ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರು ಏನೇ ಮಾಡಿದರೂ ನಾಲ್ಕು ಸೀಟು ಗೆಲ್ಲಲ್ಲ: ಡಿ.ಕೆ. ಶಿವಕುಮಾರ್

Published 23 ಏಪ್ರಿಲ್ 2024, 16:05 IST
Last Updated 23 ಏಪ್ರಿಲ್ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ‘ದೇವೇಗೌಡರು ಏನೇ ಮಾಡಿದರೂ, ಅವರು ಹೇಳಿರುವಂತೆ ನಾಲ್ಕು ಸೀಟು ಬರುವುದಿಲ್ಲ. ಮೂರು ಅಧಿಕೃತ (ಹಾಸನ, ಮಂಡ್ಯ, ಕೋಲಾರ), ಒಂದು ಅನಧಿಕೃತ (ಬೆಂಗಳೂರು ಗ್ರಾಮಾಂತರ) ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ವಯಸ್ಸಿನಲ್ಲಿ ನನಗೆ ಈ ರೀತಿ ಮಾಡಿದ್ದಾರೆಂದು ದೇವೇಗೌಡರು ಹಾಸನದಲ್ಲಿ ಕಣ್ಣೀರು ಹಾಕಿದ್ದಾರೆ. ಅವರು ಕಣ್ಣೀರು ಹಾಕುವಂತೆ ಯಾರು ಏನು ಮಾಡಿದ್ದಾರೆ? ಅವರನ್ನು ಕಾಂಗ್ರೆಸ್ ಪಕ್ಷ ಪ್ರಧಾನಿ ಮಾಡಿದೆ. ಆದರೂ ಕಣ್ಣೀರು ಯಾಕೆ ಹಾಕುತ್ತಿದ್ದಾರೆ ಗೊತ್ತಿಲ್ಲ’ ಎಂದರು.

‘ಅವರನ್ನು ಮುಖ್ಯಮಂತ್ರಿ ಮಾಡಿದ್ದು ಹಾಸನ ಜಿಲ್ಲೆಯಲ್ಲ. ನಮ್ಮ ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ. ಹೀಗಾಗಿ, ಅವರು ಕಣ್ಣೀರು ಹಾಕುವ ಪರಿಸ್ಥಿತಿ ಇಲ್ಲ. ತಮ್ಮ ಕೊಡುಗೆ ಬಗ್ಗೆ ಹೇಳಲು ಅವರಿಗೆ ಏನೂ ಇಲ್ಲ’ ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ನಿರಂತರ ಪ್ರಚಾರ ಮಾಡುತ್ತಿರುವ ಬಗ್ಗೆ ಕೇಳಿದಾಗ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಿ ಬೇಕಾದರೂ ಹೋಗಿ ಪ್ರಚಾರ ಮಾಡಬಹುದು. ನಾವು ನಿನ್ನೆ ಮೊನ್ನೆಯಿಂದ ರಾಜಕಾರಣ ಮಾಡುತ್ತಿಲ್ಲ. ಚುನಾವಣೆ ಫಲಿತಾಂಶದ ಮರುದಿನದಿಂದಲೇ ಸೇವೆ ಮಾಡುತ್ತಿದ್ದೇವೆ. ಕೋವಿಡ್ ಸಮಯದಲ್ಲಿ ಮೃತಪಟ್ಟವರ ಶವಗಳ ಅಂತ್ಯಸಂಸ್ಕಾರ ಮಾಡಿದ್ದೇವೆ. ಜನರಿಗೆ ಉಚಿತ ಔಷಧಿ, ಅಕ್ಕಿ ನೀಡಿದ್ದೇವೆ. ಜನ ಉಪಕಾರ ಸ್ಮರಣೆ ಮಾಡಲಿದ್ದಾರೆ’ ಎಂದರು.

ಕಾಂಗ್ರೆಸ್‌ಗೆ ವಿಸಿಕೆ ಬೆಂಬಲ: ತಮಿಳುನಾಡಿನ ವಿಡುಥಲೈ ಚಿರುತೈಗಲ್‌ ಕಚ್ಚಿ (ವಿಸಿಕೆ) ಪಕ್ಷದ ಸಂಸ್ಥಾಪಕರೂ ಆಗಿರುವ ಸಂಸದ ತೊಳ್ ತಿರುಮಾವಳವನ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದರು.

ಈ ಬಗ್ಗೆ ಮಾತನಾಡಿದ ಶಿವಕುಮಾರ್, ‘ವಿಸಿಕೆ ಪಕ್ಷ ‘ಇಂಡಿಯಾ’ ಮೈತ್ರಿಕೂಟದಲ್ಲಿದೆ. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಆ ಪಕ್ಷದ ಅಧ್ಯಕ್ಷ ರಾಜ್ಯಕ್ಕೆ ಬಂದಿದ್ದಾರೆ. ಅವರ ಪಕ್ಷದಿಂದ ಬೆಂಗಳೂರು ಗ್ರಾಮಾಂತರದಲ್ಲಿ ಚಂದ್ರಶೇಖರ್, ಕೋಲಾರದಲ್ಲಿ ಎಂ.ಸಿ. ವೇಣು, ಬೆಂಗಳೂರು ದಕ್ಷಿಣದಲ್ಲಿ ರಾಜಕುಮಾರ್ ಅವರು ಕಣದಲ್ಲಿದ್ದರು. ಅವರೆಲ್ಲರೂ ಸ್ಪರ್ಧೆಯಿಂದ ನಿವೃತ್ತಿ ಘೋಷಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT