ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಸಾಲಿ ಸಮುದಾಯ ಪ್ರವರ್ಗ '2ಡಿ'ಗೆ: ಸರ್ಕಾರದ ಆದೇಶ ಪ್ರತಿ ಸುಟ್ಟು ಆಕ್ರೋಶ

Last Updated 4 ಏಪ್ರಿಲ್ 2023, 4:14 IST
ಅಕ್ಷರ ಗಾತ್ರ

ಬೆಳಗಾವಿ: ‘2ಡಿ’ ಮೀಸಲಾತಿಯನ್ನು ಧಿಕ್ಕರಿಸಿ ಪಂಚಮಸಾಲಿ ಸಮಾಜದ ಮುಖಂಡರು ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಮೀಸಲಾತಿ ಆದೇಶದ ನಕಲು ಪ್ರತಿಗಳಿಗೆ ಬೆಂಕಿ ಹಚ್ಚಿದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವರಾದ ವಿನಯ ಕುಲಕರ್ಣಿ, ಎ.ಬಿ.ಪಾಟೀಲ, ಮುಖಂಡರಾದ ಎಚ್‌.ಎಸ್‌.ಶಿವಶಂಕರ, ದಿನೇಶ ಪಾಟೀಲ, ಗುಂಡು ಪಾಟೀಲ, ನಿಂಗಪ್ಪ ಪಿರೋಜಿ, ಆರ್‌.ಕೆ.ಪಾಟೀಲ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯಾ ನಂದ ಕಾಶಪ್ಪನವರ, ‘ಮೀಸಲಾತಿ ವಿಚಾರದಲ್ಲಿ ಸರ್ಕಾರ ಚೆಲ್ಲಾಟವಾಡಿದೆ. ‘2ಡಿ’ ಮೀಸಲಾತಿಯು ವಿಧಾನಸಭೆ ಚುನಾವಣೆಗಾಗಿ ಮಾಡಿದ ಕುತಂತ್ರ. ಸಮಾಜ ಇದನ್ನು ಒಪ್ಪುವುದಿಲ್ಲ’ ಎಂದು ಹೇಳಿದರು.

‘ಲಿಂಗಾಯತರು ಮತ್ತೊಬ್ಬರ ಮೀಸಲಾತಿ ಕಸಿದುಕೊಳ್ಳುವಷ್ಟು ಕೆಟ್ಟವರಲ್ಲ. ಕುತಂತ್ರ ಬುದ್ಧಿ ಹೊಂದಿರುವ ಕೆಲವರು ಈ ನಾಟಕವಾಡಿದ್ದಾರೆ. ವಿಜಯೋತ್ಸವ ಆಚರಿಸುತ್ತೇವೆ ಎನ್ನುತ್ತಿದ್ದಾರೆ. ನಾವು ಇದನ್ನು ಒಪ್ಪುವುದಿಲ್ಲ’ ಎಂದರು.

‘ವಿನಯ ಕುಲಕರ್ಣಿ ಮತ್ತು ವಿಜಯಾನಂದ ಕಾಶಪ್ಪನವರ ಕುಡಿದ ಅಮಲಿನಲ್ಲಿ ಸ್ವಾಮೀಜಿ ಬಗ್ಗೆ ಮಾತನಾಡಿದ್ದಾರೆ’ ಎಂದು ಸಚಿವ ಸಿ.ಸಿ.ಪಾಟೀಲ ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಅವರೇನು ಕುಡಿಯುವುದಿಲ್ಲವೇ? ಸಿ.ಸಿ.ಪಾಟೀಲ ಅವರ ಮನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿತ್ಯವೂ ಏನು ಮಾಡುತ್ತಾರೆ ಪರಿಶೀಲಿಸಿ. ಅಪಹಾಸ್ಯ ಗೌರವ ತರುವುದಿಲ್ಲ’ ಎಂದು ಹೇಳಿದರು.

‘ಜಯಮೃತ್ಯುಂಜಯ ಸ್ವಾಮೀಜಿಗೆ ಕರೆ ಮಾಡಿ ಅಗೌರವ’
ಬೆಂಗಳೂರು
: ರಾಜ್ಯ ಸರ್ಕಾರ ಪ್ರಕಟಿಸಿದ ಮೀಸಲಾತಿಯನ್ನು ಒಪ್ಪಿ ಹೋರಾಟ ನಿಲ್ಲಿಸಿದ ಕಾರಣ ಕೂಡಲ ಸಂಗಮಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಕಾಂಗ್ರೆಸ್‌ನ ಕೆಲವು ನಾಯಕರು ದೂರವಾಣಿ ಕರೆ ಮಾಡಿ ಅಗೌರವ ತೋರುತ್ತಿದ್ದಾರೆ ಎಂದು ಸಚಿವ ಸಿ.ಸಿ.ಪಾಟೀಲ ಮತ್ತು ಶಾಸಕ ಅರವಿಂದ ಬೆಲ್ಲದ ಅವರು ಆರೋಪಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಸ್ವಾಮೀಜಿಯವರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡುವುದಾಗಿ ಬೊಮ್ಮಾಯಿ ಭರವಸೆ ನೀಡಿದರು.

‘ಸ್ವಾಮೀಜಿಯವರು 2ಎ ಮೀಸಲಾತಿಗೆ ಹೋರಾಟ ಮಾಡಿದ್ದರು. ಸರ್ಕಾರ ಮೀಸಲಾತಿ ಪ್ರಕಟಿಸಿ, ಆದೇಶ ಪತ್ರ ನೀಡಿದ ನಂತರ ಹೋರಾಟವನ್ನು ಹಿಂದಕ್ಕೆ ಪಡೆದಿದ್ದರು. ಇದರಿಂದ ಬೇಸರಗೊಂಡಿರುವ ಕಾಂಗ್ರೆಸ್‌ನ ಕೆಲವು ನಾಯಕರು ಮದ್ಯಪಾನ ಮಾಡಿ, ಸ್ವಾಮೀಜಿ ಜೊತೆಗೆ ಅಗೌರವದಿಂದ ಮಾತನಾಡಿದ್ದಾರೆ. ಈ ಮೂಲಕ ಪಂಚಮಸಾಲಿ ಸಮುದಾಯಕ್ಕೆ ಅಗೌರವವುಂಟು ಮಾಡಿದ್ದಾರೆ’ ಎಂದು ಪಾಟೀಲ ಹೇಳಿದರು.

ಮೀಸಲಾತಿ ವಿಚಾರವನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್ ಉದ್ದೇಶಿಸಿತ್ತು. ಮುಖ್ಯಮಂತ್ರಿಯವರ ದಿಟ್ಟ ನಿರ್ಧಾರದಿಂದ ಈಗ ಹತಾಶೆಗೊಂಡಿದೆ. ಹೀಗಾಗಿ ಸ್ವಾಮೀಜಿಯವರ ಮೇಲೆ ಮುಗಿಬಿದ್ದಿದ್ದಾರೆ. ಪಂಚಮಸಾಲಿ ಸಮುದಾಯ ಎಲ್ಲ ವರ್ಗವನ್ನೂ ಒಟ್ಟಿಗೆ ಕರೆದುಕೊಂಡು ಹೋಗಿದೆ. ಈ ಹೋರಾಟದಿಂದ ಅನೇಕ ಸಮುದಾಯಗಳಿಗೆ ಅನುಕೂಲವಾಗಿದೆ ಎಂದರು.

ಸ್ವಾಮೀಜಿಯವರಿಗೆ ಕರೆ ಮಾಡಿ ಅಗೌರವದಿಂದ ಮಾತನಾಡುತ್ತಿರುವ ಕಾಂಗ್ರೆಸ್‌ ನಾಯಕರ ಹೆಸರು ಹೇಳಿ ಎಂದು ಸುದ್ದಿಗಾರರು ಒತ್ತಾಯಿಸಿದಾಗ, ‘ಹೆಸರು ಹೇಳುವುದಿಲ್ಲ. ಹೋರಾಟದಲ್ಲಿ ಇದ್ದವರೇ ಆ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

‘ಮೀಸಲಾತಿ ಮರು ವರ್ಗೀಕರಣದಿಂದ ಅನ್ಯಾಯ’
ಬೆಂಗಳೂರು
: ರಾಜ್ಯ ಸರ್ಕಾರವು ಮೀಸಲಾತಿ ಮರುವರ್ಗೀಕರಣಗೊಳಿಸಿ ಬಲಿಜ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ರಾಜ್ಯ ಸಮಗ್ರ ಬಲಿಜ ವೇದಿಕೆ ದೂರಿದೆ.

‌‘ಬಲಿಜ ಸಮುದಾಯವನ್ನು ಪ್ರವರ್ಗ ‘2 ಸಿ’ಗೆ ಸೇರಿಸಲಾಗಿದೆ. ಇದರಿಂದ ರಾಜಕೀಯ, ಉದ್ಯೋ ಗದ ವಿಚಾರದಲ್ಲಿ ಬಲಿಜ ಸಮುದಾಯಕ್ಕೆ ಸಾಸಿವೆಯಷ್ಟು ಪ್ರಯೋಜನ ಇಲ್ಲ’ ಎಂದು ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌.ರಮೇಶ್‌ ತಿಳಿಸಿದ್ದಾರೆ.

‘ಮರು ವರ್ಗೀಕರಣ ಖಂಡಿಸಿ ಚಿಕ್ಕಬಳ್ಳಾಪುರದಲ್ಲಿ ಜಾಗೃತಿ ಸಮಾವೇಶ ಆಯೋಜಿಸಲು ತೀರ್ಮಾನಿಸಲಾಗಿದೆ’ ಎಂದರು.

‘ಬಲಿಜ ಸಮುದಾಯವನ್ನು ಪೂರ್ಣ ಪ್ರಮಾಣದಲ್ಲಿ ಪ್ರವರ್ಗ ‘2ಎ’ಗೆ ಸೇರಿಸಬೇಕು. ‘2ಸಿ’ಯಲ್ಲಿ ಉಳಿದರೆ ಪ್ರಬಲ ಸಮುದಾಯಗಳಾದ ಒಕ್ಕಲಿಗ, ರೆಡ್ಡಿ, ಲಿಂಗಾಯತರ ಜತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.

‘ಹೋರಾಟದ ಫಲವಾಗಿ 2011ರಲ್ಲಿ ಶಿಕ್ಷಣದ ಸೌಲಭ್ಯಕ್ಕಾಗಿ ‘2ಎ’ ಮೀಸಲಾತಿ ನೀಡಲಾಗಿತ್ತು. ಉದ್ಯೋಗದ ವಿಷಯದಲ್ಲಿ ‘3ಎ’ ಪಟ್ಟಿಯಲ್ಲೇ ಉಳಿಸಲಾಗಿತ್ತು. ಇದೀಗ ಮತ್ತೆ ಅನ್ಯಾಯ ಎಸಗಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT