು. ಆದರೆ, ಈ ಪರೀಕ್ಷೆ ನಡೆಸಲು ಸರ್ಕಾರ ಅನುಮೋದನೆ ನೀಡಲಿಲ್ಲ. 

‘ಪರೀಕ್ಷೆಗೆ ಸಂಬಂಧಿಸಿದಂತೆ ಒಂದಷ್ಟು ಪಠ್ಯವನ್ನು ಸಿದ್ಧಪಡಿಸಲಾಗಿತ್ತು. ಕಡಿಮೆ ವೆಚ್ಚದಲ್ಲಿ ಪರೀಕ್ಷೆ ನಡೆಸುವ ಬಗ್ಗೆಯೂ ಕಾರ್ಯಯೋಜನೆ ರೂಪಿಸಲಾಗಿತ್ತು. ಈ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣ ಪತ್ರ ನೀಡಬೇಕೆಂದುಕೊಂಡಿದ್ದೆವು. ಈ ಪ್ರಮಾಣಪತ್ರವು ಉದ್ಯೋಗ ಸೇರಿ ವಿವಿಧ ಸಂದರ್ಭದಲ್ಲಿ ಸಹಕಾರಿಯಾಗುತ್ತಿತ್ತು. ಆದರೆ, ಅನುಮೋದನೆ ದೊರೆಯಲಿಲ್ಲ’ ಎಂದು ಟಿ.ಎಸ್. ನಾಗಾಭರಣ ತಿಳಿಸಿದರು. 

****

ಕನ್ನಡೇತರರಿಗೆ ಕನ್ನಡ ಕಲಿಸುವುದು ನಮ್ಮ ಆದ್ಯತೆಯಾಗಿದೆ. ಈ ಬಗ್ಗೆ ಅಗತ್ಯ ಕ್ರಮವಹಿಸಿ, ಅನುದಾನ ಒದಗಿಸಲಾಗುವುದು

-ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

****

ಕನ್ನಡದ ಕೆಲಸಗಳಿಗೆ ಎಲ್ಲಾ ಸರ್ಕಾರಗಳು ಪ್ರೋತ್ಸಾಹಿಸಬೇಕು. ಅನುದಾನ ಕಡಿತ ಮಾಡಿದಲ್ಲಿ ಕನ್ನಡ ಕೆಲಸಗಳು ಸಾಕಾರವಾಗುವುದಿಲ್ಲ

-ಟಿ.ಎಸ್. ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT