ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿ ವಿರುದ್ಧ ಅಧಿಕಾರಿ ದಾಖಲಿಸಿದ್ದ ಹನಿಟ್ರ್ಯಾ‍‍ಪ್ ಪ್ರಕರಣಲ್ಲಿ ‘ಬಿ ರಿಪೋರ್ಟ್‌’

Published 19 ಜೂನ್ 2023, 9:39 IST
Last Updated 19 ಜೂನ್ 2023, 9:39 IST
ಅಕ್ಷರ ಗಾತ್ರ

ಬೆಳಗಾವಿ: ತೋಟಗಾರಿಕಾ ಇಲಾಖೆಯ ಖಾನಾಪುರ ಸಸ್ಯಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಅವರು ಯುವತಿಯೊಬ್ಬರ ವಿರುದ್ಧ ನೀಡಿದ್ದ ‘ಹನಿಟ್ರ್ಯಾಪ್‌’ ಪ್ರಕಣದ ಬಗ್ಗೆ ಪೊಲೀಸರು ‘ಬಿ ರಿಪೋರ್ಟ್‌’ ಸಲ್ಲಿಸಿದ್ದಾರೆ.

ರಾಜಕುಮಾರ ಇಲ್ಲಿನ ಎಪಿಎಂಎಸಿ ಠಾಣೆಯಲ್ಲಿ 2022ರ ಜುಲೈ 18ರಂದು ದೂರು ದಾಖಲಿಸಿದ್ದರು. 11 ತಿಂಗಳವರೆಗೆ ತನಿಖೆ ನಡೆಸಿದ ಪಿಎಸ್‌ಐ ಮಂಜುನಾಥ ಭಜಂತ್ರಿ ಅವರು, ‘ಸಾಕ್ಷ್ಯಾಧಾರಗಳ ಕೊರತೆ ಇದೆ’ ಎಂದು ಪರಿಗಣಿಸಿ ಇದೇ ಜೂನ್‌ 14ರಂದು ಬಿ ರಿಪೋರ್ಟ್‌ ಹಾಜರುಪಡಿಸಿದ್ದಾರೆ.

‘ಬೆಂಗಳೂರಿನಲ್ಲಿ ಎನ್‌ಜಿಒ ಹೊಂದಿರುವ ಯುವತಿ ನನ್ನೊಂದಿಗೆ ಆತ್ಮೀಯತೆ ಹೊಂದಿದ್ದರು. ನನ್ನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದರು. ನಮ್ಮಿಬ್ಬರ ಖಾಸಗಿತನದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಹಣಕ್ಕಾಗಿ ‘ಬ್ಲ್ಯಾಕ್‌ಮೇಲ್‌’ ಮಾಡುವ ಸಾಧ್ಯತೆ ಇದೆ. ಇದೊಂದು ‘ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವ ಹುನ್ನಾರ’ ಎಂದು ರಾಜಕುಮಾರ ಟಾಕಳೆ ಪ್ರಕರಣ ದಾಖಲಿಸಿದ್ದರು.

ಈ ಬಗ್ಗೆ ತನಿಖೆ ಕೈಗೊಂಡ ಎಪಿಎಂಸಿ ಪೊಲೀಸರು, ರಾಜಕುಮಾರಗೆ ಪದೇಪದೇ ನೋಟಿಸ್‌ ನೀಡಿ ಸಾಕ್ಷ್ಯಗಳನ್ನು ಒದಗಿಸಬೇಕು ಎಂದು ಕೇಳಿದ್ದರು. ಆದರೆ, ತನ್ನ ಮೊಬೈಲ್‌ ಕಳೆದುಹೋಗಿದೆ ಎಂದು ದೂರುದಾರ ಸುಳ್ಳು ಹೇಳಿದ್ದರು. ಅಲ್ಲದೇ, ಯುವತಿ ಹಣದ ಬೇಡಿಕೆ ಇಟ್ಟ ಬಗ್ಗೆ, ಬ್ಲ್ಯಾಕ್‌ಮೇಲ್‌ ಮಾಡಿದ ಬಗ್ಗೆ ಕೂಡ ದಾಖಲೆ ಒದಗಿಸಲಿಲ್ಲ. ಯುವತಿಯೇ ತನ್ನ ಜನ್ಮದಿನ ಆಚರಣೆಗಾಗಿ ಬೆಳಗಾವಿಯ ಹೋಟೆಲ್‌ವೊಂದರಲ್ಲಿ ರೂಮು ಬುಕ್‌ ಮಾಡಿದ್ದಳು. ಅಲ್ಲಿ ನಾವಿಬ್ಬರೂ ಖಾಸಗಿಯಾಗಿ ಬೆರೆತಿದ್ದೇವು ಎಂದು ದೂರಿನಲ್ಲಿ ತಿಳಿಸಿದ್ದರು. ಆದರೆ, ತನಿಖೆ ಮಾಡಲಾಗಿ ದೂರುದಾರನೇ ಈ ರೂಮು ಬುಕ್‌ ಮಾಡಿದ್ದು ಗೊತ್ತಾಗಿದೆ. ಹಾಗಾಗಿ, ಇದೊಂದು ಸುಳ್ಳು ಪ್ರಕರಣ, ತಪ್ಪು ತಿಳಿವಳಿಕೆ, ಕಾನೂನಿನ ತಪ್ಪು ಗ್ರಹಿಕೆ’ ಎಂದು ತನಿಖಾಧಿಕಾರಿ ವರದಿಯಲ್ಲಿ ನಮೂದಿಸಿದ್ದಾರೆ.

ಈ ಬಗ್ಗೆ ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತ ಯುವತಿ, ‘ವಿಳಂಬವಾದರೂ ಸತ್ಯ ಹೊರಗೆ ಬಂದಿದೆ. ಈ ಪ್ರಕರಣದಲ್ಲಿ ಒಂದು ಭಾಗ ನನಗೆ ನ್ಯಾಯ ಸಿಕ್ಕಿದೆ. ಹೆಣ್ಣುಮಗಳ ಜೀವನದ ಜತೆ ಆಟವಾಡಿ, ಖಾಸಗಿತನಕ್ಕೆ ಧಕ್ಕೆ ತಂದ ಆರೋಪಿಯನ್ನು ಜೈಲಿಗೆ ಕಳುಹಿಸುವವರೆಗೆ ಹೋರಾಡುತ್ತೇನೆ’ ಎಂದರು.

‘ರಾಜಕುಮಾರ ಟಾಕಳೆ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದೇನೆ. ಅದು ಚಾರ್ಜ್‌ಶೀಟ್‌ ಕೂಡ ಸಲ್ಲಿಕೆಯಾಗಿದೆ. ಆರೋಪಿ ನಮ್ಮಿಬ್ಬರ ಖಾಸಗಿತನದ ವಿಡಿಯೊಗಳನ್ನು ತನ್ನ ಮೊಬೈಲ್‌ನಲ್ಲೇ ಚಿತ್ರೀಕರಿಸಿಕೊಂಡಿದ್ದ. ಅದರಲ್ಲಿ ತನ್ನ ಮುಖ ಕಾಣಿಸದಂತೆ, ನಾನು ಮಾತ್ರ ಕಾಣುವಂತೆ ಚಿತ್ರೀಕರಿಸಿದ್ದ. ಇದು ನಂಬಿಸಿ ಮಾಡಿದ ಮೋಸ. ಅಲ್ಲದೇ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟು ನನ್ನ ಖಾಸಗಿ ಬದುಕಿಗೂ ಧಕ್ಕೆ ತಂದಿದ್ದಾನೆ’ ಎಂದೂ ಯುವತಿ ಆರೋಪಿಸಿದರು.

‘ಬೆಂಗಳೂರಿನ ಕುಮಾರಕೃಪಾ ಎಂಬ ಸರ್ಕಾರಿ ಅತಿಥಿಗೃಹವನ್ನೇ ಆರೋ‍ಪಿ ಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ಮಾತ್ರವಲ್ಲ; ನನ್ನ ಹಾಗೆ ಇನ್ನೂ ಹಲವು ಹೆಣ್ಣುಮಕ್ಕಳಿಗೆ ಇದೇ ರೀತಿ ಮೋಸ ಮಾಡಿದ ಅನುಮಾನಗಳಿವೆ. ಆರೋಪಿ ಮನೆಯವರೂ ಇದಕ್ಕೆ ಸಹಕರಿಸಿರಬಹುದು. ಈ ದೃಷ್ಟಿಯಲ್ಲೂ ಬೆಳಗಾವಿ ಪೊಲೀಸರು ತನಿಖೆ ಮಾಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT