ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರ ಮಹಾ ಸಮ್ಮೇಳನ | ಸಿಗದ ಭರವಸೆ: ಸಿಎಂ ವಿರುದ್ಧ ಆಕ್ರೋಶ

ವೇತನ ಪರಿಷ್ಕರಣೆಯ ಘೋಷಣೆ ನಿರೀಕ್ಷೆ* ಸರ್ಕಾರಿ ನೌಕರರ ‘ಮಹಾ ಸಮ್ಮೇಳನ
Published 28 ಫೆಬ್ರುವರಿ 2024, 0:01 IST
Last Updated 28 ಫೆಬ್ರುವರಿ 2024, 0:01 IST
ಅಕ್ಷರ ಗಾತ್ರ

ಬೆಂಗಳೂರು: ಏಳನೇ ವೇತನ ಆಯೋಗದ ವರದಿ ಜಾರಿ, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದು, ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಭರವಸೆ ನೀಡಲಿಲ್ಲ ಎಂದು ಸರ್ಕಾರಿ ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಂಗಳವಾರ ಇಲ್ಲಿ ಆಯೋಜಿಸಿದ್ದ ‘ಮಹಾ ಸಮ್ಮೇಳನ’ದಲ್ಲಿ ಎರಡು ಲಕ್ಷ ನೌಕರರು ಭಾಗವಹಿಸಿದ್ದರು. ಪ್ರಮುಖ ಮೂರು ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಘೋಷಣೆ ಮಾಡಲಿದ್ದಾರೆ ಎಂದು ನೌಕರರು ನಿರೀಕ್ಷಿಸಿದ್ದರು. 

‘ಭರವಸೆಗಳನ್ನು ಈಡೇರಿಸುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ’ ಎಂಬ ಮುಖ್ಯಮಂತ್ರಿ‌ ಹೇಳಿದರೂ ‘ನಂಬಿಕೆ ಇಲ್ಲ’ ಎಂದು ಕೂಗಿದ ನೌಕರರು ಸಮ್ಮೇಳನದ ಸಭಾಂಗಣದಿಂದ ಹೊರನಡೆದರು.

ಸಮ್ಮೇಳನದ ಉದ್ಘಾಟನೆಗೆ ಸಿದ್ದರಾಮಯ್ಯ  ಬಂದಾಗ ಸಂಭ್ರಮದಿಂದ ಬರಮಾಡಿಕೊಂಡಿದ್ದ ನೌಕರರು, ಸಿಎಂ, ಡಿಸಿಎಂ ಭಾವಚಿತ್ರವಿರುವ ಫಲಕ ಹಿಡಿದು ಹರ್ಷ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಭಾಷಣ ಆರಂಭಿಸಿದಾಗ, ತಮ್ಮ ಬೇಡಿಕೆ ಈಡೇರಿಸುತ್ತಾರೆಂಬ ನಿರೀಕ್ಷೆಯಲ್ಲಿ ಕರತಾಡನದ ಸದ್ದು ಸಭಾಂಗಣವನ್ನು ಆವರಿಸಿತ್ತು.  ಭಾಷಣದ ಮಧ್ಯದಲ್ಲಿ ‘ಸರ್ಕಾರಿ ನೌಕರರು ತಮ್ಮ ಬೇಡಿಕೆಗಳನ್ನು ಕೇಳಬೇಕು. ರಾಜ್ಯ ಸರ್ಕಾರ ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಆದರೆ, ಬೇಡಿಕೆ ಕೇಳುವುದೇ ನೌಕರರ ಪ್ರಥಮ ಆದ್ಯತೆಯಾಗಬಾರದು. ರಾಜ್ಯದ ಜನರ ಪರವಾಗಿ ಕೆಲಸ ಮಾಡಬೇಕಾಗಿರುವುದೇ ಆದ್ಯತೆಯಾಗಬೇಕು. ಬೇಡಿಕೆ ಎರಡನೇ ಆದ್ಯತೆಯಾಗಲಿ’ ಎಂದು ಮುಖ್ಯಮಂತ್ರಿ ಹೇಳಿದಾಗ, ನೌಕರರು ಅಸಮಾಧಾನ ವ್ಯಕ್ತಪಡಿಸಲು ಶುರುಮಾಡಿದರು.

‘ಏಳನೇ ವೇತನ ಆಯೋಗದ ಅಧ್ಯಕ್ಷರು ವರದಿ ನೀಡಿದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮುಖ್ಯಮಂತ್ರಿ ಹೇಳಿದಾಗ, ಅಸಮಾಧಾನ ಇನ್ನೂ ತೀವ್ರಗೊಂಡಿತ್ತು. ‘ಎನ್‌ಪಿಎಸ್‌ ರದ್ದತಿಗೆ ಸಂಬಂಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ವರದಿ ನೀಡಿದ ಮೇಲೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದಾಗ, ನೌಕರರ ಆಕ್ರೋಶ ತೀವ್ರಗೊಂಡಿತು. ‘ಈಗಲೇ ಎನ್‌ಪಿಎಸ್‌ ರದ್ದು ಮಾಡಬೇಕು’ ಎಂದು ನೌಕರರು ಘೋಷಣೆ ಕೂಗಿ, ಒತ್ತಾಯಿಸಿದರು. 

‘ಆರೋಗ್ಯ ಸಂಜೀವಿನಿ ಯೋಜನೆ ಸರ್ಕಾರಿ ನೌಕರರಿಗೆ ಅನ್ವಯವಾಗುವ ಕಡತ ಮಂಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದನ್ನೂ ಮಾಡುತ್ತೇನೆ. ಸಂಶಯಬೇಡ’ ಎಂದು ಮುಖ್ಯಮಂತ್ರಿಯವರು ಹೇಳಿದಾಗ, ನೌಕರರು ‘ಈಗಲೇ ಘೋಷಣೆ ಮಾಡಿ’ ಎಂದು ಕೂಗಿದರು. ‘ನಿಮ್ಮ ಪರ ನಾನಿದ್ದೇನೆ, ಸಂಶಯಬೇಡ, ನಂಬಿಕೆ ಇಡಿ’ ಎಂದಾಗ ‘ನಂಬಿಕೆ ಇಲ್ಲ’ ಎಂದು ಕೂಗಿ ಹಲವರು ಹೊರನಡೆದರು. ಮುಖ್ಯಮಂತ್ರಿಯವರೂ ವೇದಿಕೆಯಿಂದ ಹೊರಟರು. ಘೋಷಣೆ ಕೂಗುತ್ತಲೇ ನೌಕರರು ಅರಮನೆ ಮೈದಾನದಿಂದ ಹೊರಹೋದರು.

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಎಂ.ಟಿ. ಕೃಷ್ಣಪ್ಪ, ಎಚ್‌.ಎನ್‌. ಶೇಷೇಗೌಡ, ಎಲ್‌. ಭೈರಪ್ಪ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯ ನೌಕರರ ಸಮ್ಮೇಳನದಲ್ಲಿ ಭಾಗವಹಿಸಿದ್ದ ನೌಕರರು
ರಾಜ್ಯ ನೌಕರರ ಸಮ್ಮೇಳನದಲ್ಲಿ ಭಾಗವಹಿಸಿದ್ದ ನೌಕರರು

ನಂಬಿಕೆ ಇಡಿ ನಾನು ನಿಮ್ಮ ಪರ: ಸಿದ್ದರಾಮಯ್ಯ

‘ಐದು ಗ್ಯಾರಂಟಿಗಳನ್ನು ಜಾರಿ ಮಾಡುವ ಜೊತೆಗೆ ಏಳನೇ ವೇತನ ಆಯೋಗದ ಅಂತಿಮ ವರದಿ ಬಂದ ನಂತರ ಸಕಾರಾತ್ಮಕವಾಗಿ ತೀರ್ಮಾನ ಕೈಗೊಳ್ಳಲಾಗುತ್ತದೆ. ನನ್ನ ಮೇಲೆ ನಂಬಿಕೆ ಇಡಿ ಯಾವುದೇ ಸಂಶಯ ಬೇಡ. ನಾನು ನಿಮ್ಮ ಪರ ಇದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನೌಕರರಿಗೆ ಭರವಸೆ ನೀಡಿದರು. ‘ಮಹಾ ಸಮ್ಮೇಳನ’ ಉದ್ಘಾಟಿಸಿ ಮಾತನಾಡಿದ ಅವರು ‘ಎನ್‌ಪಿಎಸ್ ತೆಗೆದು ಹಳೆ ಪಿಂಚಣಿ ವ್ಯವಸ್ಥೆ ಜಾರಿ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅವರು ಇನ್ನೂ ವರದಿ ನೀಡಿಲ್ಲ. ಆ ವರದಿ ಬಂದ ಮೇಲೆ ನಿಮ್ಮೆಲ್ಲರ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಎನ್‌ಪಿಎಸ್‌ ಕೇಂದ್ರ ಸರ್ಕಾರ ಮಾಡಿರುವುದು. ನೀವು ಅರ್ಥ ಮಾಡಿಕೊಳ್ಳಬೇಕು. ಈಗಲೇ ಘೋಷಣೆ ಮಾಡಿ ಎಂದರೆ ಸಾಧ್ಯವಾಗುವುದಿಲ್ಲ’ ಎಂದರು. ‘ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿ ಮಾಡುವ ಬಗ್ಗೆಯೂ ಶೀಘ್ರದಲ್ಲಿ ತೀರ್ಮಾನಿಸಲಾಗುವುದು. ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ಸರ್ಕಾರಿ ನೌಕರರದ್ದು. ನಾನು ನಿಮ್ಮಪರ ಅದರಲ್ಲಿ ಯಾವುದೇ ಸಂಶಯ ಬೇಡ. ನಂಬಿಕೆ ಇರಲಿ’ ಎಂದು ಸಿದ್ದರಾಮಯ್ಯ ಹೇಳಿದರು. ‘ಆರನೇ ವೇತನ ಆಯೋಗ ರಚಿಸಿ ಅದನ್ನು ಜಾರಿಗೆ ತಂದಿದ್ದು ನಮ್ಮ ಸರ್ಕಾರ. ಶೇ 30ರಷ್ಟು ಮೂಲವೇತನ ಫಿಟ್‌ಮೆಂಟ್‌ ಜಾರಿಗಾಗಿ ₹10500 ಕೋಟಿ ಹಣವನ್ನು ಹೆಚ್ಚುವರಿಯಾಗಿ ನೀಡಲಾಗಿತ್ತು. ಏಳನೇ ವೇತನ ಆಯೋಗದ ಅಂತಿಮ ವರದಿ ನೀಡಲು ಇನ್ನಷ್ಟು ಕಾಲಾವಕಾಶ ಬೇಕೆಂದು ಆಯೋಗದ ಆಧ್ಯಕ್ಷರೇ ಸಮಯ ಕೋರಿದ್ದು ಮಾರ್ಚ್ 15ರವರೆಗೆ ಸಮಯಾವಕಾಶ ನೀಡಲಾಗಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಂತಿಮ ವರದಿಯನ್ನು ಆದಷ್ಟು ಬೇಗ ಸಲ್ಲಿಸುವಂತೆ ಹೇಳುತ್ತೇನೆ. ನಾನು ಸರ್ಕಾರಿ ನೌಕರರ ಪರವಾಗಿದ್ದೇನೆ’ ಎಂದು ತಿಳಿಸಿದರು.

‘ಸಮಯ ನೀಡೋಣ ಹೋರಾಟ ಇದ್ದೇ ಇದೆ’

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇತನ ಆಯೋಗದ ಅಧ್ಯಕ್ಷರಿಂದ ವರದಿಯನ್ನು ಬೇಗ ತರಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಎನ್‌ಪಿಎಸ್ ರದ್ದು ಆರೋಗ್ಯ ಸಂಜೀವಿನಿ ಬಗ್ಗೆಯೂ ಮಾತನಾಡಿದ್ದಾರೆ. ಅವರಿಗೆ ಸಮಯ ನೀಡೋಣ. ಅದು ಈಡೇರದಿದ್ದರೆ ನಮ್ಮ ಹೋರಾಟ ಇದ್ದೇ ಇರುತ್ತದೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅವರು ನೌಕರರಿಗೆ ಹೇಳಿ ಸಮಾಧಾನಪಡಿಸಲು ಪ್ರಯತ್ನಿಸಿದರು. ಮುಖ್ಯಮಂತ್ರಿಯವರು ವೇದಿಕೆಯಿಂದ ಹೋದ ನಂತರ ಮಾತನಾಡಿದ ಷಡಾಕ್ಷರಿ ‘ಲೋಕಸಭೆ ಚುನಾವಣೆ ನೀತಿ ಸಂಹಿತೆಯೊಳಗೆ ನಮ್ಮ ಮೂರು ಬೇಡಿಕೆಗಳನ್ನು ಈಡೇರಿಸಲು ನಮ್ಮ ಒತ್ತಾಯವಿದೆ. ಇನ್ನೆರಡು ತಿಂಗಳು ಸಮಯ ನೀಡೋಣ. 2 ಲಕ್ಷಕ್ಕೂ ಹೆಚ್ಚು ಜನ ಸೇರಿ ನಮ್ಮ ಸಂಘಟನೆಯ ಶಕ್ತಿ ತೋರಿದ್ದೇವೆ. ಭರವಸೆ ಈಡೇರದಿದ್ದರೆ ಹೋರಾಟ ಮಾಡೋಣ’ ಎಂದು ಹೇಳಿದರು. ಅದಕ್ಕೂ ಒಪ್ಪದ ಬಹಳಷ್ಟು ನೌಕರರು ಊಟವನ್ನೂ ಮಾಡದೆ ಅಸಮಾಧಾನದಿಂದ ಹೊರನಡೆದರು.

- ‘ಗ್ಯಾರಂಟಿಗೆ ₹56 ಸಾವಿರ ಕೋಟಿ’

‘2024–25ನೇ ಸಾಲಿನಲ್ಲಿ ಗ್ಯಾರಂಟಿಗಳಿಗೆ ₹56 ಸಾವಿರ ಕೋಟಿ ಆಗಬಹುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ಗ್ಯಾರಂಟಿಗಳಿಗೆ 2023–24ನೇ ಸಾಲಿನಲ್ಲಿ ₹36 ಸಾವಿರ ಕೋಟಿ ವೆಚ್ಚವಾಗಿದೆ. 2024–25 ಸಾಲಿನ‌ ಬಜೆಟ್‌ನಲ್ಲಿ ಐದು ಗ್ಯಾರಂಟಿಗಳಿಗೆ ₹52009 ಕೋಟಿ ವೆಚ್ಚವಾಗಬಹುದು ಎಂದು ಬಜೆಟ್‌ನಲ್ಲಿ ಹೇಳಿದ್ದೇನೆ. ಆದರೆ ಇದು ಹೆಚ್ಚಾಗಿ ₹56 ಸಾವಿರ ಕೋಟಿಯಾಗುವ ಅಂದಾಜು ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT