ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ-ವಾಡಿ ರೈಲು ಮಾರ್ಗ | 2026ರ ಮಾರ್ಚ್ ಗಡುವು: ಸಚಿವ ಪಾಟೀಲ

ಉತ್ತರ ಕರ್ನಾಟಕ ಭಾಗದ ರೈಲು ಯೋಜನೆಗಳ ಪ್ರಗತಿ ಪರಿಶೀಲನೆ
Published : 6 ಸೆಪ್ಟೆಂಬರ್ 2023, 15:32 IST
Last Updated : 6 ಸೆಪ್ಟೆಂಬರ್ 2023, 15:32 IST
ಫಾಲೋ ಮಾಡಿ
Comments

ಬೆಂಗಳೂರು: ‘ಗದಗ- ವಾಡಿ ನಡುವೆ 257 ಕಿ.ಮೀ. ರೈಲು ಮಾರ್ಗವನ್ನು 2026ರ ಮಾರ್ಚ್ ಹಾಗೂ ಬಾಗಲಕೋಟೆ- ಕುಡಚಿ ಮಾರ್ಗವನ್ನು 2025ರ ಡಿಸೆಂಬರ್‌ ಒಳಗೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದೆ’ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಉತ್ತರ ಕರ್ನಾಟಕ ಭಾಗದ ‌ಮಹತ್ವದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ಸಚಿವರು ಬುಧವಾರ ನಡೆಸಿದರು.

‘₹ 1,922 ಕೋಟಿ ಅಂದಾಜು ವೆಚ್ಚದ ಗದಗ- ವಾಡಿ ಯೋಜನೆಯು ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆಗಳ ತಲಾ ಶೇ 50ರಷ್ಟು ವೆಚ್ಚ ಹಂಚಿಕೆಯಲ್ಲಿ ನಡೆಯುತ್ತಿದೆ. ಈ ಕಾಮಗಾರಿಗೆ 4,002 ಎಕರೆ ಭೂಮಿ ಅಗತ್ಯವಿದ್ದು, ಈಗಾಗಲೇ 3,945 ಎಕರೆ ಭೂಮಿಯನ್ನು ಕಾಮಗಾರಿಗಾಗಿ ಬಿಟ್ಟುಕೊಡಲಾಗಿದೆ. ಉಳಿದ 57 ಎಕರೆಯನ್ನು ತಿಂಗಳೊಳಗೆ ಕೊಡಲಾಗುವುದು’ ಎಂದರು.

‘ಗದಗದಿಂದ ತಳಕಲ್‌ವರೆಗೆ ಈಗಾಗಲೇ ರೈಲ್ವೆ ಹಳಿ ಇದೆ. ತಳಕಲ್‌ನಿಂದ ಕುಷ್ಟಗಿವರೆಗಿನ 57 ಕಿ.ಮೀ. ಪೈಕಿ ಹನುಮಪುರದವರೆಗೆ ಕೆಲಸ ಮುಗಿದಿದೆ. ಕುಷ್ಟಗಿವರೆಗಿನ ಮಾರ್ಗ ಮಾರ್ಚ್ 24ರೊಳಗೆ ಮುಗಿಯಲಿದೆ. ನಂತರ ಇಲ್ಲಿ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗಲಿದೆ’ ಎಂದರು.

ಬಾಗಲಕೋಟೆ- ಕುಡಚಿ ನಡುವಿನ 142 ಕಿ.ಮೀ‌. ಉದ್ದದ ಮಾರ್ಗಕ್ಕೆ ₹ 1,530 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈ ಯೋಜನೆಗೆ ಅಗತ್ಯವಾದ 2,496 ಎಕರೆ ಭೂಮಿಯ ಪೈಕಿ 2,476 ಎಕರೆ ‌ಹಸ್ತಾಂತರವಾಗಿದೆ. ಉಳಿದ 20 ಎಕರೆಯನ್ನು ಶೀಘ್ರದಲ್ಲಿ ಬಿಟ್ಟುಕೊಡಲಾಗುವುದು’ ಎಂದು ಸಚಿವರು ಹೇಳಿದರು.

‘ಬಾಗಲಕೋಟೆ- ಖಚ್ಚಿದೋಣಿ- ಲೋಕಾಪುರದವರೆಗಿನ 60 ಕಿ.ಮೀ. ಕಾಮಗಾರಿ 2024ರ ಮಾರ್ಚ್ ವೇಳೆಗೆ ಮುಗಿಯಲಿದೆ. ಆನಂತರ, ಈ ಭಾಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಕುಡಚಿ ಭಾಗದಿಂದ ಕಾಮಗಾರಿ ಆರಂಭಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕುಡಚಿಯಿಂದ ಜಗದಾಳ್ ವರೆಗಿನ ಕೆಲಸ ಶುರುವಾಗಲಿದೆ’ ಎಂದರು.

ಕೊಪ್ಪಳ ಸಂಸದ ಕರಡಿ ಸಂಗಣ್ಣ, ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್, ರೈಲ್ವೆ ಅಧಿಕಾರಿಗಳು, ಮೂಲಸೌಕರ್ಯ ಇಲಾಖೆ ಎಸಿಎಸ್ ಗೌರವ ಗುಪ್ತ ಸಭೆಯಲ್ಲಿದ್ದರು. ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳು ವಿಡಿಯೊ ಸಂವಾದದ ಮೂಲಕ ಭಾಗವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT