ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೂಲ್‌ ಜತೆ ನಂದಿನಿ ಉತ್ಪನ್ನಗಳ ತಯಾರಿಕೆ ಇಲ್ಲ: ಸಚಿವ ಎಸ್‌.ಟಿ.ಸೋಮಶೇಖರ್‌

Last Updated 9 ಏಪ್ರಿಲ್ 2023, 12:59 IST
ಅಕ್ಷರ ಗಾತ್ರ

ಬೆಂಗಳೂರು: ‘ಅಮೂಲ್‌ ಜತೆ ನಂದಿನಿ ಉತ್ಪನ್ನಗಳನ್ನು ತಯಾರಿಸುವುದೂ ಇಲ್ಲ. ಅಮೂಲ್‌ ಮತ್ತು ಕೆಎಂಎಫ್‌ ವಿಲೀನದ ಪ್ರಸ್ತಾಪವೇ ಇಲ್ಲ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌

ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ರಾಜಕಾರಣಕ್ಕಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಂದಿನಿ– ಅಮೂಲ್‌ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ.

‘ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕಡಿಮೆ ಆಗಿದೆ. ಇದನ್ನು ಕೊರೆ ಕಾಲ ಎನ್ನುತ್ತಾರೆ. ಪ್ರತಿ ವರ್ಷವೂ ಬೇಸಿಗೆಯಲ್ಲಿ ಹಾಲು ಉತ್ಪಾದನೆ ಕಡಿಮೆ ಆಗುತ್ತದೆ. ಕರ್ನಾಟಕದಲ್ಲಿ 15 ಹಾಲು ಒಕ್ಕೂಟಗಳಿವೆ. ಎಲ್ಲವೂ ಲಾಭದಲ್ಲಿವೆ. ಕೋವಿಡ್‌ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಮಿಗತೆ ಹಾಲಿನ ಪುಡಿಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ಕೊಡಲು ಏರ್ಪಾಡು ಮಾಡಿದ್ದರು. ಮಿಗತೆ ಹಾಲನ್ನು ಕೂಲಿ– ಕಾರ್ಮಿಕರಿಗೆ ಉಚಿತವಾಗಿ ಕೊಡಲು ಆದೇಶ ಮಾಡಿದ್ದರು ಎಂದು ಸಚಿವ ಸೋಮಶೇಖರ್‌ ಹೇಳಿದರು.

ಕೆಎಂಎಫ್‌ನ ನಂದಿನಿ ವಿಶ್ವಾದ್ಯಂತ ವಹಿವಾಟು ಹೊಂದಿದೆ. ಕಳೆದ ವರ್ಷ ಡಿಸೆಂಬರ್‌ 30 ರಂದು ಮಂಡ್ಯ ಜಿಲ್ಲೆ ಮದ್ದೂರಿನ ಗೆಜ್ಜಲಗೆರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಂದಿನಿ ಮಾರುಕಟ್ಟೆ ವಿಸ್ತರಣೆ, ತಂತ್ರಜ್ಞಾನ ನೆರವು ಪಡೆಯಲು ಅಮೂಲ್‌ ಜತೆ ಚರ್ಚಿಸಲು ಸಲಹೆ ನೀಡಿದ್ದರು ಎಂದು ಅವರು ತಿಳಿಸಿದರು.

ಅಮೂಲ್‌ ಹಾಲು ಆನ್‌ಲೈನ್‌ನಲ್ಲಿ ₹57 ಕ್ಕೆ ಮಾರಾಟ ಆಗುತ್ತದೆ. ನಾವು ನಂದಿನಿ ಹಾಲು ಲೀಟರ್‌ಗೆ ₹39 ಕ್ಕೆ ಮಾರಾಟ ಮಾಡುತ್ತೇವೆ. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಿಗೆ ಕಳಿಸುತ್ತೇವೆ. ನಂದಿನಿ ಬ್ರ್ಯಾಂಡ್‌ ಸದೃಢವಾಗಿದ್ದು, ಅದನ್ನು ಅಳಿಸಲು ಅಸಾಧ್ಯ. ಗುಜರಾತ್‌ ಅಮೂಲ್‌ ಅನ್ನು ಬೆಳೆಸಿದ ಮಾದರಿಯಲ್ಲಿ ನಾವೂ ನಂದಿನಿಯನ್ನು ಬೆಳೆಸಿದರೆ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ವಿವರಿಸಿದರು.

ಕೆಎಂಎಫ್‌ ಬಗ್ಗೆ ತಿಳಿಯದವರು ಮಾತ್ರ ತಪ್ಪಾಗಿ ಮಾತನಾಡಲು ಸಾಧ್ಯ. ಅಮೂಲ್‌ ಸೇರಿ ಯಾವುದೇ ಉತ್ಪನ್ನಗಳನ್ನು ಎದುರಿಸಲು ನಂದಿನಿ ಉತ್ಪನ್ನಗಳು ಅತ್ಯಂತ ಸಮರ್ಥವಾಗಿವೆ. ಕೆಎಂಎಫ್‌ಗೆ ಅಭದ್ರತೆಯ ಪ್ರಶ್ನೆಯೇ ಇಲ್ಲ. ಎಸ್‌.ಎಂ.ಕೃಷ್ಣ ಅವರ ಅವಧಿಯಿಂದಲೂ ಕೆಎಂಎಫ್‌ ಸುಭದ್ರವಾಗಿದೆ ಮತ್ತು ಲಾಭದಲ್ಲಿದೆ. ಹಾಲಿನ ಕೃತಕ ಅಭಾವ ಸೃಷ್ಟಿ ಆಗಿಲ್ಲ. ಚುನಾವಣಾ ರಾಜಕಾರಣಕ್ಕಾಗಿ ಸುಳ್ಳು ವದಂತಿ ಹಬ್ಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸೋಮಶೇಖರ್ ದೂರಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಮಾತನಾಡಿ, ‘ಕೆಎಂಎಫ್‌ ಸುಮಾರು ₹20 ಸಾವಿರದಿಂದ ₹22 ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ. ಸಹಕಾರ ಇಲಾಖೆ ಒಪ್ಪಿಗೆ ಇಲ್ಲದೇ, ಮಾತುಕತೆ ಇಲ್ಲದೇ ಇನ್ನೊಂದು ರಾಜ್ಯದ ಸಂಸ್ಥೆ ಜೊತೆ ವಿಲೀನ ಅಸಾಧ್ಯ. ಮಹಾಸಭೆಯ ಒಪ್ಪಿಗೆ, ಸಂಪುಟ ಸಭೆಯ ಒಪ್ಪಿಗೆಯೂ ಬೇಕು’ ಎಂದರು.

ಹಾಸನದ ಟಿಕೆಟ್‌ ಗೊಂದಲವನ್ನು ಮುಚ್ಚಿ ಹಾಕಲು ಎಚ್‌.ಡಿ.ಕುಮಾರಸ್ವಾಮಿ ಅವರು ಅಮೂಲ್‌– ನಂದಿನಿ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಐಟಿಐ ಮತ್ತು ಎನ್‌ಜಿಇಎಫ್‌ ಯಾರ ಕಾಲದಲ್ಲಿ ಮುಚ್ಚಿದ್ದು, ಕಾಂಗ್ರೆಸ್‌ ಕಾಲದಲ್ಲಿ ಅಲ್ಲವೇ ಎಂದು ಅವರು ಪ್ರಶ್ನಿಸಿದರು.

ರಾಜ್ಯದ ಜನರ ದಾರಿ ತಪ್ಪಿಸಲು ಕನ್ನಡ- ಮಾರವಾಡಿ ಎಂಬ ಪದಗಳನ್ನು ಬಳಸಿ ಸಿದ್ದರಾಮಯ್ಯ ಮತ್ತು ಎಚ್‌.ಡಿ.ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT