ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿರೋಧ ಪಕ್ಷದವರು ಬಡವರ ವಿರೋಧಿಗಳು: ನರೇಂದ್ರಸ್ವಾಮಿ

Published : 14 ಫೆಬ್ರುವರಿ 2024, 0:00 IST
Last Updated : 14 ಫೆಬ್ರುವರಿ 2024, 0:00 IST
ಫಾಲೋ ಮಾಡಿ
Comments

ಬೆಂಗಳೂರು: ‘ರಾಜ್ಯದಲ್ಲಿ ವಿರೋಧ ಪಕ್ಷದವರು ಬಡವರ ವಿರೋಧಿಗಳು. ಈ ಕಾರಣಕ್ಕಾಗಿಯೇ ಅವರು ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರವು ಬಡವರ ಪರವಾಗಿ ಮಾಡಿರುವ ಕೆಲಸಗಳನ್ನು ಒಪ್ಪಿಕೊಳ್ಳುತ್ತಿಲ್ಲ’ ಎಂದು ಕಾಂಗ್ರೆಸ್‌ನ ಪಿ.ಎಂ. ನರೇಂದ್ರಸ್ವಾಮಿ ವಿಧಾನಸಭೆಯಲ್ಲಿ ಮಂಗಳವಾರ ವಾಗ್ದಾಳಿ ನಡೆಸಿದರು.

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಸೋಮವಾರ ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯವನ್ನು ಸದನದಲ್ಲಿ ಮಂಡಿಸಿ ಮಾತನಾಡಿದ ಅವರು, ‘ನಮ್ಮ ಸರ್ಕಾರದ ಯೋಜನೆಗಳನ್ನು ವಿರೋಧ ಪಕ್ಷಗಳು ಶ್ಲಾಘಿಸಬೇಕಿತ್ತು. ಆದರೆ, ಅವು ಉಳ್ಳವರ ಪರವಾಗಿರುವುದರಿಂದ ವಿರೋಧಿಸುತ್ತಿವೆ’ ಎಂದರು.

‘ಭವಿಷ್ಯದತ್ತ ದೃಷ್ಟಿ ನೆಟ್ಟು ಕೆಲಸ ಮಾಡುತ್ತಿರುವ ಸರ್ಕಾರ ನಮ್ಮದು. ನಿಮ್ಮದು ಸುಳ್ಳಿನ ಆಡಳಿತವಾದರೆ ನಮ್ಮದು ಭರವಸೆ ಅನುಷ್ಠಾನದ ಮಾದರಿ. ಜನರು ಎಲ್ಲವನ್ನೂ ನೋಡಿದ್ದಾರೆ’ ಎಂದು ವಿರೋಧ ಪಕ್ಷಗಳ ಸದಸ್ಯರನ್ನು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿಯವರೇ ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಭರವಸೆಗಳನ್ನು ಟೀಕಿಸಿದ್ದರು. ಈಗ ಅವರೇ ಗ್ಯಾರಂಟಿ ಹೆಸರಿನಲ್ಲಿ ಭರವಸೆಗಳನ್ನು ನೀಡುತ್ತಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ರಾಜ್ಯದಲ್ಲಿ ಮಧ್ಯವರ್ತಿಗಳ ಹಾವಳಿ ಜಾಸ್ತಿ ಇತ್ತು. ಆದರೆ, ಕಾಂಗ್ರೆಸ್‌ ನೇತೃತ್ವದ ಸರ್ಕಾರ ಮಧ್ಯವರ್ತಿಗಳನ್ನು ಹೊರಗಟ್ಟಿ ಕೆಲಸ ಮಾಡುತ್ತಿದೆ ಎಂದರು.

ತೆರಿಗೆ ಪಾಲಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಅದನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ರಾಜ್ಯಕ್ಕೆ ನ್ಯಾಯ ಪಡೆಯುವುದಕ್ಕೆ ಬಿಜೆಪಿ, ಜೆಡಿಎಸ್‌ ಪಕ್ಷಗಳ ಸದಸ್ಯರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT