ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳು ಬಿದ್ದು 15 ದಿನಗಳಾದರೂ ತುರ್ತು ಹಣ ಇನ್ನೂ ಕೈಸೇರಿಲ್ಲ; ಸಂತ್ರಸ್ತರ ಅಳಲು

Last Updated 22 ಆಗಸ್ಟ್ 2019, 19:46 IST
ಅಕ್ಷರ ಗಾತ್ರ

ಗೋಕಾಕ (ಬೆಳಗಾವಿ ಜಿಲ್ಲೆ): ‘ಮನೆ ಬಿದ್ದು 15 ದಿನಗಳಾದರೂ ಸರ್ಕಾರದಿಂದ ಬರಬೇಕಾದ ತುರ್ತು ಪರಿಹಾರದ ಹಣ ₹ 10,000 ಇನ್ನೂ ಬಂದಿಲ್ಲ... ಪರಿಹಾರ ಕೇಂದ್ರಗಳಲ್ಲಿ ಊಟ– ವಸತಿಗೆ ತೊಂದರೆಯಿಲ್ಲ. ಆದರೆ, ಬಟ್ಟೆ, ಬರೆ ಇಲ್ಲದೇ ಭಿಕ್ಷುಕರಂತೆ ಜೀವನ ಸಾಗಿಸುತ್ತಿದ್ದೇವೆ...’ ಎಂದು ಇಲ್ಲಿನ ಕುಂಬಾರ ಓಣಿಯ ಪ್ರಭಾವತಿ ಹಡಪದ ಅಳಲು ತೋಡಿಕೊಂಡರು.

ಘಟಪ್ರಭಾ ನದಿ ಉಕ್ಕಿ ಹರಿದ ಪರಿಣಾಮವಾಗಿ ಗೋಕಾಕ ನಗರದ ಅರ್ಧಕ್ಕೂ ಹೆಚ್ಚು ಪ್ರದೇಶಗಳು ಜಲಾವೃತಗೊಂಡಿದ್ದವು. ಅದರಲ್ಲಿ ಕುಂಬಾರ ಓಣಿಯೂ ಒಂದಾಗಿತ್ತು. ನೀರಿನ ಸೆಳೆತಕ್ಕೆ ಸಿಕ್ಕು ಹಲವು ಮನೆಗಳು ಮನೆಗಳು ಕುಸಿದುಬಿದ್ದವು. ಇದರಲ್ಲಿ ಪ್ರಭಾವತಿ ಹಡಪದ ಅವರ ಮನೆಯೂ ಸೇರಿತ್ತು.

ಪತಿ ಐದು ವರ್ಷಗಳ ಹಿಂದೆಯೇ ತೀರಿಹೋಗಿದ್ದಾರೆ. ತಮ್ಮ ಪುತ್ರಿಯ ಜೊತೆ ಪ್ರಭಾವತಿ ಇದೇ ಮನೆಯಲ್ಲಿ ವಾಸವಾಗಿದ್ದರು. ಇದೇ ತಿಂಗಳ 6ರಂದು ಘಟಪ್ರಭಾ ನದಿ ಉಕ್ಕಿ ಹರಿದ ಪರಿಣಾಮ, ನೀರು ಓಣಿಯೊಳಗೆ ನುಗ್ಗಿತು. ಆತಂಕಕ್ಕೆ ಒಳಗಾದ ಓಣಿಯ ನೂರಾರು ಜನರು ಲಗುಬಗೆಯಿಂದ ಮನೆ ಬಿಟ್ಟು ಹೊರಬಂದರು. 15 ಅಡಿಗಳಷ್ಟು ಎತ್ತರದವರೆಗೆ ನೀರು ತುಂಬಿಕೊಂಡಿತು. ಇದೇ ಪರಿಸ್ಥಿತಿ ಸತತ 6 ದಿನಗಳವರೆಗೆ ಇತ್ತು. ನೀರಿನಿಂದ ನೆನೆದ ಮನೆಯ ಗೋಡೆಗಳು ಕುಸಿದು ಬಿದ್ದವು.

ಇಂತಹದ್ದೇ ಸ್ಥಿತಿ, ನಗರದ ಉಪ್ಪಾರ ಗಲ್ಲಿ, ಡೋಹರ್‌ ಗಲ್ಲಿ, ಗರಡಿ ಓಣಿ, ಗುರುವಾರ ಪೇಟೆ, ನಾಕಾ ನಂಬರ್‌ 1, ಅಡಿಬೆಟ್ಟಿ ಬೀಳ, ಅಕ್ಕಮಹಾದೇವಿ ಗುಡಿ ಪ್ರದೇಶ, ಆಶ್ರಯ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕಂಡುಬಂದಿದೆ. ಈ ಪ್ರದೇಶಗಳ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಉಪಾಹಾರ– ಊಟ, ವಸತಿ ಕಲ್ಪಿಸಲಾಗಿದೆ.

ತುರ್ತು ವೆಚ್ಚಕ್ಕಾಗಿ ₹ 10,000:

ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್‌ ವತಿಯಿಂದ ಪ್ರತಿ ಕುಟುಂಬಕ್ಕೆ ₹ 3,800 ಹಾಗೂ ರಾಜ್ಯ ಸರ್ಕಾರದ ವತಿಯಿಂದ ₹ 6,200 ಸೇರಿ ಒಟ್ಟು ₹ 10,000 ತುರ್ತು ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಮುಖ್ಯವಾಗಿ ಬಟ್ಟೆ, ಅಡುಗೆ ಸಾಮಾನು, ದಿನಸಿ ಹಾಗೂ ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲು ಸಂತ್ರಸ್ತರು ಈ ಹಣವನ್ನು ಬಳಸಿಕೊಳ್ಳಬಹುದಾಗಿದೆ.

ನಮಗಿನ್ನೂ ಹಣ ಬಂದಿಲ್ಲ:

‘ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಮನೆಯೊಳಗೆ ಹೊಕ್ಕ ನೀರು, ಬಟ್ಟೆ, ಹಾಸಿಗೆ, ಹೊದಿಕೆ, ಆಹಾರ ಧಾನ್ಯ ಸೇರಿದಂತೆ ಎಲ್ಲವನ್ನೂ ನಾಶ ಮಾಡಿದೆ. ನಮ್ಮ ಬಳಿ ಏನೂ ಉಳಿದಿಲ್ಲ. ಶೂನ್ಯದಿಂದ ನಮ್ಮ ಜೀವನ ಆರಂಭಿಸಬೇಕಾಗಿದೆ. ತಕ್ಷಣ ವಸ್ತುಗಳನ್ನು ಖರೀದಿಸಲು ನಮ್ಮ ಬಳಿ ಹಣವೂ ಇಲ್ಲ. ತುರ್ತು ಪರಿಹಾರದ ₹10,000 ಹಣವನ್ನು ತಕ್ಷಣ ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದೇವೆ’ ಎಂದು ಪ್ರಭಾವತಿ ಹಡಪದ ಕಣ್ಣೀರು ಹಾಕಿದರು.

ಇವರ ಮಾತಿಗೆ, ಗಿರೀಶ ಧರ್ಮಟ್ಟಿ, ಮಾರುತಿ ಚೂನನ್ನವರ, ಸತ್ಯವ್ವ ಕುಂಬಾರ, ಅಶೋಕ ಹಡಪದ, ಧ್ವನಿಗೂಡಿಸಿದರು.

ಸದ್ಯದಲ್ಲಿಯೇ ವಿತರಣೆ:

‘ಗೋಕಾಕದಲ್ಲಿ ಸುಮಾರು 4,500 ಮನೆಗಳು ಕುಸಿದುಬಿದ್ದಿರುವ ಬಗ್ಗೆ ವರದಿ ಬಂದಿದೆ. ಇವುಗಳನ್ನು ಪರಿಶೀಲಿಸುತ್ತಿದ್ದು, ಒಂದೆರಡು ದಿನಗಳಲ್ಲಿ ತುರ್ತು ಪರಿಹಾರದ ₹ 10,000 ಹಣವನ್ನು ನೀಡಲಿದ್ದೇವೆ’ ಎಂದು ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT