ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪ್ರಚಾರದ ಬಳಿಕ ಹಲ್ಲೆ –ನಾಲ್ವರಿಗೆ ಗಾಯ

ಪೊಲೀಸ್‌ ಠಾಣೆಗೆ ಬಿಜೆಪಿ ಕಾರ್ಯಕರ್ತರಿಂದ ಮುತ್ತಿಗೆ
Last Updated 2 ಮೇ 2019, 17:14 IST
ಅಕ್ಷರ ಗಾತ್ರ

ಉಳ್ಳಾಲ: ಮಂಗಳೂರಿನಲ್ಲಿ ಶನಿವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿ ಮುಗಿಸಿ ವಾಪಸ್‌ ಹೊರಟಿದ್ದ ಕಾರು ಮತ್ತು ಬಸ್‌ ಮೇಲೆ ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಕುತ್ತಾರು ಮದನಿನಗರದ ಬಳಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಇದನ್ನು ಖಂಡಿಸಿ ಹಾಗೂ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಕೊಣಾಜೆ ಠಾಣೆ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಕುಂಪಲ ನಿವಾಸಿಗಳಾದ ಸುಜನ್ (24), ನಾಹುಷ್ (21) ಹಾಗೂ ಮದನಿ ನಗರ ನಿವಾಸಿಗಳಾದ ಮಹಮ್ಮದ್ ಅಜ್ಮಲ್, ಶಂಷೀರ್‌ ಗಾಯಗೊಂಡವರು.

ಮದನಿನಗರ ಸಮೀಪ ಕಾರು ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತಕ್ಕೆ ಪ್ರತಿಯಾಗಿ ಕೇರಳದ ನೋಂದಣಿ ಸಂಖ್ಯೆ ಹೊಂದಿದ್ದ ಕಾರಿನಲ್ಲಿ ಬಂದಿದ್ದ ನಾಲ್ವರ ತಂಡವು, ಅಪಘಾತವಾಗಿದ್ದ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿತ್ತು. ಇದೇ ವೇಳೆ ಮೋದಿ ರ‍್ಯಾಲಿಯಿಂದ ವಾಪಸ್‌ ಆಗುತ್ತಿದ್ದ ಬಸ್‌ನಲ್ಲಿದ್ದ ಯುವಕರು ಗಲಾಟೆ ಬಗ್ಗೆ ಪ್ರಶ್ನಿಸಿದ್ದರು. ಈ ವೇಳೆ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದೆ. ಇನ್ನೊಂದು ತಂಡದವರು ಬಸ್‌ನ ಒಳಗಡೆ ಇದ್ದ ಮಹಿಳೆಯರ ಮೇಲೂ ಹಲ್ಲೆ ಮಾಡಿದ್ದಾರೆ. ಬಳಿಕ ಬಸ್‌, ಕಾರ್ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಗಾಜಿಗೆ ಹಾನಿ ಆಗಿದೆ. ಘಟನೆಯಿಂದ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿಗಳ ಬಂಧನಕ್ಕೆ ಒತ್ತಾಯ: ಕೃತ್ಯ ಖಂಡಿಸಿ 400ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಹಾಗೂ ಇಬ್ಬರು ಶಾಸಕರು ಸೇರಿ ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿದರು. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು. ಶಾಸಕ ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ಹಾಗೂ ಸ್ಥಳೀಯ ಮುಖಂಡರಾದ ಸಂತೋಷ್ ರೈ ಬೋಳಿಯಾರ್ ಪ್ರತಿಭಟನಾಕಾರರನ್ನು ಸಮಾಧಾನಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬಳಿಕ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಹೇಳಿದ ಮೇಲೆ ಪ್ರತಿಭಟನಾನಿರತರು ಹೋರಾಟ ಕೈ ಬಿಟ್ಟರು.

ಇಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಕೆಲವರು ಪರಾರಿಯಾಗಿದ್ದಾರೆ. ಅವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು’ ಎಂದು ಕಮಿಷನರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT