ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಲವೆಡೆ ಸುಡು ಬಿಸಿಲು: ರಾಯಚೂರಲ್ಲಿ 44.3 ಡಿಗ್ರಿ ಸೆಲ್ಸಿಯಸ್‌ ದಾಖಲು

Published 28 ಮಾರ್ಚ್ 2024, 21:22 IST
Last Updated 28 ಮಾರ್ಚ್ 2024, 21:22 IST
ಅಕ್ಷರ ಗಾತ್ರ

ಬೆಂಗಳೂರು/ಹುಬ್ಬಳ್ಳಿ/ಕಲಬುರಗಿ: ರಾಜ್ಯದಲ್ಲಿ ಬಿಸಿಲ ತಾಪ ಹೆಚ್ಚಳವಾಗುತ್ತಿದ್ದು, 30 ಜಿಲ್ಲೆಗಳಲ್ಲಿ ಗುರುವಾರ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ದಾಟಿದೆ. 18 ಜಿಲ್ಲೆಗಳು ಬಿಸಿ ಗಾಳಿಯ ಮಿತಿಯಾದ 40 ಡಿಗ್ರಿ ಸೆಲ್ಸಿಯಸ್‌ ಗಡಿ ಮೀರಿವೆ. 

ರಾಯಚೂರಿನಲ್ಲಿ ಗುರುವಾರ ಗರಿಷ್ಠ ತಾಪಮಾನ (44.3 ಡಿಗ್ರಿ ಸೆಲ್ಸಿಯಸ್‌) ವರದಿಯಾಗಿದೆ. ಬೆಳಿಗ್ಗೆ 8ರಿಂದಲೇ ಬಿಸಿಲಿನ ಅನುಭವ ಆರಂಭವಾಗುತ್ತಿದ್ದು, ಮಧ್ಯಾಹ್ನದ ವೇಳೆಗೆ ಪ್ರಖರತೆ ಹೆಚ್ಚಳವಾಗುತ್ತಿದೆ. ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಇದೆ. ಕೊಡಗು ಜಿಲ್ಲೆಯಲ್ಲಿ ಮಾತ್ರ ಗುರುವಾರ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್‌ಕ್ಕಿಂತ ಕಡಿಮೆ (37.4 ಡಿಗ್ರಿ ಸೆಲ್ಸಿಯಸ್‌) ವರದಿಯಾಗಿದೆ. 

ಮಲೆನಾಡಿನ ಜಿಲ್ಲೆಗಳಲ್ಲಿಯೂ ತಾಪಮಾನ ಏರಿಕೆ ಕಂಡಿದೆ. ಶಿವಮೊಗ್ಗದಲ್ಲಿ 40.2 ಡಿಗ್ರಿ ಸೆಲ್ಸಿಯಸ್, ಚಿಕ್ಕ ಮಗಳೂರಿನಲ್ಲಿ 40.8 ಡಿಗ್ರಿ ಸೆಲ್ಸಿಯಸ್ ಹಾಗೂ ಉತ್ತರ ಕನ್ನಡದಲ್ಲಿ 40.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ವರದಿಯಾಗಿದೆ. 

‘ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅತ್ಯಧಿಕ ತಾಪಮಾನ ಹೊಂದಿದ ವರ್ಷವಾಗಿದೆ. ರಾಜ್ಯದ ಹಲವಾರು ಭಾಗಗಳಲ್ಲಿ, ಅದರಲ್ಲಿಯೂ ಉತ್ತರ ಒಳನಾಡಿನಲ್ಲಿ 40 ಡಿಗ್ರಿ ಸೆಲ್ಸಿಯಸ್‌ಕ್ಕಿಂತ ಹೆಚ್ಚಿನ ತಾಪಮಾನ ವರದಿಯಾಗಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿ ಎ.ಪ್ರಸಾದ್ ತಿಳಿಸಿದರು. 

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ‘ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲಿ ತಾಪಮಾನ ಏರಿಕೆಯಾಗಿದೆ. ಏಪ್ರಿಲ್ ಮೂರನೇ ವಾರದವರೆಗೂ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ನಷ್ಟು ಹೆಚ್ಚಳ ಇರುವ ಸಾಧ್ಯತೆಯಿದೆ. ಆ ಮೇಲೆ ಗರಿಷ್ಠ ಮಟ್ಟಕ್ಕೆ ತಲುಪಿ, ಮೇ ವೇಳೆಗೆ ಕಡಿಮೆ ಆಗಬಹುದು’ ಎಂದು ಹೇಳಿದರು. 

ಸರ್ಕಾರಿ ಕಚೇರಿ ಸಮಯ ಬದಲಿಲ್ಲ

ಉತ್ತರ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪ್ರತಿ ವರ್ಷ ಏಪ್ರಿಲ್‌ ಮೇ ತಿಂಗಳಲ್ಲಿ ಸರ್ಕಾರಿ ಕಚೇರಿಗಳ ಸಮಯ ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಬದಲಿಸಲಾಗುತಿತ್ತು. ಮಧ್ಯಾಹ್ನದ ಬಳಿಕ ಕಚೇರಿಗಳಿಗೆ ರಜೆ ನೀಡಲಾಗುತಿತ್ತು. ಆದರೆ ಕಳೆದ ವರ್ಷ ವಿಧಾನಸಭೆ ಚುನಾವಣೆ ಹಾಗೂ ಈ ವರ್ಷ ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆ ಕಾರಣ ಸರ್ಕಾರಿ ಕಚೇರಿಗಳ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT