ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಣಿಯದ ಖಾತೆ ಬೇಗುದಿ: ನಾಲ್ವರು ಸಚಿವರ ಖಾತೆ ಮರು ಹಂಚಿಕೆ

ಆಕ್ರೋಶ ಹೊರ ಹಾಕಿದ ಸುಧಾಕರ್‌
Last Updated 22 ಜನವರಿ 2021, 20:00 IST
ಅಕ್ಷರ ಗಾತ್ರ

ಬೆಂಗಳೂರು: ಖಾತೆಗಳ ಹಂಚಿಕೆಯ ಅಸಮಾಧಾನ ಸ್ಫೋಟದ ಬೆನ್ನಲ್ಲೇ ಅದಕ್ಕೆ ತೇಪೆ ಹಚ್ಚಲು ಮುಂದಾದ ಮುಖ್ಯಮಂತ್ರಿ ಯಡಿಯೂರಪ್ಪ, ನಾಲ್ವರು ಸಚಿವರ ಖಾತೆಗಳನ್ನು ಶುಕ್ರವಾರ ಬದಲಾವಣೆ ಮಾಡಿದ್ದಾರೆ. ಆದರೆ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಆರೋಗ್ಯ ಸಚಿವ ಡಾ.ಸುಧಾಕರ್‌ ಮೊದಲ ಬಾರಿಗೆ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದಾರೆ.

ಗುರುವಾರ ಕೊಟ್ಟ ಖಾತೆಯನ್ನು ಒಂದೇ ದಿನದಲ್ಲಿ ಬದಲಿಸಿದ್ದಕ್ಕೆ ಸಚಿವ ಆರ್‌.ಶಂಕರ್‌ ಮುನಿಸಿಕೊಂಡಿದ್ದಾರೆ. ಸಣ್ಣ ನೀರಾವರಿ ಖಾತೆ ಬದಲಿಸಿ ವೈದ್ಯಕೀಯ ಶಿಕ್ಷಣ ಕೊಟ್ಟ ಕಾರಣಕ್ಕೆ ಸಿಟ್ಟಾಗಿದ್ದ ಜೆ.ಸಿ.ಮಾಧುಸ್ವಾಮಿ ರಾಜೀನಾಮೆ ನೀಡುವ ಮನಸ್ಥಿತಿಯಿಂದ ಹೊರಗೆ ಬಂದಿಲ್ಲ. ಖಾತೆ ಮರು ಹಂಚಿಕೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೌದಾ ಯಾವುದು ತೆಗೆದು ಯಾವುದು ಕೊಟ್ಟಿದ್ದಾರೆ. ನನಗೆ ಗೊತ್ತೇ ಇಲ್ಲ. ಖಾತೆ ಬದಲಾಗಿದ್ದಕ್ಕೆ ಬೇಸರ ಆಗಿರುವುದು ಹೌದು. ಕೆಲವು ಪ್ರಮುಖ ಖಾತೆಗಳು ಮುಖ್ಯಮಂತ್ರಿ ಬಳಿ ಇದ್ದರೆ ಅವರಿಗೆ ಒತ್ತಡ ಹೆಚ್ಚಾಗಲಿದೆ. ನಮ್ಮ ಮುಖ್ಯಮಂತ್ರಿಗಳು ತಾವೇ ನಿಭಾಯಿಸುವುದಾಗಿ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಅದು ಅವರ ಪರಮಾಧಿಕಾರ’ ಎಂದೂ ಪ್ರತಿಕ್ರಿಯಿಸಿದರು.

ಖಾತೆ ಹಂಚಿಕೆ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಡಾ.ಕೆ.ಸುಧಾಕರ್‌, ‘ನಾವು ಬಿಜೆಪಿಗೆ ಸೇರುವಾಗ ಕೊಟ್ಟಿದ್ದ ಮಾತನ್ನು ಈಗ ಉಳಿಸಿಕೊಂಡಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

‘ಬಿಜೆಪಿಗೆ ಬರುವಾಗ ಏನೆಲ್ಲ ಮಾತುಕತೆ ನಡೆದಿತ್ತು ಎಂಬುದು ನನಗೆ ಗೊತ್ತಿದೆ. ಆಗ ನಡೆದ ಮಾತುಕತೆಯ ಪ್ರಕಾರವೇ ನಡೆದುಕೊಳ್ಳಬೇಕು. ಪಕ್ಷದ ಶಿಸ್ತೂ ಮುಖ್ಯ. ಹೀಗಾಗಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಬಸವರಾಜ ಬೊಮ್ಮಾಯಿ ಜತೆ ಈಗಾಗಲೇ ಮಾತನಾಡಿದ್ದೇನೆ’ ಎಂದು ಹೇಳಿದರು.

‘ನಾವೆಲ್ಲರೂ ಆತ್ಮೀಯರು. ಮುಖ್ಯಮಂತ್ರಿಯವರ ಕೈ ಬಲಪಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಒಂದು ರೀತಿಯಲ್ಲಿ ರಾಜಕೀಯ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಂಡು ಶೇ 3 ರಷ್ಟು ಮತ ಇದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 35 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬಂದಿದ್ದೇನೆ. ಎಂ.ಟಿ.ಬಿ ನಾಗರಾಜು ಅವರು ಹಿಂದೆ (ಮೈತ್ರಿ ಸರ್ಕಾರದಲ್ಲಿ) ವಸತಿ ಸಚಿವರಾಗಿದ್ದರು. ನನ್ನ ಮಾತು ಕೇಳಿ ರಾಜಿನಾಮೆ ಕೊಟ್ಟು ಬಂದರು. ಎಲ್ಲ ಸಚಿವರ ರಕ್ಷಣೆ ಕೂಡ ನನಗೆ ಮುಖ್ಯ. ಖಾತೆಗಳ ಹಂಚಿಕೆ ಮುಖ್ಯಮಂತ್ರಿಯವರ ಪರಮಾಧಿಕಾರ. ಅವರೇನು ಮಾಡಬೇಕಿತ್ತು ಎಂದು ಹೇಳಲು ಸಾಧ್ಯವಿಲ್ಲ. ಅವರ ತಂಡ ಸದಸ್ಯನಾಗಿ ಅವರಿಗೆ, ಸರ್ಕಾರಕ್ಕೆ, ಪಕ್ಷಕ್ಕೆ ಒಳ್ಳೆಯ ಹೆಸರು ತರಲು ಆತ್ಮವಂಚನೆ ಮಾಡಿಕೊಳ್ಳದೆ ಕೆಲಸ ಮಾಡುತ್ತಿದ್ದೇನೆ’ ಎಂದರು.

‘ಆರೋಗ್ಯ ಮತ್ತು ವೈದ್ಯಕೀಯ ಶಿ‌ಕ್ಷಣ ಒಬ್ಬರ ಬಳಿಯೇ ಇದ್ದರೆ ಸೂಕ್ತ ಎಂಬ ಕಾರಣಕ್ಕೆ ನನಗೆ ಎರಡೂ ಖಾತೆಗಳನ್ನು ನೀಡಲಾಗಿತ್ತು. ಕೋವಿಡ್‌ ನಿಭಾಯಿಸಲು ಸಹಾಯಕವಾಗಿತ್ತು. ಎರಡು ಇಲಾಖೆಗಳ ಮಧ್ಯೆ ಸಮನ್ವಯ ಅಗತ್ಯವಿತ್ತು. ನಾನು ಯಾವುದೇ ಒಂದು ಖಾತೆಗೆ ಅಂಟಿಕೊಂಡು ಕುಳಿತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಸುಧಾಕರ್‌ ಪ್ರತಿಕ್ರಿಯಿಸಿದರು.

ಖಾತೆ ಮರು ಹಂಚಿಕೆ:ಖಾತೆ ಹಂಚಿಕೆಯಿಂದ ಉಂಟಾದ ಅಸಮಾಧಾನ ಸರಿಪಡಿಸಲು ನಾಲ್ವರು ಸಚಿವರಿಗೆ ಖಾತೆ
ಗಳ ಮರು ಹಂಚಿಕೆ ಮಾಡಲಾಗಿದೆ. ಜೆ.ಸಿ.ಮಾಧುಸ್ವಾಮಿ ಅವರಿಗೆ ಗುರುವಾರ ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ–ಸಂಸ್ಕೃತಿ ಖಾತೆ ನೀಡಲಾಗಿತ್ತು. ಅದರಲ್ಲಿ ಕನ್ನಡ ಮತ್ತು ಸಂಸ್ಕೃತಿಯನ್ನು ಹಿಂದಕ್ಕೆ ಪಡೆದು ಹೆಚ್ಚುವರಿಯಾಗಿ ಹಜ್‌ ಮತ್ತು ವಕ್ಫ್‌ ಖಾತೆ ನೀಡಲಾಗಿದೆ. ಅರಣ್ಯ ಸಚಿವ ಅರವಿಂದ ಲಿಂಬಾವಳಿಯವರಿಗೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಹೆಚ್ಚುವರಿಯಾಗಿ ನೀಡಲಾಗಿದೆ.

ತೋಟಗಾರಿಕೆ ಮತ್ತು ಸಕ್ಕರೆ ಖಾತೆ ಪಡೆದಿದ್ದ ಕೆ.ಗೋಪಾಲಯ್ಯ ಅವರಿಗೆ ಅಬಕಾರಿ ನೀಡಲಾಗಿದೆ. ಅಬಕಾರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ಎಂ.ಟಿ.ಬಿ ನಾಗರಾಜು ಅವರಿಗೆ ಪೌರಾಡಳಿತ ಮತ್ತು ಸಕ್ಕರೆ ಖಾತೆ ನೀಡಲಾಗಿದೆ. ಆರ್‌.ಶಂಕರ್‌ ಅವರಿಗೆ ತೋಟಗಾರಿಕೆ ಜತೆಗೆ ರೇಷ್ಮೆ, ಕೆ.ಸಿ.ನಾರಾಯಣಗೌಡ ಅವರಿಗೆ ಹೆಚ್ಚುವರಿಯಾಗಿ ಯೋಜನೆ, ಅಂಕಿಸಂಖ್ಯೆ ಖಾತೆ ನೀಡಲಾಗಿದೆ.

ವಲಸಿಗರ ‘ರಾಜಕೀಯ ಸಮಾಧಿ’: ಡಿಕೆಶಿ

‘ನೀವೆಲ್ಲ ರಾಜಕೀಯ ಸಮಾಧಿ ಆಗುತ್ತೀರಿ ಎಂದು ಮೊದಲೇ ಹೇಳಿದ್ದೆ. ಅದೇ ರೀತಿ ಬಿಜೆಪಿಯವರು ವಲಸಿಗರನ್ನು ರಾಜಕೀಯವಾಗಿ ಸಮಾಧಿ ಮಾಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ.

‘ವಲಸಿಗರನ್ನು ಬಿಜೆಪಿಯವರು ಬಳಸಿಕೊಂಡು ಬಿಸಾಡಿದ್ದಾರೆ. ಈಗ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಈ ಸರ್ಕಾರ ಐಸಿಯುನಲ್ಲಿದೆ’ ಎಂದೂ ಹೇಳಿದರು.

ಖಾಸಗಿ ಕಾರಿನಲ್ಲಿ ಓಡಾಡಿದ ಶಂಕರ್‌

ತಮಗೆ ನೀಡಿದ ಖಾತೆಯನ್ನು ಬದಲಿಸಿದ ಕಾರಣಕ್ಕೆ ಸಚಿವ ಆರ್‌.ಶಂಕರ್‌ ಮುನಿಸಿಕೊಂಡಿದ್ದಾರೆ. ಅಲ್ಲದೆ, ಸರ್ಕಾರಿ ಕಾರನ್ನು ಬಿಟ್ಟು ಇಡೀ ದಿನ ಖಾಸಗಿ ಕಾರಿನಲ್ಲಿ ಓಡಾಡಿದರು.

ಗುರುವಾರ ಶಂಕರ್‌ ಅವರಿಗೆ ಪೌರಾಡಳಿತ ಮತ್ತು ರೇಷ್ಮೆ ಖಾತೆ ನೀಡಲಾಗಿತ್ತು. ಆದರೆ ಶುಕ್ರವಾರ ಪೌರಾಡಳಿತ ಹಿಂದಕ್ಕೆ ಪಡೆದು, ತೋಟಗಾರಿಕೆ ಖಾತೆ ಹಂಚಿಕೆ ಮಾಡಲಾಗಿದೆ. ಇದರಿಂದ ತೀವ್ರ ಬೇಸರಗೊಂಡ ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಈ ಹಿಂದೆ ನೀಡಿದ್ದ ಖಾತೆಯನ್ನೇ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT