ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮೆಗಳ ಅಸಹಜ ಸಾವಿನ ಕಳವಳ: ಕಾರಣ ಅಸ್ಪಷ್ಟ

ಆರು ತಿಂಗಳಲ್ಲಿ ಜಲಚರದ ಹಲವು ಕಳೇಬರ ಪತ್ತೆ
Last Updated 12 ಫೆಬ್ರುವರಿ 2022, 1:08 IST
ಅಕ್ಷರ ಗಾತ್ರ

ಕಾರವಾರ: ಸುಮಾರು ಆರು ತಿಂಗಳಿನಿಂದ ಈಚೆಗೆ ಜಿಲ್ಲೆಯ ಸಮುದ್ರ ತೀರದಲ್ಲಿ ‘ಆಲಿವ್ ರಿಡ್ಲೆ’ ಆಮೆಗಳ ಅಸಹಜ ಸಾವು ಹೆಚ್ಚಿದೆ. ಅವುಗಳ ರಕ್ಷಣೆಯಲ್ಲಿ, ಅಧ್ಯಯನದಲ್ಲಿ ನಿರತರಾಗಿರುವವರಿಗೆ ಕಾರಣ ಅಸ್ಪಷ್ಟವಾಗಿದೆ.

ಜನವರಿ, ಫೆಬ್ರುವರಿ ತಿಂಗಳು ಆಮೆಗಳು ಕಡಲತೀರಕ್ಕೆ ಬಂದು ಸಂತಾನೋತ್ಪತ್ತಿ ಮಾಡುವ ಅವಧಿಯಾಗಿದೆ. ಸಮುದ್ರದ ನೀರಿನಿಂದ ಮಧ್ಯರಾತ್ರಿ ದಡಕ್ಕೆ ಬಂದು, ಮರಳಿನಲ್ಲಿ ಹೊಂಡ ಮಾಡಿ ಮೊಟ್ಟೆಯಿಡುತ್ತವೆ. ಸೂರ್ಯೋದಯಕ್ಕೂ ಮೊದಲೇ ಅವು ಪುನಃ ಸಮುದ್ರಕ್ಕೆ ತೆರಳುತ್ತವೆ.

ಈ ಬಾರಿ ಹೊನ್ನಾವರದ ಅಪ್ಸರಕೊಂಡದಿಂದ ಟೊಂಕದವರೆಗೆ ಸುಮಾರು 10 ಕಡೆ ಆಮೆಗಳು ಮೊಟ್ಟೆಯಿಟ್ಟಿವೆ. ಕಾರವಾರದಲ್ಲಿ ಎರಡು ಕಡೆ, ಕುಮಟಾ ತಾಲ್ಲೂಕಿನ ವಿವಿಧೆಡೆ 28 ಕಡೆ ಮೊಟ್ಟೆಯಿಟ್ಟಿವೆ.

ಹೊನ್ನಾವರ ತಾಲ್ಲೂಕಿನ ಟೊಂಕ, ಅಪ್ಸರಕೊಂಡ, ಇಕೊ ಬೀಚ್ ಪ್ರದೇಶದಲ್ಲೇ ಏಳು ಆಮೆಗಳು ಮೃತಪಟ್ಟಿವೆ. ಕಳೇಬರಗಳು ದಡದಲ್ಲಿ, ಸಮುದ್ರದಲ್ಲಿ ತೇಲುತ್ತ ಕಂಡುಬಂದಿವೆ. ಒಂದೆರಡು ಕಳೇಬರಗಳ ಚಿಪ್ಪು, ಎಲುಬು ಮಾತ್ರ ಮರಳಿನಲ್ಲಿ ಸಿಕ್ಕಿವೆ. ಕಾರವಾರ ತಾಲ್ಲೂಕಿನ ಕಡಲತೀರದಲ್ಲೂ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಾಲ್ಕು ಆಮೆಗಳ ಮೃತದೇಹಗಳು ಪತ್ತೆಯಾಗಿದ್ದವು. ಅವುಗಳಲ್ಲಿ ‘ಹಾಕ್ಸ್ ಬಿಲ್’ ಹಾಗೂ ‘ಹಸಿರು ಕಡಲಾಮೆ’ಗಳೂ ಸೇರಿದ್ದವು.

‘ಆಲಿವ್ ರಿಡ್ಲೆ’ಗಳು ಸುಮಾರು 50 ವರ್ಷ ಬದುಕುತ್ತವೆ. ಆದರೆ, ಮೃತಪಟ್ಟಿರುವುದನ್ನು ಗಮನಿಸಿದಾಗ ಬಹುತೇಕ ತರುಣಾವಸ್ಥೆಯಲ್ಲೇ ಇವೆ ಎನ್ನುತ್ತಾರೆ ಅವುಗಳ ಸಂರಕ್ಷಣೆ ಮಾಡುತ್ತಿರುವ ಟೊಂಕದ ಮೀನುಗಾರ ರಾಜು ದತ್ತ ತಾಂಡೇಲ.

‘ನಮ್ಮೂರಲ್ಲಿ ಆಮೆಗಳು ಸತ್ತಿರುವುದನ್ನು ಇದೇ ಮೊದಲು ನೋಡುತ್ತಿದ್ದೇನೆ. ಟೊಂಕದಲ್ಲಿ ಹೆಚ್ಚು ಸಾಯುತ್ತಿವೆ. ದೋಣಿಗೆ ಸಿಲುಕಿರಬಹುದು ಎಂದು ಕೆಲವರು ವಾದಿಸಬಹುದು. ಇಷ್ಟು ವರ್ಷಗಳಲ್ಲಿ ಆಗದ ಸಮಸ್ಯೆ ಈಗ ಹೇಗೆ ಉಂಟಾಗುತ್ತಿದೆ? ಇದಕ್ಕೆ ಬೇರೆಯೇ ಕಾರಣಗಳಿರಬಹುದು’ ಎಂದು ಹೇಳುತ್ತಾರೆ.

‘ಈ ವರ್ಷ ಟೊಂಕದಲ್ಲಿ ಏಳು ಕಡೆಗಳಲ್ಲಿ ಆಮೆಗಳು ಮೊಟ್ಟೆಯಿಟ್ಟಿವೆ. ನಮ್ಮ ದೋಣಿಗಳ ಬಲೆಗೆ ಬಿದ್ದ ಆಮೆಗಳನ್ನು ಬಿಡಿಸಿ ಪುನಃ ನೀರಿಗೆ ಬಿಟ್ಟಿದ್ದೇವೆ’ ಎಂದೂ ಸ್ಪಷ್ಟಪಡಿಸುತ್ತಾರೆ.

ಮತ್ತೊಬ್ಬ ಮೀನುಗಾರ, ಆಮೆಗಳ ಸಂರಕ್ಷಣೆ ಮಾಡುತ್ತಿರುವ ರಮೇಶ ತಾಂಡೇಲ ಕೂಡ ಇಂಥದ್ದೇ ಅನುಭವ ಹಂಚಿಕೊಳ್ಳುತ್ತಾರೆ. ‘ಇಷ್ಟು ವರ್ಷಗಳಲ್ಲಿ ಈ ಪ್ರಮಾಣದಲ್ಲಿ ಆಮೆಗಳು ಸಾಯಲಿಲ್ಲ. ಖಾಸಗಿ ಭದ್ರತಾ ಸಿಬ್ಬಂದಿ ಅವು ದಡಕ್ಕೆ ಬಾರದಂತೆ ರಾತ್ರಿಯಿಡೀ ಪ್ರಖರವಾದ ಬೆಳಕು ಹಾಯಿಸುತ್ತಾರೆ. ಮೇಲೆ ಬಂದವುಗಳಿಗೆ ಹೊಡೆಯುತ್ತಾರೆ’ ಎಂದು ದೂರುತ್ತಾರೆ.

‘ರಾತ್ರಿ ಗಸ್ತು ಹೆಚ್ಚಳ’
‘ಆಮೆಗಳ ಸತತ ಸಾವಿನ ಬಗ್ಗೆ ಅನುಮಾನಗಳಿವೆ. ಹೊನ್ನಾವರ ಭಾಗದಲ್ಲಿ ಇಲಾಖೆಯಿಂದ ರಾತ್ರಿ ಗಸ್ತು ಹೆಚ್ಚಿಸಲಾಗಿದೆ. ಸಿಬ್ಬಂದಿಗೆ ರಾತ್ರಿ ಪಾಳಿ ನೀಡಲಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. ‘ಆಮೆಗಳು ಕಡಲತೀರದಲ್ಲೇ ಸತ್ತಿರಬಹುದು ಎಂದು ಹೇಳಲು ಸಾಧ್ಯವಿಲ್ಲ. ಸಮುದ್ರದಿಂದ ಕಳೇಬರವನ್ನು ಅಲೆಗಳು ತಂದು ದಡಕ್ಕೆ ಎಸೆಯಬಹುದು. ಅವು ಮೊಟ್ಟೆಯಿಡಲು ದಡಕ್ಕೆ ಬರುವುದೇ ಮಧ್ಯರಾತ್ರಿಯಲ್ಲಿ. ಅದು ಅತ್ಯಂತ ಸುರಕ್ಷಿತ ಸಮಯವೆಂದು ಭಾವಿಸಲಾಗುತ್ತದೆ. ಆಗ ಯಾರಾದರೂ ಸಾಯಿಸಿರುವ ಸಾಧ್ಯತೆಯೂ ಇದೆ. ಮರಣೋತ್ತರ ಪರೀಕ್ಷೆ ಮಾಡಿ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಕುಂದಾಪುರ: ಇಲ್ಲಿನ ಕೋಡಿ ಲೈಟ್‌ಹೌಸ್ ಎದುರು 55 ದಿನಗಳ ಹಿಂದೆ ಪತ್ತೆಯಾದ ಮೊಟ್ಟೆಗಳಿಂದ ಹೊರಬಂದ 74 ಮರಿಗಳನ್ನು ಗುರುವಾರ ರಾತ್ರಿ ಸುರಕ್ಷಿತವಾಗಿ ಅರಬ್ಬಿ ಸಮುದ್ರಕ್ಕೆ ಬಿಡಲಾಗಿದೆ. ಅಪರೂಪದ ‘ಆಲೀವ್ ರಿಡ್ಲೆ’ ಜಾತಿಗೆ ಸೇರಿದ ಕಡಲಾಮೆ ಮೊಟ್ಟೆಗಳನ್ನು, ಕಡಲ ತೀರದಲ್ಲಿ ತಾತ್ಕಾಲಿಕ ರಕ್ಷಣಾ ಕೇಂದ್ರದಲ್ಲಿ ಸಂರಕ್ಷಣೆ ಮಾಡಲಾಗಿತ್ತು. ಅರಣ್ಯ ಇಲಾಖೆ, ಎಫ್.ಎಸ್.ಎಲ್ ಇಂಡಿಯಾ ಸ್ವಯಂ ಸೇವಾ ಸಂಘಟನೆ, ಸ್ಥಳೀಯ ಮೀನುಗಾರರು ಹಾಗೂ ರೀಫ್ ವಾಚ್ ಸಂಸ್ಥೆಯವರು ಹಗಲು- ರಾತ್ರಿ ಕಾವಲು ಕಾದು, ಮೊಟ್ಟೆಗಳ ಸಂರಕ್ಷಣೆ ಮಾಡಿದ್ದಾರೆ. ಅಲ್ಲದೇ ಮೊಟ್ಟೆಗಳಿಂದ ಮರಿಗಳು ಹೊರಗಡೆ ಬರುವುದನ್ನು ನಿರೀಕ್ಷೆ ಮಾಡುತ್ತಿದ್ದರು. ಗುರುವಾರ ರಾತ್ರಿ 9.45ಕ್ಕೆ ಕಡಲಾಮೆ ಮರಿಗಳು ಒಂದೊಂದಾಗಿ ರಕ್ಷಣಾ ಕೇಂದ್ರಗಳಿಂದ ಹೊರ ಬರಲು ಆರಂಭಿಸಿವೆ.ಮರಳುಗೂಡಿನಿಂದ ಹೊರ ಬಂದ ಮರಿಗಳನ್ನು ಸುರಕ್ಷಿತವಾಗಿ ಕಡಲು ಸೇರಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಗಿದೆ.

‘ತಾತ್ಕಾಲಿಕ ಸಂರಕ್ಷಣಾ ಕೇಂದ್ರದಲ್ಲಿ ಇನ್ನೂ 4 ಗೂಡುಗಳಲ್ಲಿ ಕಡಲಾಮೆ ಮೊಟ್ಟೆಗಳಿಗೆ ರಕ್ಷಣೆ ಒದಗಿಸಲಾಗಿದೆ. ಎಲ್ಲಾ ಮರಿಗಳ ಸುರಕ್ಷತೆಗಾಗಿ ಮುತುವರ್ಜಿ ವಹಿಸಲಾಗಿದೆ’ ಎಂದು ಎಫ್.ಎಸ್.ಎಲ್ ಸಂಸ್ಥೆಯ ಅಧ್ಯಕ್ಷ ರಾಕೇಶ್ ಸೋನ್ಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT