ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗೆ ಗ್ರಾಹಕನ ವೈಯಕ್ತಿಕ ಹಿತಕ್ಕಿಂತ ಜನರ ವಿಶ್ವಾಸ ದೊಡ್ಡದು: ಹೈಕೋರ್ಟ್‌

ಸುಸ್ಥಿದಾರ ಕಂಪನಿಯ ಅರ್ಜಿ ತಿರಸ್ಕರಿಸಿದ ಹೈಕೋರ್ಟ್‌ ಅಭಿಮತ
Last Updated 12 ಅಕ್ಟೋಬರ್ 2021, 21:17 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ಯಾಂಕ್‌ಗಳಿಗೆ ಯೋಜನೆಯೊಂದರ ಅಡಿಯಲ್ಲಿ ಒಬ್ಬ ಗ್ರಾಹಕನಿಗೆ ದೊರೆಯಬಹುದಾದ ಅನುಕೂಲಕ್ಕಿಂತಲೂ ಜನಸಮೂಹದ ವಿಶ್ವಾಸ ಉಳಿಸಿಕೊಳ್ಳುವುದೇ ಮುಖ್ಯ’ ಎಂದು ಹೈಕೋರ್ಟ್‌ ಹೇಳಿದೆ.

ಸಾಲ ಖಾತರಿ ಯೋಜನೆಯ ಅಡಿಯಲ್ಲಿ ಫಲಾನುಭವಿಯಾಗಿದ್ದು, ಮರುಪಾವತಿ ಮಾಡದೇ ಸುಸ್ಥಿದಾರನಾಗಿದ್ದ ಕಂಪನಿಯೊಂದು ತನಗೆ ಪುನಃ ನೆರವು ನೀಡದ ಬ್ಯಾಂಕ್‌ನ ತೀರ್ಮಾನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರನ್ನೊಳಗೊಂಡ ಏಕಸದಸ್ಯ ಪೀಠ ಈ ಮಾತು ಹೇಳಿದೆ.

ಅರ್ಜಿದಾರ ಕಂಪನಿಯು ಸಂಗೀತ ಉಪಕರಣಗಳು ಹಾಗೂ ಧ್ವನಿವರ್ಧಕಗಳಿಗೆ ಸಂಬಂಧಿಸಿದ ವಹಿವಾಟು ನಡೆಸುತ್ತಿದೆ. ಕಂಪನಿಯು ಸೌತ್‌ ಇಂಡಿಯನ್‌ ಬ್ಯಾಂಕ್‌ನಿಂದ ಕೆಲವು ಕೋಟಿ ರೂಪಾಯಿಗಳಷ್ಟು ‘ಕ್ಯಾಶ್‌ ಕ್ರೆಡಿಟ್‌ ಓಪನ್‌ ಲೋನ್‌’ ಹಾಗೂ ಕಾಲಾವಧಿ ಸಾಲಗಳನ್ನು ಪಡೆದಿತ್ತು. ಆದರೆ, ಕಂಪನಿ ಸಾಲ ಮರುಪಾವತಿ ಮಾಡಿರಲಿಲ್ಲ. ಬ್ಯಾಂಕ್‌ ಸಾಲ ವಸೂಲಿಗೆ ಕ್ರಮ ಕೈಗೊಂಡಿತ್ತು.

ಪುನಃ ನೆರವು ನೀಡುವಂತೆ ಕಂಪನಿ ಸಲ್ಲಿಸಿದ್ದ ಮನವಿಯನ್ನು ಬ್ಯಾಂಕ್‌ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಕಂಪನಿಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಯಾವುದೇ ಕಾರಣ ನೀಡದೆ ತಮ್ಮ ಮನವಿಯನ್ನು ತಿರಸ್ಕರಿಸುವ ಕ್ರಮ ಕಾನೂನಿನ ಪ್ರಕಾರ ಸರಿಯಲ್ಲ ಎಂಬುದು ಅರ್ಜಿದಾರರ ವಾದ.

‘ಬ್ಯಾಂಕ್‌ಗಳು ಗ್ರಾಹಕರ ಜತೆ ವ್ಯವಹರಿಸುವ ಪ್ರಕ್ರಿಯೆನ್ನು ಇತರ ಸರ್ಕಾರಿ ಇಲಾಖೆ, ಸಂಸ್ಥೆಗಳು ಜನರೊಂದಿಗೆ ವ್ಯವಹರಿಸುವ ವಿಧಾನಕ್ಕೆ ಸರಿಸಮನಾಗಿ ಪರಿಗಣಿಸಿ ನ್ಯಾಯಾಂಗವು ಪರಾಮರ್ಶೆಗೆ ಒಳಪಡಿಸಲು ಆಗದು. ಬ್ಯಾಂಕ್‌ಗಳು ಸಂವಿಧಾನದ 12ನೇ ಪರಿಚ್ಛೇದದ ಪ್ರಕಾರ ಸರ್ಕಾರದ ಪರಿಧಿಯೊಳಗೆ ಬರುವುದು ನಿಜ. ಆದರೆ, ಬ್ಯಾಂಕ್‌ ಮತ್ತು ಗ್ರಾಹಕರ ನಡುವಿನ ವ್ಯವಹಾರವು ಒಪ್ಪಂದ ಅನುಸಾರವೇ ನಡೆಯುತ್ತಿರುತ್ತದೆ. ಈ ಕಾರಣದಿಂದ ಬ್ಯಾಂಕ್‌ನ ನಿರ್ಧಾರವನ್ನು ಮರುಪರಿಶೀಲಿಸಲು ಸೂಚಿಸಲಾಗದು’ ಎಂದು ನ್ಯಾಯಪೀಠ ಹೇಳಿದೆ.

ತಮ್ಮ ವಾಣಿಜ್ಯ ಸಂಬಂಧಿ ದೂರದೃಷ್ಟಿಯನ್ನು ಬದಿಗಿರಿಸಿ ಕೆಲಸ ಮಾಡಬೇಕು ಎನ್ನಲಾಗದು. ಅದರಲ್ಲೂ, ಸಾಲಗಾರರ ಆರ್ಥಿಕ ಶಕ್ತಿಯು ಕುಗ್ಗಿದ ಸಂದರ್ಭದಲ್ಲಿ ಆ ರೀತಿ ಯೋಚಿಸಲಾಗದು ಎಂದು ತಿಳಿಸಿದೆ.

‘ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ವಲಯದ 24 ಬ್ಯಾಂಕ್‌ಗಳು ಬಾಗಿಲುಮುಚ್ಚಿವೆ ಅಥವಾ ಇತರ ಬ್ಯಾಂಕ್‌
ಗಳೊಂದಿಗೆ ವಿಲೀನಗೊಂಡಿವೆ. ಅಸರ್ಮಪಕ ರೀತಿಯ ಸಾಲ ಮಂಜೂರಾತಿಯೇ ಬ್ಯಾಂಕ್‌ಗಳು ಮುಳುಗಲು ಮುಖ್ಯ ಕಾರಣ ಎಂಬುದು ಗಮನದಲ್ಲಿರಬೇಕಾಗುತ್ತದೆ’ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT