ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕೋಳಿ ಸಾಕಣೆ: ಕಾರ್ಪೊರೇಟ್‌ ಪರ ನಿಯಮ’

Last Updated 17 ಮೇ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋಳಿ ಸಾಕಣೆಯನ್ನು (ಕುಕ್ಕುಟ) ‘ಕೃಷಿ’ ಎಂದು ಪರಿಗಣಿಸುವುದು ಸ್ವಾಗತಾರ್ಹ. ಆದರೆ, ಕರಡು ರಚನಾ ಸಮಿತಿಯ ಅಂಶಗಳು ರೈತರ ಅನುಕೂಲಕ್ಕಿಂತ ಕಾರ್ಪೊರೇಟ್ ಕಂಪನಿಗಳ ಪರವಾಗಿವೆ’ ಎಂದುಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಮಲ್ಲಾಪುರ ದೇವರಾಜ, ‘ಕೋಳಿ ಸಾಕಣೆಯನ್ನು ಕೃಷಿಯನ್ನಾಗಿ ಪರಿಗಣಿಸಿ, ಸರ್ಕಾರದ ಸೌಲಭ್ಯಗಳು ದೊರೆಯಲು ರೈತರಿಗೆ ಅನುಕೂಲವಾಗುವ ಕರಡು ಸಿದ್ಧಪಡಿಸಲು ಪಶು, ಕಂದಾಯ, ಇಂಧನ, ಪಂಚಾಯತ್‌ ರಾಜ್‌, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿ ರಚಿಸಲಾಗಿದೆ’ ಎಂದರು.

‘ಸಮಿತಿ ಸಭೆಯಲ್ಲಿ ಚರ್ಚಿಸಿದ ಅಂಶಗಳನ್ನು ಗಮನಿಸಿದಾಗ ಕಾರ್ಪೊರೇಟ್ ಕಂಪನಿಗಳ ಪರವಾಗಿ ಕಾಯ್ದೆ ರೂಪಿಸುವ ಹುನ್ನಾರ ವ್ಯಕ್ತವಾಗಿದೆ. ಈ ಕಾಯ್ದೆ ಕೋಳಿ ಸಾಕಣೆ ಮಾಡುವಸ್ಥಳೀಯ ರೈತರಿಗೆ ಮುಳುವಾಗಲಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಸಮಿತಿಯಲ್ಲಿ ಕೋಳಿ ಸಾಕಣೆ ಮಾಡುವವರು ಅಥವಾ ರೈತ ಮುಖಂಡರೇ ಇಲ್ಲ. ಸಮಿತಿ ಸಭೆಗೆ ಕೋಳಿ ಸಾಕಣೆ ಮಾಡುವ ರೈತರ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳನ್ನೂ ಕೇಳಿಲ್ಲ’ ಎಂದು ದೂರಿದರು.

ಅಧ್ಯಕ್ಷ ರಂಗಪ್ಪ,‘ಹೊಸ ನಿಯಮದ ಪ್ರಕಾರ ಗರಿಷ್ಠ 10 ಎಕರೆ ಜಾಗದಲ್ಲಿ ಕೋಳಿ ಶೆಡ್ ನಿರ್ಮಿಸಲು ಸುಮಾರು ₹2.5 ಕೋಟಿ ಹಣ ಬೇಕು. ಸಾಮಾನ್ಯ ರೈತ ಇಷ್ಟು ಬಂಡವಾಳ ಹಾಕಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಸರ್ಕಾರದ ಮಟ್ಟದಲ್ಲಿ ಸಮಿತಿ ರಚಿಸಬೇಕು. ಅರ್ಹ ಕೋಳಿ ಸಾಕಣೆ ಮಾಡುವ ರೈತರನ್ನು ಸಮಿತಿಗೆ ಸೇರ್ಪಡೆ ಮಾಡಬೇಕು. ಕರಡು ಸಿದ್ಧಪಡಿಸುವ ವೇಳೆ ರೈತರ ಸಲಹೆಗಳನ್ನು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT