ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ಬರ್ಚಿ ಅರಣ್ಯ ವಲಯದಲ್ಲಿ ಹುಲಿ ಸಾವು: ರಾಜ್ಯಕ್ಕೆ NTCA ತರಾಟೆ

Published 22 ನವೆಂಬರ್ 2023, 13:45 IST
Last Updated 22 ನವೆಂಬರ್ 2023, 13:45 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಕನ್ನಡ ಜಿಲ್ಲೆಯ ಬರ್ಚಿ ಅರಣ್ಯ ವಲಯದಲ್ಲಿ ಹುಲಿ ಮೃತಪಟ್ಟ ‍ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸದ ಕರ್ನಾಟಕ ಅರಣ್ಯ ಇಲಾಖೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ತರಾಟೆಗೆ ತೆಗೆದುಕೊಂಡಿದೆ.

ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರಿಗೆ ಪತ್ರ ಬರೆದಿರುವ ಪ್ರಾಧಿಕಾರದ ಉಪ ಮಹಾ ನಿರ್ದೇಶಕ ರಾಜೇಂದ್ರ ಸಿ.ಗರ್‌ವಾಡ್‌, ‘ಹುಲಿಯ ಅನುಮಾನಾಸ್ಪದ ಸಾವಿನ ಕುರಿತು ಮರು ತನಿಖೆ ನಡೆಸಿ ಪ್ರಾಧಿಕಾರಕ್ಕೆ ಶೀಘ್ರದಲ್ಲಿ ವರದಿ ಸಲ್ಲಿಸಬೇಕು’ ಎಂದು ತಾಕೀತು ಮಾಡಿದ್ದಾರೆ.

‘ನಾನಾಕೇಸರೊಡ್ಲಾ ಗ್ರಾಮದ ಬಳಿ ಗಂಡು ಹುಲಿ ಕಳೇಬರವು 2022ರ ಡಿಸೆಂಬರ್‌ 18ರಂದು ಪತ್ತೆಯಾಗಿತ್ತು. ಅದರ ತಲೆ ಹಾಗೂ ನಾಲ್ಕು ಕಾಲುಗಳನ್ನು ಕತ್ತರಿಸಿ ಅಪರಿಚಿತರು ಕೊಂಡೊಯ್ದಿದ್ದರು. ಹುಲಿ ಸಾವಿನ ಕುರಿತು ಹಳಿಯಾಳ ಡಿಸಿಎಫ್‌ ಅವರು ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಹುಲಿ ಅಥವಾ ಇತರ ಪ್ರಾಣಿಗಳ ಜತೆಗಿನ ಕಾದಾಟದಲ್ಲಿ ಮೃತಪಟ್ಟಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಆದರೆ, ಹುಲಿಯ ತಲೆ ಹಾಗೂ ಕಾಲುಗಳನ್ನು ಕತ್ತರಿಸಿದವರ ಬಗ್ಗೆ ಉಲ್ಲೇಖಿಸಿಲ್ಲ. ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಂಡಿರುವ ಬಗ್ಗೆಯೂ ಪ್ರಸ್ತಾಪಿಸಿಲ್ಲ. ಹಳಿಯಾಳ ವಿಭಾಗದ ಅರಣ್ಯ ಅಧಿಕಾರಿಗಳು ಅಪೂರ್ಣ ತನಿಖೆ ನಡೆಸಿ ಕೈತೊಳೆದುಕೊಂಡಿದ್ದಾರೆ. ಈ ಬಗ್ಗೆ ಮರು ತನಿಖೆ ನಡೆಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದೂ ಅವರು ಸೂಚಿಸಿದ್ದಾರೆ.

‘ಕೆನರಾ ವೃತ್ತದ ಅರಣ್ಯಾಧಿಕಾರಿಗಳು ಸರಿಯಾಗಿ ತನಿಖೆ ನಡೆಸದೆ ಹುಲಿಯ ಸಾವನ್ನು ನೈಸರ್ಗಿಕವೆಂದು ತೀರ್ಮಾನಿಸಿ ಅಂತಿಮ ವರದಿ ಸಲ್ಲಿಸಿದ್ದಾರೆ. ಇದು ಗಂಭೀರ ಕರ್ತವ್ಯ ಲೋಪ. ಹುಲಿ ಮೃತಪಟ್ಟ ಕೆಲವೇ ದಿನಗಳ ನಂತರ ಇದೇ ವಿಭಾಗ ಹಾಗೂ ಉಪ ವಿಭಾಗ ವ್ಯಾಪ್ತಿಯ ಜಗಲಪೇಟ್ ವಲಯದಲ್ಲಿ ಚಿರತೆಯೊಂದು ಉರುಳಿಗೆ ಸಿಲುಕಿ ಸತ್ತಿತ್ತು. ಈ ವರ್ಷದ ಆರಂಭದಲ್ಲಿ ಹಳಿಯಾಳ ವಿಭಾಗದ ಮುರುಕವಾಡ ಬಳಿ ಚಿರತೆಯೊಂದನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಕೆಲವು ತಿಂಗಳುಗಳ ಹಿಂದೆ ಕಾಳಿ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಕಾಡುಕೋಣವೊಂದನ್ನು ಹತ್ಯೆ ಮಾಡಲಾಗಿತ್ತು. ಈ ಎಲ್ಲ ಪ್ರಕರಣಗಳ ತನಿಖೆ ನಡೆಸಿಲ್ಲ’ ಎಂದು ಪಶ್ಚಿಮ ಘಟ್ಟ ಹೋರಾಟಗಾರ ರಾಮ್‌ ದೂರಿದ್ದಾರೆ.

‘ಕಳೆದ ಎರಡು ವರ್ಷಗಳಲ್ಲಿ ಕೆನರಾ ವೃತ್ತದಲ್ಲಿ ಹಲವು ಅಕ್ರಮಗಳು ನಡೆದಿವೆ. ಈ ಬಗ್ಗೆಯೂ ತನಿಖೆ ನಡೆಸಬೇಕು. ಇದಕ್ಕಾಗಿ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿ ವರದಿ ಪಡೆದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT