ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ನಲ್ಲಿ ವಿಪಕ್ಷ ಗದ್ದಲ; ಸಿಎಂ ಉತ್ತರ ಅರ್ಧಕ್ಕೇ ಸ್ಥಗಿತ

Published 29 ಫೆಬ್ರುವರಿ 2024, 15:15 IST
Last Updated 29 ಫೆಬ್ರುವರಿ 2024, 15:15 IST
ಅಕ್ಷರ ಗಾತ್ರ

ಬೆಂಗಳೂರು: ನಿರಂತರ ಗದ್ದಲ ಸೃಷ್ಟಿಸಿದ ಬಿಜೆಪಿ–ಜೆಡಿಎಸ್‌ ಸದಸ್ಯರ ವರ್ತನೆಯಿಂದ ಕುಪಿತಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್‌ನಲ್ಲಿ ಸೋಮವಾರ ಬಜೆಟ್‌ ಮೇಲಿನ ಚರ್ಚೆಗೆ ನೀಡುತ್ತಿದ್ದ ಉತ್ತರವನ್ನು ಅರ್ಧಕ್ಕೆ ಮೊಟುಕುಗೊಳಿಸಿದರು. 

ಹಿಂದಿನ ಅಧಿವೇಶನಗಳಲ್ಲಿ ವಿರೋಧ ಪಕ್ಷಗಳ ಸದಸ್ಯರು ಎಷ್ಟೇ ಅಡ್ಡಿಪಡಿಸಿದರೂ, ಅದನ್ನು ಕಡೆಗಣಿಸಿ ಮೂರ್‍ನಾಲ್ಕು ತಾಸು ಉತ್ತರ ನೀಡುತ್ತಿದ್ದ ಸಿದ್ದರಾಮಯ್ಯ ಇದೇ ಮೊದಲ ಬಾರಿ ಅರ್ಧ ಗಂಟೆಗೆ ತಮ್ಮ ಮಾತು ಮೊಟಕುಗೊಳಿಸಿ, ಧನ ವಿನಿಯೋಗ ಮಸೂದೆಗೆ ಅಂಗೀಕಾರ ನೀಡುವಂತೆ ಪ್ರಸ್ತಾವ ಮಂಡಿಸಿದರು. 

ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆಯೇ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಲು ಆರಂಭಿಸಿದರು. ಆಗ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಸಚೇತಕ ಎನ್‌.ರವಿಕುಮಾರ್ ಅವರು ಎದ್ದು ನಿಂತು ‘ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೂಗಿದ ಆರೋಪಿಗಳನ್ನು ಏಕೆ ಬಂಧಿಸಿಲ್ಲ? ಘಟನೆ ನಡೆದು 36 ಗಂಟೆಗಳಾದರೂ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ. ನಮಗೆ ಬಜೆಟ್‌ ಮೇಲಿನ ಚರ್ಚೆಗಿಂತಲೂ ದೇಶದ ಹಿತಾಸಕ್ತಿ ಮುಖ್ಯ. ಮೊದಲು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು’ ಎಂದು ಪಟ್ಟು ಹಿಡಿದರು. 

ಬಿಜೆಪಿ–ಜೆಡಿಎಸ್‌ ಸದಸ್ಯರ ಬೇಡಿಕೆಯನ್ನು ಸಭಾಪತಿ ಬಸವರಾಜ ಹೊರಟ್ಟಿ ಮಾನ್ಯ ಮಾಡಲಿಲ್ಲ. ಮುಖ್ಯಮಂತ್ರಿ ಮಾತಿನ ನಂತರ ಗೃಹ ಸಚಿವರು ಉತ್ತರ ನೀಡುತ್ತಾರೆ ಎಂದರು.

ಸಭಾಪತಿ ಮಾತು ಒಪ್ಪದ ವಿರೋಧ ಪಕ್ಷಗಳ ಎಲ್ಲ ಸದಸ್ಯರು ಎದ್ದು ನಿಂತು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಗದ್ದಲದ ಮಧ್ಯೆಯೇ ಮಾತು ಮುಂದಿವರಿಸಿದ ಮುಖ್ಯಮಂತ್ರಿ, ಬಿಜೆಪಿ ವರ್ತನೆಯನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯಕ್ಕೆ ಕೇಂದ್ರದ ಅನ್ಯಾಯ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಆರ್‌ಎಸ್‌ಎಸ್‌ ನಿಲುವು, ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ಕುತಂತ್ರದ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಬಿಜೆಪಿ ಸದಸ್ಯರನ್ನು ಮತ್ತಷ್ಟು ಕೆರಳಿಸಿದರು. 

ಗದ್ದಲ ನಿಲ್ಲಿಸಿ, ಕುಳಿತುಕೊಳ್ಳುವಂತೆ ಸಭಾಪತಿ ಸೂಚನೆಗೂ ಮನ್ನಣೆ ದೊರೆಯಲಿಲ್ಲ. ಕೊನೆಗೆ ಸಿದ್ದರಾಮಯ್ಯ ಉತ್ತರನ್ನು ಅರ್ಧಕ್ಕೆ ನಿಲ್ಲಿಸಿದರು. ಗದ್ದಲದ ಮಧ್ಯೆ ಧನ ವಿನಿಯೋಗ ಮಸೂದೆಗೆ ಅಂಗೀಕಾರ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT